ಮುಂಬಯಿ: ಶಿವಸೇನೆಯ ಏಕನಾಥ್ ಶಿಂಧೆ ಬಣದ ೧೫ ಶಾಸಕರಿಗೆ ವೈ ಶ್ರೇಣಿಯ ಭದ್ರತೆ ಒದಗಿಸುವಂತೆ ಕೇಂದ್ರ ಸರಕಾರ ಸೂಚನೆ ನೀಡಿದ ಬೆನ್ನಿಗೇ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜ್ಯ ಡಿಜಿಪಿಗೆ ಇನ್ನೊಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದಲ್ಲಿರುವ ಶಿವಸೇನೆಯ ರೆಬೆಲ್ ಶಾಸಕರ ಎಲ್ಲ ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಅವರು ಸೂಚಿಸಿದ್ದಾರೆ.
ಯಾರಿಗೆ ವೈ ಕೆಟಗರಿ ಭದ್ರತೆ?
ಶಿವಸೇನೆಯ ಏಕನಾಥ್ ಶಿಂಧೆ ಬಣದ ಚಿಮನ್ ರಾವ್ ಪಟೇಲ್, ಬಾಲಾಜಿ ಕಲ್ಯಾಣ್‌ಕರ್, ಸಂಜಯ್ ರಾಯ್ ಮುಲ್ಕರ್, ರಮೇಶ್ ಬೋರ್ನಾರೆ, ಮಹೇಶ್ ಶಿಂಧೆ, ಅಬ್ದುಲ್ ಸತ್ತಾರ್, ಸಂದೀಪನ್ ರಾವ್ ಭೂಮ್ರೇ, ಭರತ್ ಶೇಟ್ ಗೋಗವಾಲೆ, ಸಂಜಯ್ ಶಿರ್ಸಾಟ್, ಯಾಮಿನಿ ಜಾಧವ್, ಲತಾ ಸೋನಾವಾನೆ, ಅನಿಲ್ ಭಾಭರ್, ತಾನಾಜಿ ಸಾವಂತ್, ಬಾಲಾಜಿ ಕಿನಿಕರ್ ಮತ್ತು ಪ್ರಕಾಶ್ ಸುರ್ವೆ ಅವರಿಗೆ ಸಿಆರ್‌ಪಿಎಫ್ ಭದ್ರತೆ ಒದಗಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ. ವಿಶೇಷವೆಂದರೆ ಇವರೆಲ್ಲರ ವಿರುದ್ಧ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಡೆಪ್ಯುಟಿ ಸ್ಪೀಕರ್‌ಗೆ ದೂರು ನೀಡಿದೆ. ಇವರು ಸೋಮವಾರ ಮುಂಬಯಿಗೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಭದ್ರತೆ ನೀಡಲು ಸೂಚಿಸಿರಹುದು ಎಂದು ನಂಬಲಾಗಿದೆ. ಆದರೆ, ಅಚ್ಚರಿ ಎಂದರೆ, ಇದರಲ್ಲಿ ಏಕನಾಥ್ ಶಿಂಧೆ ಅವರ ಹೆಸರೇ ಇಲ್ಲ!
ಈ ಶಾಸಕರು ಮಹಾರಾಷ್ಟ್ರಕ್ಕೆ ಬಂದಾಗ ಅವರಿಗೆ ನಾಲ್ಕರಿಂದ ಐದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ರಕ್ಷಣೆ ಕೊಡಬೇಕಾಗುತ್ತದೆ. ಬೇರೆ ಬೇರೆ ಪಾಳಿಗಳಲ್ಲಿ ಅವರು ಕೆಲಸ ಮಾಡಲಿದ್ದಾರೆ.
ರಾಜ್ಯಪಾಲರ ಆದೇಶವೇನು?
ರೆಬೆಲ್ ಶಾಸಕರು ಗುವಾಹಟಿಯಲ್ಲಿದ್ದರೂ ಅವರ ಮನೆ ಮಂದಿ ಮಹಾರಾಷ್ಟ್ರದಲ್ಲೇ ಇದ್ದಾರೆ. ಹೀಗಾಗಿ ಅವರಿಗೆ ರಕ್ಷಣೆ ನೀಡಬೇಕು ಎಂದು ರಾಜ್ಯಪಾಲರು ರಾಜ್ಯ ಡಿಜಿಪಿ ಅವರಿಗೆ ಸೂಚಿಸಿದ್ದಾರೆ. ಕೇಂದ್ರ ಗೃಹ ಇಲಾಖೆಯ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಹಲವು ಕಡೆ ಪ್ರತಿಭಟನೆ
ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ರೆಬೆಲ್ ಶಾಸಕರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಮನೆಗಳಿಗೆ ದಾಳಿ ಮಾಡುವುದು, ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆಯುವುದು ಸೇರಿದಂತೆ ಆಕ್ರೋಶ ಹೆಚ್ಚುತ್ತಿದೆ. ಈ ವಿವಾದ ಇನ್ನೂ ಕೆಲವು ದಿನಗಳ ಕಾಲ ಚಾಲ್ತಿಯಲ್ಲಿರುವ ಸಾಧ್ಯತೆ ಇರುವುದರಿಂದ ಕುಟುಂಬಗಳ ರಕ್ಷಣೆ ಬಹು ಮುಖ್ಯ ಎಂಬ ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಶಿವಸೈನಿಕರು ಮುಂದಿನ ದಿನಗಳಲ್ಲಿ ರೆಬೆಲ್ ಶಾಸಕರ ಮನೆಗಳಿಗೂ ನುಗ್ಗಬಹುದು ಎಂಬ ಬಗ್ಗೆ ಗುಪ್ತಚರ ವರದಿಗಳು ಇವೆ ಎನ್ನಲಾಗಿದೆ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಭದ್ರತೆ ಹೆಚ್ಚಿಸಲಾಗುತ್ತಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೆಬೆಲ್ ಶಾಸಕರ ವಿರುದ್ಧ ಶಿವಸೈನಿಕರ ಪ್ರತಿಭಟನೆ ಹೆಚ್ಚುತ್ತಿದೆ. ಭಾನುವಾರವೂ ಹಲವು ಕಡೆ ಭಾವಚಿತ್ರಗಳಿಗೆ ಬೆಂಕಿ ಹಚ್ಚುವುದು, ಚಪ್ಪಲಿಯಿಂದ ಹೊಡೆಯುವುದು ಮೊದಲಾದ ಪ್ರತಿಭಟನೆಗಳು ನಡೆದವು. ರಾಜ್ಯ ಮಾತ್ರವಲ್ಲದೆ, ಕಾಶ್ಮೀರದಲ್ಲೂ ಜನರು ಬೀದಿಗಿಳಿದು ಹೋರಾಟ ಮಾಡಿದ ಚಿತ್ರಗಳು ಹರಿದಾಡುತ್ತಿವೆ.
ನಾಳೆ ಬರುತ್ತಾ ಶಿಂಧೆ ಟೀಮ್?
ಸೋಮವಾರ ಶಿಂಧೆ ಬಣದ ೧೬ ಶಾಸಕರು ಡೆಪ್ಯುಟಿ ಸ್ಪೀಕರ್ ಅವರನ್ನು ಭೇಟಿಯಾಗಲು ಬರುತ್ತಿದ್ದಾರೆ ಎಂಬ ಸುದ್ದಿಯೊಂದು ಹರಡಿರುವುದರಿಂದ ಮುಂಬಯಿಯ ಎಲ್ಲ ಕಡೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಯಾರು ಬರುತ್ತಾರೆ? ನಿಜಕ್ಕೂ ಬರುತ್ತಾರಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಸುದ್ದಿಗಳು ಹರಡುತ್ತಿರುವುದರಿಂದ ವಿಮಾನ ನಿಲ್ದಾಣವೂ ಸೇರಿದಂತೆ ಎಲ್ಲ ಕಡೆ ಪೊಲೀಸರ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತೂ ಮುಂಬಯಿಯಲ್ಲಿ ಮುಂದಿನ ಕೆಲವು ದಿನಗಳು ಆತಂಕದ ಸನ್ನಿವೇಶಗಳು ನಿರ್ಮಾಣವಾಗುವ ಸಾಧ್ಯತೆಗಳು ದಟ್ಟವಾಗಿವೆ.