Site icon Vistara News

Maha politics: ಶಿಂಧೆ ಬಣದ 20ಕ್ಕೂ ಅಧಿಕ ಶಾಸಕರು ಉದ್ಧವ್‌ ಠಾಕ್ರೆ ಸಂಪರ್ಕದಲ್ಲಿ?

Uddhav- Adithya

ಮುಂಬಯಿ: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಭಾನುವಾರವಾದರೂ ಚಟುವಟಿಕೆಗಳಿಗೆ ಕೊರತೆ ಇಲ್ಲ. ಗುವಾಹಟಿಯಲ್ಲಿರುವ ಶಿವಸೇನೆಯ ಏಕನಾಥ್‌ ಶಿಂಧೆ ಬಣ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. ಇತ್ತ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರು ಸಭೆಯನ್ನು ನಡೆಸುತ್ತಿದ್ದಾರೆ. ಇದರ ನಡುವೆಯೇ ಕೇಳಿ ಬರುತ್ತಿರುವ ಮತ್ತೊಂದು ಸುದ್ದಿ ಎಂದರೆ ಏಕನಾಥ್‌ ಶಿಂಧೆ ಬಣದಲ್ಲಿರುವ ೨೦ಕ್ಕೂ ಅಧಿಕ ಶಾಸಕರು ಮರಳಿ ಉದ್ಧವ್‌ ಠಾಕ್ರೆ ಗುಂಪನ್ನು ಸೇರಿಕೊಳ್ಳಲು ಉತ್ಸುಕರಾಗಿದ್ದಾರೆ ಎನ್ನುವುದು.

ಏಕನಾಥ್‌ ಶಿಂಧೆ ಬಣದಲ್ಲಿ ಪ್ರಸಕ್ತ ೪೦ ಶಿವಸೇನಾ ಶಾಸಕರಿದ್ದಾರೆ ಎಂದು ಹೇಳಲಾಗಿದೆ. ಉಳಿದಂತೆ ಎಂಟು ಪಕ್ಷೇತರರು ಹಾಗೂ ಇಬ್ಬರು ಪ್ರಹಾರ್‌ ಜನಶಕ್ತಿ ಪಕ್ಷದ ಶಾಸಕರಿದ್ದಾರೆ ಎನ್ನಲಾಗಿದೆ. ಶಿವಸೇನೆ ಉದ್ಧವ್‌ ಠಾಕ್ರೆ ಬಣದಲ್ಲಿರುವುದು ಕೇವಲ ೧೫ರಿಂದ ೧೬ ಶಾಸಕರು ಎನ್ನಲಾಗಿದೆ. ಆದರೂ ವಿಶ್ವಾಸಮತ ಯಾಚನೆ ನಡೆದರೆ ಸರಕಾರವನ್ನು ಉಳಿಸಿಕೊಳ್ಳುವುದು ಖಚಿತ ಎಂದು ಉದ್ಧವ್‌ ಠಾಕ್ರೆ ಭಾರಿ ವಿಶ್ವಾಸದಲ್ಲಿ ಮಾತನಾಡಿದ್ದಾರೆ.

ಯಾಕೆ ಬಣ ಬದಲಾವಣೆ?
ನಿಜವೆಂದರೆ ಏಕನಾಥ್‌ ಶಿಂಧೆ ಬಣದಲ್ಲಿರುವ ಶಾಸಕರೆಲ್ಲರೂ ಉದ್ಧವ್‌ ಠಾಕ್ರೆ ಮೇಲೆ ರೋಸಿ ಹೋದವರೇ. ಆದರೂ ಶಿವಸೇನೆಯ ಮೇಲೆ ಅವರಿಗೆ ಸಾಕಷ್ಟು ಪ್ರೀತಿ ಇದೆ. ಇದೀಗ ಅನಿವಾರ್ಯ ಪರಿಸ್ಥಿತಿಯಲ್ಲಿ ಶಿವಸೇನೆಯನ್ನು ಬಿಜೆಪಿ ಜತೆ ವಿಲೀನಗೊಳಿಸಬೇಕಾದ ಸನ್ನಿವೇಶ ನಿರ್ಮಾಣಗೊಳ್ಳುವ ಅಪಾಯವಿದೆ ಎಂಬ ಸೂಚನೆಯೊಂದು ಸಿಕ್ಕಿದೆ. ಹೀಗಾಗಿ ಅವರಲ್ಲಿ ಕೆಲವರು ಆತಂಕಗೊಂಡು ಮರಳಿ ಉದ್ಧವ್‌ ಠಾಕ್ರೆ ಬಣಕ್ಕೆ ಹಿಂದಿರುಗುವ ಪ್ರಸ್ತಾಪ ಹೊಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಉದ್ಧವ್‌ ಠಾಕ್ರೆ ಅವರು ಎಲ್ಲ ಶಾಸಕರ ಜತೆ ತಾನೊಮ್ಮೆ ಮಾತನಾಡಲೇಬೇಕು ಎಂದು ಹಠ ಹಿಡಿದಿರುವುದು ಎನ್ನಲಾಗುತ್ತಿದೆ.

ಶಿಂಧೆ ಬಣದಲ್ಲಿರುವ ದೀಪಕ್‌ ಕೇಸರ್ಕರ್‌ ಅವರು ಭಾನುವಾರ ಬೆಳಗ್ಗೆ ಮಾತನಾಡಿ, ನಾವು ಇನ್ನೂ ಶಿವಸೇನೆ ಜತೆಗೇ ಇದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಎಷ್ಟು ದಿನ ಅಡಗಿಕೊಳ್ತೀರಿ?
ಈ ನಡುವೆ ಶಿವಸೇನಾ ಸಂಸದ ಸಂಜಯ್‌ ರಾವತ್‌ ಅವರು ಶಿಂಧೆ ಬಣಕ್ಕೆ ತೀವ್ರ ಎಚ್ಚರಿಕೆಯನ್ನೇ ನೀಡಿದ್ದಾರೆ. ನೀವು ಹೋಟೆಲ್, ರೆಸಾರ್ಟ್‌ಗಳಲ್ಲಿ ಎಷ್ಟು ದಿನ ಅಡಗಿರುತ್ತೀರಿ ನೋಡುತ್ತೇವೆ. ಒಂದಲ್ಲ ಒಂದು ದಿನ ನೀವು ಹೊರಗೆ ಬರಲೇಬೇಕು. ಆಗ ಪರಿಸ್ಥಿತಿ ನಿಮ್ಮ ವಿರುದ್ಧವಾಗಿರುತ್ತದೆ ಎನ್ನುವ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅವರು ಪ್ರಮುಖವಾಗಿ ಉಲ್ಲೇಖಿಸುತ್ತಿರುವುದು ೧೬ ಶಾಸಕರ ತಲೆ ಮೇಲೆ ತೂಗುತ್ತಿರುವ ಅನರ್ಹತೆಯ ತೂಗುಗತ್ತಿಯ ಬಗ್ಗೆ.

ಆದಿತ್ಯ ಠಾಕ್ರೆಯಿಂದಲೂ ಎಚ್ಚರಿಕೆ
ʻʻನೀವು ಮಾಡಿರುವ ದ್ರೋಹವನ್ನು ಯಾವ ಕಾರಣಕ್ಕೂ ಮರೆಯಲಾಗದು. ಈ ಹೋರಾಟದಲ್ಲಿ ನಾವು ಗೆಲ್ಲುವುದು ಶತಸ್ಸಿದ್ಧʼʼ ಎಂದು ಮುಂಬಯಿಯಲ್ಲಿ ನಡೆದ ಪಕ್ಷದ ಪ್ರಮುಖ ಸಭೆಯಲ್ಲಿ ಸಚಿವರಾಗಿರುವ ಆದಿತ್ಯ ಠಾಕ್ರೆ ಹೇಳಿದ್ದಾರೆ.

ನಾಳೆ ಉತ್ತರ ಕೊಡಬೇಕು ರೆಬೆಲ್‌ಗಳು
ಈ ನಡುವೆ ಡೆಪ್ಯೂಟಿ ಸ್ಪೀಕರ್‌ ನರಹರಿ ಜೈರ್ವಾಲ್‌ ಅವರು ನೀಡಿರುವ ಅನರ್ಹತೆ ನೋಟಿಸಿಗೆ ೧೬ ಮಂದಿ ರೆಬೆಲ್‌ ಶಾಸಕರು ಸೋಮವಾರ ಸಂಜೆಯೊಳಗೆ ಉತ್ತರ ನೀಡಬೇಕಾಗಿದೆ. ಮೇಲ್ನೋಟಕ್ಕೆ ಸರಳವಾಗಿ ಉತ್ತರ ಕೊಟ್ಟರೆ ಸಾಕು ಅನಿಸಿದರೂ ಈ ಆಧಾರದ ಮೇಲೆ ಅವರ ಭವಿಷ್ಯವೇ ಅಡಗಿರುತ್ತದೆ ಎನ್ನುವುದರಿಂದ ಬಹಳ ಮಹತ್ವವನ್ನು ಪಡೆದುಕೊಳ್ಳುವಂತಾಗುತ್ತದೆ.

ಇದನ್ನೂ ಓದಿ| Maha politics: ಉದ್ಧವ್‌ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ರಂಗಪ್ರವೇಶ, ರೆಬೆಲ್‌ ಶಾಸಕರ ಪತ್ನಿಯರಿಗೆ ಫೋನ್‌ ಕರೆ!

Exit mobile version