Site icon Vistara News

Maha politics | ಮುಖ್ಯಮಂತ್ರಿಯಾಗಿ ಶಿಂಧೆ ಆಯ್ಕೆ; ಕುಣಿದು ಕುಪ್ಪಳಿಸಿದ ಬಂಡಾಯ ಶಾಸಕರು!

shiva sena

ಬೆಳಗಾವಿ: ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಆಗಿ ಏಕನಾಥ ಶಿಂಧೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿಯ ನಾಯಕ ದೇವೇಂದ್ರ ಫಡ್ನವಿಸ್‌ ಮುಂಬಯಿಯಲ್ಲಿ ಪ್ರಕಟಿಸುತ್ತಿದ್ದಂತೆಯೇ ಗೋವಾದ ಹೋಟೆಲ್‌ನಲ್ಲಿ ಬೀಡು ಬಿಟ್ಟಿರುವ ಶಿವಸೇನೆಯ ಬಂಡಾಯ ಶಾಸರಕು ಕುಣಿದು ಕುಪ್ಪಳಿಸಿದ್ದಾರೆ.

ಮಹಾರಾಷ್ಟ ರಾಜ್ಯದ ರಾಜಕೀಯ ಬೆಳವಣಿಗೆಗೆ ಫಡ್ನವಿಸ್‌ ಅಚ್ಚರಿಯ ತಿರುವು ನೀಡಿದ್ದು, ಈ ಸುದ್ದಿ ಟಿವಿಯಲ್ಲಿ ಬರುತ್ತಿದ್ದಂತೆಯೇ ಒಂದೆಡೆ ಸೇರಿದ ಶಾಸಕರು ಸಂಭ್ರಮ ಪಟ್ಟರು. ಕೆಲವರು ಕುಣಿದು ಕುಪ್ಪಳಿಸಿದರೆ, ಇನ್ನು ಕೆಲವರು ಮೇಜನ್ನೇರಿ ಡ್ಯಾನ್ಸ್‌ ಮಾಡಿದರು.

ನಂತರ ಹೋಟೆಲ್‌ನಿಂದ ಹೊರ ಬಂದು ಬೀದಿಯಲ್ಲಿ ನಿಂತ ಏಕನಾಥ ಶಿಂದೆ ಪರವಾಗಿ ಘೋಷಣೆ ಕೂಗಿದರು. ಪ್ರಧಾನಿ ಮೋದಿ ಪರವಾಗಿಯೂ ಘೋಷಣೆ ಕೇಳಿಬಂದವು. ತುಂತುರು ಮಳೆಯ ನಡುವೆಯೂ ಅವರ ಸಂಭ್ರಮಾಚರಣೆ ನಡೆಯಿತು.

ಉದ್ಧವ್‌ ಠಾಕ್ರೆ ಮತ್ತು ಮಹಾ ವಿಕಾಸ್‌ ಅಘಾಡಿ ಮೈತ್ರಿ ವಿರುದ್ಧ ಮುನಿಸಿಕೊಂಡು ಕಳೆದ ೧೦ ದಿನಗಳಿಂದಲೂ ರಾಜ್ಯವನ್ನೇ ಬಿಟ್ಟಿದ್ದ ಈ ಶಾಸಕರು ಶಿಂಧೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಶಿಂಧೆ ಇಂದು ರಾತ್ರಿ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಟಿವಿಯಲ್ಲಿಯೇ ಕಾರ್ಯಕ್ರಮ ನೋಡಲು ಸಿದ್ಧತೆ ಕೂಡ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ ಶಿಂಧೆ ಆಯ್ಕೆ ಅನಿರೀಕ್ಷಿತವಾಗಿದ್ದರೂ, ನಮಗೆ ಇದರಿಂದ ಬಹಳ ಸಂತೋಷವಾಗಿದೆ. ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ನೂತನ ನಾಯಕ ಶಿಂಧೆ ಸಮರ್ಥರಿದ್ದಾರೆ. ಅವರೇ ಮುಖ್ಯಮಂತ್ರಿಯಾಗುತ್ತಿರುವುದರಿಂದ ಆಗುತ್ತಿರುವ ಖುಷಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಾಗದು ಎಂದು ಶಾಸಕರೊಬ್ಬರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಗೋವಾದ ತಾಜ್‌ ರೆಸಿಡೆಂಟ್‌ ಹೋಟೆಲ್‌ನಲ್ಲಿ ಈ ಶಾಸಕರು ಉಳಿದುಕೊಂಡಿದ್ದು, ಬುಧವಾರ ರಾತ್ರಿ ಗುವಾಹಟಿಯಿಂದ ಅವರು ಇಲ್ಲಿಗೆ ಆಗಮಿಸಿದ್ದರು.

ಇದನ್ನೂ ಓದಿ| ಗಡಿ ಖ್ಯಾತೆಯ ಶಿಂಧೆ ಈಗ ಮಹಾ ಸಿಎಂ; ರಾಜ್ಯಕ್ಕೆ ಮತ್ತೆ ಕಾಟ ಕೊಡುತ್ತಾರಾ?

Exit mobile version