ಮುಂಬೈ: ಮಹಾರಾಷ್ಟ್ರ ರಾಜಕೀಯ ನಿರ್ಣಾಯಕ ಹಂತ ತಲುಪಿದೆ. ಪತನದ ಅಂಚಿನಲ್ಲಿ ನಿಂತಿರುವ ಸರ್ಕಾರದ ಭವಿಷ್ಯ ಇಂದು ನಿರ್ಧಾರವಾಗುವ ಸಾಧ್ಯತೆ ಹೆಚ್ಚಾಗಿದೆ. ಇಂದು (ಜೂ.24)ಮಧ್ಯಾಹ್ನ 12ಗಂಟೆಗೆ ಮುಂಬೈನ ಶಿವಸೇನಾ ಭವನದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಭೆ ನಡೆಸಲಿದ್ದಾರೆ. ಹಾಗೇ, ʼಈಗ ಕಾನೂನು ಹೋರಾಟ ಶುರುವಾಗಿದೆ. ಈ ಹಿಂದೆ ಇಂಥದ್ದೇ ಸನ್ನಿವೇಶ ಎದುರಾದಾಗ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪುಗಳು ನಮ್ಮ ಕಣ್ಣೆದುರು ಇದೆ. ಕೇಂದ್ರ ಸರ್ಕಾರದ ಸಚಿವರೊಬ್ಬರ ನೇತೃತ್ವದಲ್ಲಿ ಬಿಜೆಪಿ ಮಹಾರಾಷ್ಟ್ರ ಸರ್ಕಾರ ಉರುಳಿಸಲು ಎಲ್ಲ ಪ್ರಯತ್ನ ಮಾಡುತ್ತಿದೆʼ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನೆ ನಾಯಕ, ಸಚಿವ ಏಕನಾಥ್ ಶಿಂಧೆ ಬಣ ಇನ್ನೂ ಅಸ್ಸಾಂನ ಗುವಾಹಟಿಯಲ್ಲಿರುವ ಹೋಟೆಲ್‌ನಲ್ಲಿಯೇ ಇದೆ. ಆ ಬಣಕ್ಕೆ ಇಂದು (ಜೂ.೨೪)ಇನ್ನಷ್ಟು ಶಾಸಕರು ಸೇರಿಕೊಳ್ಳಲಿದ್ದು ಶಾಸಕರ ಸಂಖ್ಯೆ ೫೦ ದಾಟಲಿದೆ ಎಂದು ಎಎನ್‌ಐ ಸುದ್ದಿ ಮಾಧ್ಯಮ ವರದಿ ಮಾಡಿದೆ. “ನನಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ” ಎಂದು ಬುಧವಾರ ಹೇಳಿಕೊಂಡಿದ್ದ ಶಿಂಧೆ, ಗುರುವಾರ ನನಗೆ ೫೦ಕ್ಕೂ ಹೆಚ್ಚು ಶಾಸಕರು ಬೆಂಬಲ ನೀಡಿದ್ದಾರೆ. ಇವರಲ್ಲಿ 40ಕ್ಕೂ ಹೆಚ್ಚು ಶಾಸಕರು ಶಿವಸೇನೆಯವರೇ ಇದ್ದಾರೆ ಎಂದು ತಿಳಿಸಿದ್ದರು. ಸದ್ಯ ಹೋಟೆಲ್‌ನಲ್ಲಿರುವ ಶಾಸಕರ ಸಂಖ್ಯೆ ೫೦ ದಾಟಿಲ್ಲ. ಇಂದು ಒಂದಷ್ಟು ಜನರು ಹೋಗುವ ಮೂಲಕ ಆ ಸಂಖ್ಯೆ ಹಾಫ್ ಸೆಂಚೂರಿ ಬಾರಿಸಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಶಿವಸೇನೆ ಸಂಸದ ಸಂಜಯ್ ರಾವತ್ !
ಗುರುವಾರ ಸಂಜೆ ೩೭ ಶಿವಸೇನೆ ಶಾಸಕರು ಮಹಾರಾಷ್ಟ್ರ ಡೆಪ್ಯೂಟಿ ಸ್ಪೀಕರ್‌ಗೆ ಪತ್ರ ಬರೆದಿದ್ದು, ಸದನದಲ್ಲಿ ಏಕನಾಥ್ ಶಿಂಧೆಯೇ ನಮ್ಮ ನಾಯಕ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ವಿಧಾನಪರಿಷತ್ ಚುನಾವಣೆಯಲ್ಲಿ ವಿಪ್ ಜಾರಿಯಾಗಿದ್ದರೂ ಅದನ್ನು ಉಲ್ಲಂಘಿಸಿ ಅಡ್ಡಮತದಾನ ಮಾಡಿದ ಏಕನಾಥ್ ಶಿಂಧೆ ಸೇರಿ 12 ಶಾಸಕರು ಮತ್ತು ಉದ್ಧವ್ ಠಾಕ್ರೆ ನಿವಾಸ ಮಾತೋಶ್ರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಲು ವಿಪ್ ಜಾರಿ ಮಾಡಿದ್ದರೂ ಆಗಮಿಸಿದ ಶಾಸಕರನ್ನೆಲ್ಲ ಅನರ್ಹಗೊಳಿಸಬೇಕು ಎಂದು ಶಿವಸೇನೆ ಕೂಡ ಡೆಪ್ಯೂಟಿ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾಗಿ ಶಾಸಕ ಅರವಿಂದ್ ಸಾವಂತ್ ತಿಳಿಸಿದ್ದಾರೆ. ಆದರೆ ಈ ವಿಚಾರಕ್ಕೆ ಶಿಂಧೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮಗೆ ಹೀಗೇ ಮಾಡಿ ಎಂದು ಹೇಳಲು ನೀವು ಯಾರು? ನಮಗೆಲ್ಲರಿಗೂ ನಿಮ್ಮ ಗಿಮಿಕ್‌ಗಳು ಗೊತ್ತು, ಅದಕ್ಕಿಂತ ಚೆನ್ನಾಗಿ ಕಾನೂನಿನ ಅರಿವಿದೆ. ವಿಪ್ ಇರುವುದು ಶಾಸಕಾಂಗ ಕಾರ್ಯಗಳಿಗೆ ಹೊರತು ಸಭೆಯ ಬಗ್ಗೆ ಅನ್ವಯಿಸಲು ಅಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಮಹಾ ಅʼಗಾಡಿʼ ಸರ್ಕಾರ ಪಂಕ್ಚರ್?; ಶುರುವಾದಂತಿದೆ ಆಪರೇಶನ್ ಕಮಲ !