ನವ ದೆಹಲಿ: ಕಳೆದ ಏಳು ದಿನಗಳಿಂದ ಕೇವಲ ರಾಜಕೀಯಕ್ಕೆ ಸೀಮಿತವಾಗಿದ್ದ ಮಹಾರಾಷ್ಟ್ರ ಬೆಳವಣಿಗೆಗಳು (Maha politics) ಸೋಮವಾರ ಕಾನೂನಿನ ಹೋರಾಟವಾಗಿ ಮಾರ್ಪಟ್ಟಿದೆ. ಶಿವಸೇನೆಯ ಏಕನಾಥ್ ಶಿಂಧೆ ಬಣದ ೧೬ ಶಾಸಕರ ಅನರ್ಹಗೊಳಿಸಬಾರದೇಕೆ ಎಂದು ಪ್ರಶ್ನಿಸಿ, ಡೆಪ್ಯೂಟಿ ಸ್ಪೀಕರ್ ನರಹರಿ ಜೈಸ್ವಾಲ್ ಅವರು ನೀಡಿರುವ ಶೋಕಾಸ್ ನೋಟಿಸ್ ಮತ್ತು ಏಕನಾಥ್ ಶಿಂಧೆ ಅವರನ್ನು ಶಿವಸೇನೆಯ ಶಾಸಕಾಂಗ ಪಕ್ಷ ನಾಯಕನ ಸ್ಥಾನದಿಂದ ಕಿತ್ತು ಹಾಕಿ ಅಜಯ್ ಚೌಧರಿ ಅವರನ್ನು ನೇಮಿಸಿದ ಪ್ರಕರಣಗಳೆರಡು ಪ್ರಮುಖವಾಗಿ ಸುಪ್ರೀಂಕೋರ್ಟ್‌ನ ಮುಂದೆ ಬಂದಿವೆ.
ನ್ಯಾಯಮೂರ್ತಿಗಳಾದ ಜಸ್ಟಿಸ್ ಸೂರ್ಯಕಾಂತ್ ಮತ್ತು ಜಸ್ಟಿಸ್ ಜೆ.ಬಿ. ಪಡಿವಾಳ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಮುಂದೆ ಪ್ರಕರಣದ ವಿಚಾರಣೆ ಆರಂಭಗೊಂಡಿದೆ. ಏಕನಾಥ್ ಶಿಂಧೆ ಬಣದ ಪರವಾಗಿ ಹರೀಶ್ ಸಾಳ್ವೆ, ಉದ್ಧವ್ ಠಾಕ್ರೆ ಬಣದ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಮತ್ತು ಡೆಪ್ಯೂಟಿ ಸ್ಪೀಕರ್ ನರಹರಿ ಜೈರ್ವಾಲ್ ಪರವಾಗಿ ಕಪಿಲ್ ಸಿಬಾಲ್ ಅವರು ನ್ಯಾಯವಾದಿಗಳಾಗಿ ಕೋರ್ಟ್ ಮುಂದೆ ನಿಲ್ಲಲಿದ್ದಾರೆ.
ಈ ನಡುವೆ, ಇಡೀ ಮಹಾರಾಷ್ಟ್ರ ಮಾತ್ರವಲ್ಲ, ದೇಶಕ್ಕೆ ದೇಶವೇ ಸುಪ್ರೀಂಕೋರ್ಟ್‌ನ ವಿಚಾರಣೆಯನ್ನು ಗಮನಿಸುತ್ತಿದೆ. ಏಕನಾಥ ಶಿಂಧೆ ಬಣದ ಎಲ್ಲ ಶಾಸಕರು ಮುಂಜಾನೆ ೧೦ ಗಂಟೆಗೆ ತುರ್ತು ಸಭೆಯನ್ನು ನಡೆಸಿದ್ದಾರೆ. ವಿಚಾರಣೆಯನ್ನು ಸ್ಪಷ್ಟವಾಗಿ ಗಮನಿಸುವುದು ಮತ್ತು ಬಳಿಕ ಅದಕ್ಕೆ ಸಂಬಂಧಿಸಿದ ಮುಂದಿನ ಯೋಜನೆಗಳನ್ನು ರೂಪಿಸುವುದು ಈ ಬಣದ ಕಾರ್ಯತಂತ್ರವಾಗಿದೆ. ಈ ಬಣದ ೧೬ ಮಂದಿ ಸೋಮವಾರ ಸಂಜೆ ೫.೩೦ರೊಳಗೆ ಡೆಪ್ಯೂಟಿ ಸ್ಪೀಕರ್ ಅವರ ನೋಟಿಸ್‌ಗೆ ಉತ್ತರ ನೀಡಬೇಕಾಗಿದೆ.
ಇತ್ತ ಉದ್ಧವ್ ಠಾಕ್ರೆ ಬಣವೂ ಸುಪ್ರೀಂಕೋರ್ಟ್ ವಿಚಾರಣೆಯ ಮೇಲೆ ಕಣ್ಣಿಟ್ಟಿದ್ದೆ. ಅಲ್ಲೂ ಮುಂದಿನ ಹೆಜ್ಜೆಗಳ ಬಗ್ಗೆಯೇ ಪ್ರಧಾನ ಚರ್ಚೆ ನಡೆಯುತ್ತಿದೆ.
ಈ ನಡುವೆ, ಎರಡೂ ಗುಂಪಿನ ಅಭಿಮಾನಿಗಳು ಬೀದಿಗೆ ಇಳಿದಿದ್ದು ತಮ್ಮ ತಮ್ಮ ನಾಯಕರ ಪರವಾಗಿ ಪ್ರದರ್ಶನ ನಡೆಸುತ್ತಿದ್ದಾರೆ. ಮುಂಬಯಿಯಲ್ಲಿ ಠಾಕ್ರೆ ಅಭಿಮಾನಿಗಳ ಬಲ ಹೆಚ್ಚಿದ್ದರೆ ಠಾಣೆ ಭಾಗದಲ್ಲಿ ಏಕನಾಥ್ ಶಿಂಧೆ ಬಣದ ಅಭಿಮಾನಿಗಳು ಹೆಚ್ಚಿದ್ದಾರೆ.
ಎಲ್ಲೆಡೆ ಕಟ್ಟೆಚ್ಚರ
ಇದೇವೇಳೆ, ಸುಪ್ರೀಂಕೋರ್ಟ್ ವಿಚಾರಣೆ ಮತ್ತು ಒಟ್ಟಾರೆ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರದಾದ್ಯಂತ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ನಿಯೋಜನೆ ನಡೆದಿದೆ.
ರೆಬೆಲ್ ಶಾಸಕರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ಭದ್ರತೆಗಳನ್ನು ಒದಗಿಸಬೇಕು ಎಂದು ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜ್ಯದ ಡಿಜಿಪಿ ಅವರಿಗೆ ಸೂಚನೆ ನೀಡಿದ್ದಾರೆ. ಜತೆಗೆ ಕೇಂದ್ರ ಗೃಹ ಇಲಾಖೆಗೂ ಮನವಿಯನ್ನು ಮಾಡಿದ್ದಾರೆ.
ಇದನ್ನೂ ಓದಿ| ಮಹಾ ಕಾನೂನು ಹೋರಾಟ; ಕೆಲವೇ ಹೊತ್ತಲ್ಲಿ ಸುಪ್ರೀಂ ವಿಚಾರಣೆ ಪ್ರಾರಂಭ, ಜೈರ್ವಾಲ್‌ಗೆ ಸಿಬಲ್ ಬಲ