Site icon Vistara News

Maha politics: 15 ರೆಬೆಲ್‌ ಶಾಸಕರಿಗೆ ಕೇಂದ್ರದಿಂದ ವೈ ಕೆಟಗರಿ ಭದ್ರತೆ, ಯಾಕೆ ಈ ಸೆಕ್ಯುರಿಟಿ?

Shindhe Camp

ಮುಂಬಯಿ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರವು ಮಹಾರಾಷ್ಟ್ರ ಶಿವಸೇನೆಯ ಬಂಡಾಯ ಕೂಟದಲ್ಲಿರುವ ೧೫ ಮಂದಿ ಶಿವಸೇನಾ ಶಾಸಕರಿಗೆ ವೈ ಕೆಟಗರಿ ಭದ್ರತೆಯನ್ನು ಒದಗಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು, ಎರಡೂ ಬಣಗಳ ನಡುವಿನ ಬೆದರಿಕೆಗಳು, ಮನೆಗಳ ಮೇಲೆ ದಾಳಿ, ಶಿವಸೈನಿಕರು ಬೀದಿಗಿಳಿಯುತ್ತಿರುವ ಹಿನ್ನೆಲೆಯಲ್ಲಿ ಈ ಭದ್ರತೆಗೆ ಹೆಚ್ಚಿನ ಮಹತ್ವವಿದೆ. ಆದರೆ, ಕೇಂದ್ರ ಸರಕಾರ ಈ ಭದ್ರತಾ ವ್ಯವಸ್ಥೆ ಮಾಡಿರುವುದರ ಹಿಂದೆ ದೊಡ್ಡ ಮಟ್ಟದ ರಾಜಕೀಯ ತಂತ್ರಗಾರಿಕೆ (Maha politics) ಇರಬಹುದು ಎಂಬ ಮಾತೂ ಕೇಳಿಬರುತ್ತಿದೆ.
ಸದ್ಯ ಗುವಾಹಟಿಯ ಹೋಟೆಲ್‌ನಲ್ಲಿ ಶಿವಸೇನೆಯ ೪೦ ಮಂದಿ ಶಾಸಕರಿದ್ದಾರೆ. ಅವರ ಪೈಕಿ ೧೫ ಮಂದಿಗೆ ಈಗ ಭದ್ರತೆಯನ್ನು ನೀಡಲು ನಿರ್ಧರಿಸಲಾಗಿದೆ.

ಮುಂಬಯಿಗೆ ಬನ್ನಿ ಎಂಬ ಸವಾಲು
ಗುವಾಹಟಿಯಲ್ಲಿರುವ ನೀವು ಒಂದಲ್ಲ ಒಂದು ದಿನ ಮುಂಬಯಿಗೆ ಬರಲೇಬೇಕು. ಎಷ್ಟು ದಿನ ಅಲ್ಲಿ ಅಡಗಿಕೊಳ್ಳುತ್ತೀರಿ ಎಂಬ ಮಾತನ್ನು ಬೆದರಿಕೆ ಮಾದರಿಯಲ್ಲಿ ಆಡಿದ್ದರು ಶಿವಸೇನಾ ಸಂಸದ ಸಂಜಯ್‌ ರಾವತ್‌. ಅವರು ಈ ಹಿಂದೆ ಶಿವಸೈನಿಕರು ಬೀದಿ ಕಾಳಗಕ್ಕಿನ್ನೂ ಇಳಿದಿಲ್ಲ ಎಂದು ಹೇಳಿದ್ದರು. ಅದರ ಬೆನ್ನಿಗೇ ಇದನ್ನು ಕುಮ್ಮಕ್ಕಾಗಿ ಸ್ವೀಕರಿಸಿದ ಶಿವಸೈನಿಕರು ಕೆಲವೆಡೆ ದಾಳಿ ನಡೆಸಿದ್ದರು, ರೆಬೆಲ್‌ ಶಾಸಕರ ಭಾವಚಿತ್ರಗಳಿಗೆ ಹಾನಿ ಮಾಡಿದ್ದರು. ಈಗ ಒಂದೊಮ್ಮೆ ರೆಬೆಲ್‌ ಶಾಸಕರು ಮುಂಬಯಿಗೆ ಮರಳಿದರೆ ಅವರ ಜೀವಕ್ಕೆ ಅಪಾಯ ಉಂಟಾಗಬಹುದು ಎಂಬ ಕಾರಣಕ್ಕೆ ಕೇಂದ್ರ ಸರಕಾರ ಈ ಕ್ರಮ ಕೈಗೊಂಡಿತೆಂದು ಹೇಳಲಾಗುತ್ತಿದೆ.

ನಾಳೆ ಬರುತ್ತಾರಾ ೧೫ ಮಂದಿ ಶಾಸಕರು?
ಶಿವಸೇನೆಯ ಉದ್ಧವ್‌ ಠಾಕ್ರೆ ಬಣ ೧೬ ರೆಬೆಲ್‌ ಶಾಸಕರ ವಿರುದ್ಧ ಸಲ್ಲಿರುವ ಅನರ್ಹತೆ ಅರ್ಜಿ ಭಾರಿ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಸಂಬಂಧಿಸಿ ಡೆಪ್ಯುಟಿ ಸ್ಪೀಕರ್‌ ನರಹರಿ ಜೈರ್ವಾಲ್‌ ಅವರು ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದು, ಅದಕ್ಕೆ ಸೋಮವಾರ ಸಂಜೆ ೫.೩೦ರೊಳಗೆ ಉತ್ತರ ನೀಡಬೇಕಾಗಿದೆ.
ಒಂದು ಮೂಲದ ಪ್ರಕಾರ, ಏಕನಾಥ್‌ ಶಿಂಧೆ ಅವರೂ ಸೇರಿದಂತೆ ೧೫ ಶಾಸಕರು ನೇರವಾಗಿ ಮುಂಬಯಿಗೆ ಬಂದು ಡೆಪ್ಯುಟಿ ಸ್ಪೀಕರ್‌ ಅವರನ್ನು ಭೇಟಿ ಮಾಡಿ ತಮ್ಮ ಹೇಳಿಕೆಯನ್ನು ನೀಡಲಿದ್ದಾರೆ. ಹಾಗಾಗಿ ಈ ರೀತಿ ಬರುವಾಗ ಅವರಿಗೆ ಅಪಾಯ ಆಗಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರಕಾರ ಭದ್ರತೆ ಒದಗಿಸಿರುವ ಸಾಧ್ಯತೆ ಇದೆ.

ಬಿಜೆಪಿಯ ಬೆಂಬಲ ದೃಢ
ಶಿವಸೇನೆಯ ಬಂಡಾಯ ಕಾರ್ಯಾಚರಣೆಯಲ್ಲಿ ಬಿಜೆಪಿ ದೊಡ್ಡ ಪಾಲಿದೆ ಎಂಬ ಮಾತು ಆರಂಭದಿಂದಲೂ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಶುಕ್ರವಾರ ರಾತ್ರಿ ದೇವೇಂದ್ರ ಫಡ್ನವಿಸ್‌ ಮತ್ತು ಏಕನಾಥ್‌ ಶಿಂಧೆ ಅವರು ಬರೋಡಾದಲ್ಲಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈ ಮಾತುಕತೆ ವೇಳೆ ಮುಂದಿನ ಹೆಜ್ಜೆಗಳ ಬಗ್ಗೆ ಸಮಾಲೋಚನೆ ನಡೆದಿದೆ ಎನ್ನಲಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಏಕನಾಥ್‌ ಶಿಂಧೆ ಬಣ ಒಂದೋ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು, ಇಲ್ಲವೇ ಬಿಜೆಪಿಯೊಂದಿಗೆ ವಿಲೀನ ಆಗಲೇಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಫಡ್ನವಿಸ್‌ ಮೂಲಕ ಶಿಂಧೆ ಬಣ ಕೇಂದ್ರದ ಮೇಲೆ ಪ್ರಭಾವ ಬೀರಿ ರಕ್ಷಣೆ ಪಡೆದುಕೊಂಡಿದೆ ಎನ್ನಲಾಗಿದೆ.

ಒಂದೊಮ್ಮೆ ವೈ ಕೆಟಗರಿ ಭದ್ರತೆ ನೀಡಿದರೆ ಅದು ಕೇವಲ ಶಾಸಕರಿಗೆ ಮಾತ್ರವಲ್ಲ ಅವರ ಕುಟುಂಬಿಕರಿಗೂ ಭದ್ರತೆ ನೀಡಲು ಅವಕಾಶ ಒದಗಿಸುತ್ತದೆ. ಈಗ ಕೆಲವು ಶಾಸಕರ ಮನೆ ಮಂದಿ ಕೂಡಾ ಜೀವಭೀತಿ ಎದುರಿಸುತ್ತಿರುವುದರಿಂದ ಈ ಕ್ರಮಕ್ಕೆ ಮಹತ್ವ ಬಂದಿದೆ. ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಕಲ್ಪನೆಗೂ ಮೀರಿದ ಘಟನೆಗಳು ನಡೆಯುತ್ತಿರುವುದು ಸುಳ್ಳಲ್ಲ.

ಇದನ್ನೂ ಓದಿ| Maha politics: ಶಿಂಧೆ ಬಣದ 20ಕ್ಕೂ ಅಧಿಕ ಶಾಸಕರು ಉದ್ಧವ್‌ ಠಾಕ್ರೆ ಸಂಪರ್ಕದಲ್ಲಿ?

Exit mobile version