Site icon Vistara News

Madras Music Academy: ಸಂಗೀತ ಕಲಾನಿಧಿ ಪ್ರಶಸ್ತಿ ಪುರಸ್ಕೃತ ಟಿ.ಎಂ.ಕೃಷ್ಣ ವಿರುದ್ಧ ಕಲಾವಿದರ ಆಕ್ರೋಶ; ಏನಿದು ವಿವಾದ?

tn

tn

ಚೆನ್ನೈ: ಮದ್ರಾಸ್ ಮ್ಯೂಸಿಕ್ ಅಕಾಡೆಮಿ (Madras Music Academy)ಯು ಗಾಯಕ ಟಿ.ಎಂ.ಕೃಷ್ಣ ಅವರಿಗೆ ಇತ್ತೀಚೆಗೆ ಸಂಗೀತ ಕಲಾನಿಧಿ ಪ್ರಶಸ್ತಿ ಪ್ರದಾನ ಮಾಡಿದೆ. ಸದ್ಯ ಈ ವಿಚಾರ ವಿವಾದ ಹುಟ್ಟು ಹಾಕಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿಯರಾದ ರಂಜನಿ-ಗಾಯತ್ರಿ ಮತ್ತು ಹರಿಕಥಾ ವಿದ್ವಾಂಸ ದುಷ್ಯಂತ್ ಶ್ರೀಧರ್ ಮತ್ತಿತರರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಜತೆಗೆ ಕೃಷ್ಣ ಅವರಿಗೆ ಸಂಗೀತ ಅಕಾಡೆಮಿ ಸಮ್ಮೇಳನದ ಅಧ್ಯಕ್ಷತೆ ನೀಡಿರುವುದಕ್ಕೂ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ರಂಜನಿ-ಗಾಯತ್ರಿ ಮತ್ತು ದುಷ್ಯಂತ್ ಶ್ರೀಧರ್ ಅವರು 2024ರ ಸಂಗೀತ ಅಕಾಡೆಮಿ ಸಮ್ಮೇಳನ ಬಹಿಷ್ಕರಿಸಿದ್ದಾರೆ.

ತೀವ್ರ ಆಕ್ರೋಶ

ಮೂರು ದಿನಗಳ ಹಿಂದಷ್ಟೇ ಟಿ.ಎಂ.ಕೃಷ್ಣ ಅವರಿಗೆ ಸಂಗೀತ ಅಕಾಡೆಮಿಯು ಸಂಗೀತ ಕಲಾನಿಧಿ ಪ್ರಶಸ್ತಿ ಪ್ರದಾನ ಮಾಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿರುವ ರಂಜನಿ ಮತ್ತು ಗಾಯತ್ರಿ, ʼʼಟಿ.ಎಂ.ಕೃಷ್ಣ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವುದು ನೈತಿಕ ಅಧಃಪತನಕ್ಕೆ ಸಾಕ್ಷಿ. ಹೀಗಾಗಿ ಈ ವರ್ಷ ಡಿಸೆಂಬರ್ 25ರಂದು ನಡೆಯಲಿರುವ ಸಮ್ಮೇಳನದ ಸಂಗೀತ ಕಛೇರಿಯಲ್ಲಿ ನಾವು ಭಾಗವಹಿಸುವುದಿಲ್ಲʼʼ ಎಂದು ಬರೆದುಕೊಂಡಿದ್ದಾರೆ. ಸಂಗೀತ ಅಕಾಡೆಮಿಯ ಈ ಸಮ್ಮೇಳನ 2024ರ ಡಿಸೆಂಬರ್‌ 15ರಿಂದ 2025ರ ಜನವರಿ 1ರ ತನಕ ನಡೆಯಲಿದೆ.

ಕಾರಣ ಏನು?

“ಅವರು (ಟಿ.ಎಂ.ಕೃಷ್ಣ ) ಕರ್ನಾಟಕ ಸಂಗೀತ ಲೋಕಕ್ಕೆ ಅಪಾರ ಹಾನಿ ಮಾಡಿದ್ದಾರೆ. ಸಂಗೀತ ಲೋಕದ ಅತ್ಯಂತ ಗೌರವಾನ್ವಿತ ಮಹನೀಯರಾದ ತ್ಯಾಗರಾಜ ಮತ್ತು ಸಂಗೀತ ಲೋಕದ ದಂತಕತೆ ಎಂ.ಎಸ್.ಸುಬ್ಬುಲಕ್ಷ್ಮೀ ಅವರನ್ನು ಅವಮಾನಿಸಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಈ ಸಮುದಾಯದ ಭಾವನೆಗಳಗೆ ಧಕ್ಕೆ ತಂದಿದ್ದಾರೆʼʼ ಎಂದು ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ರಂಜನಿ ಮತ್ತು ಗಾಯತ್ರಿ ತಿಳಿಸಿದ್ದಾರೆ.

ʼʼಬ್ರಾಹ್ಮಣರ ಹತ್ಯಾಕಾಂಡವನ್ನು ಬಹಿರಂಗವಾಗಿ ಪ್ರಸ್ತಾಪಿಸಿದ ಪೆರಿಯಾರ್ ಅವರಂತಹ ವ್ಯಕ್ತಿಯನ್ನು ಟಿ.ಎಂ.ಕೃಷ್ಣ ಅವರು ವೈಭವೀಕರಿಸಿದ್ದಾರೆ. ಈ ಅಂಶವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಜತೆಗೆ ಅವರು ಸಮುದಾಯದ ಪ್ರತಿಯೊಬ್ಬ ಮಹಿಳೆಯನ್ನು ಪದೇ ಪದ ಅಶ್ಲೀಲವಾಗಿ ನಿಂದಿಸಿದ್ದಾರೆʼʼ ಎಂದು ಆರೋಪಿಸಿದ್ದಾರೆ. ಮುಂಬೈ ಮೂಲದ ಸಹೋದರಿಯರಾದ ರಂಜನಿ-ಗಾಯತ್ರಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ದುಷ್ಯಂತ್ ಶ್ರೀಧರ್ ಹೇಳಿದ್ದೇನು?

ದುಷ್ಯಂತ್ ಶ್ರೀಧರ್ ಅವರು ಸಂಗೀತ ಅಕಾಡೆಮಿ ಅಧ್ಯಕ್ಷರಿಗೆ ಪತ್ರ ಬರೆದು ಟಿ.ಎಂ.ಕೃಷ್ಣ ಅವರಿಗೆ ಪ್ರಶಸ್ತಿ ನೀಡಿದ ಬಳಿಕ ನಾನು ಕಾರ್ಯಕ್ರಮ ನೀಡಿದರೆ ಗುರುಗಳಿಗೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಮುಂದಿನ ವರ್ಷ ಜನವರಿ 1ರಂದು ನಡೆಯಲಿರುವ ಕಾರ್ಯಕ್ರಮದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಜತೆಗೆ ಖ್ಯಾತ ಗಾಯಕಿ ಮತ್ತು ಹರಿಕಥಾ ನಿರೂಪಕಿ ವಿಶಾಖ ಹರಿ ಅವರು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ “ಟಿ.ಎಂ.ಕೃಷ್ಣ ಈ ಹಿಂದೆ ಸಾಕಷ್ಟು ಬಾರಿ ನಿಂದನಾತ್ಮಕ ಮಾತುಗಳನ್ನು ಆಡಿದ್ದಾರೆ. ಹಲವರ ಭಾವನೆಗಳಿಗೆ ತೀವ್ರವಾಗಿ ಮತ್ತು ಉದ್ದೇಶಪೂರ್ವಕವಾಗಿ ಘಾಸಿ ಉಂಟು ಮಾಡಿದ್ದಾರೆʼʼ ಎಂದು ಹೇಳಿದ್ದಾರೆ.

ಈ ಮಧ್ಯೆ ಹಿನ್ನಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಟಿ.ಎಂ.ಕೃಷ್ಣ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಪಡೆದಿದ್ದಕ್ಕಾಗಿ ಅಭಿನಂದಿಸಿದ್ದಾರೆ. ಜತೆಗೆ ಮದ್ರಾಸ್‌ ಸಂಗೀತ ಅಕಾಡೆಮಿ ಅಧ್ಯಕ್ಷ ಮುರುಳಿ ಅವರು ರಂಜನಿ ಮತ್ತು ಗಾಯತ್ರಿ ಅವರ ನಡೆಯನ್ನು ಟೀಕಿಸಿದ್ದಾರೆ. ಒಟ್ಟಿನಲ್ಲಿ ಈ ಬಗ್ಗೆ ಬಹುದೊಡ್ಡ ಚರ್ಚಯೇ ನಡೆದಿದೆ.

ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ನ ವಿವರಗಳನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Exit mobile version