ಮುಂಬಯಿ: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಸದ್ಯೋಭವಿಷ್ಯದಲ್ಲಿ ಅಂತ್ಯ ಕಾಣುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಗುವಾಹಟಿಯ ಹೋಟೆಲ್‌ನಲ್ಲಿರುವ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರ ಬಣದಲ್ಲಿ 40ಕ್ಕೂ ಅಧಿಕ ಶಿವಸೇನಾ ಶಾಸಕರಿದ್ದರೂ ಅದು ಹೆಜ್ಜೆ ಮುಂದಿಡಲು ಹೆದರುತ್ತಿರುವಂತಿದೆ. ಇತ್ತ ಕೇವಲ ೧೫ರಷ್ಟು ಶಾಸಕರನ್ನು ಹೊಂದಿರುವ ಉದ್ಧವ್ ಠಾಕ್ರೆ ಬಣ ಹತಾಶೆಯಲ್ಲೋ, ಭಯದಲ್ಲೋ, ಏನಾದರೂ ಪವಾಡ ನಡೆದೀತೋ ಎನ್ನುವ ನಿರೀಕ್ಷೆಯಲ್ಲಿ ಗುಟುರು ಹಾಕುತ್ತಿದೆ. ಇದೆಲ್ಲವನ್ನೂ ನೋಡುತ್ತಾ ಇರುವ ಸೂತ್ರಧಾರ ಬಿಜೆಪಿ ನಿಗೂಢ ಮೌನಕ್ಕೆ ಶರಣಾಗಿದೆ! ಯಾರೂ ಆಕ್ರಮಣಕಾರಿಯಾಗಿ ನುಗ್ಗದೆ, ಸೇಫ್ ಗೇಮ್ ಆಡುತ್ತಿರುವುದರಿಂದ ಈ ಪಂದ್ಯ ಒಂದಿಷ್ಟು ಕಾಲ ಹೆಚ್ಚುವರಿ ಸಮಯವನ್ನು ಕೇಳುತ್ತಿದೆ. ಅಂದರೆ, ತಕ್ಷಣವೇ ಈ ಮ್ಯಾಚ್ ಮುಗಿಯುವುದಿಲ್ಲ!
ಆರಂಭಿಕ ಲಕ್ಷಣಗಳನ್ನು ನೋಡಿದರೆ ಒಂದೆರಡೇ ದಿನದಲ್ಲಿ ಮಹಾ ಅಘಾಡಿ ಸರಕಾರ ಪತನಗೊಂಡು ಹೊಸ ಸರಕಾರ ರಚನೆಯಾಗುತ್ತದೆ ಎಂಬಂತೆ ಕಾಣುತ್ತಿತ್ತು. ಆದರೆ, ಈಗ ಇದು ಇನ್ನಷ್ಟು ದಿನ ವಿಸ್ತರಿಸುವ ಸಾಧ್ಯತೆಗಳು ಕಂಡುಬರುತ್ತಿವೆ.
ಡೆಪ್ಯುಟಿ ಸ್ಪೀಕರ್ ನರಹರಿ ಜೈರ್ವಾಲ್ ಅವರು ೧೬ ಮಂದಿ ರೆಬೆಲ್ ಶಾಸಕರಿಗೆ ನೋಟಿಸ್ ಜಾರಿಗೊಳಿಸಿ ʻನಿಮ್ಮ ಶಾಸಕತ್ವವನ್ನು ಯಾಕೆ ಅನರ್ಹಗೊಳಿಸಬಾರದುʼ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಲು ಜೂನ್ ೨೭ರ ಸಂಜೆ ೫.೩೦ರವರೆಗೆ ಕಾಲಾವಕಾಶ ನೀಡಲಾಗಿದೆ. ರೆಬೆಲ್ ಗುಂಪಿನ ನಾಯಕ ಏಕನಾಥ್ ಶಿಂಧೆ ಅವರು ಈ ಬಗ್ಗೆ ಡೆಪ್ಯುಟಿ ಸ್ಪೀಕರ್ ಅವರಿಗೆ ಉತ್ತರ ನೀಡಲಾಗುವುದು ಎಂದಿದ್ದಾರೆ.
ಹೋಟೆಲ್ ವಾಸ್ತವ್ಯ ವಿಸ್ತರಣೆ
ಅನರ್ಹತೆ, ಸರಕಾರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟತೆ ಸಿಗದೆ ಗುವಾಹಟಿಯಲ್ಲಿರುವ ಬಂಡಾಯ ಶಾಸಕರು ಮುಂಬಯಿಗೆ ಮರಳುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಇದೀಗ ರ‍್ಯಾಡಿಕಲ್ ಬ್ಲ್ಯೂ ಹೋಟೆಲ್ ವಾಸ್ತವ್ಯಕ್ಕೆ ಮಾಡಲಾದ ಬುಕಿಂಗನ್ನು ಜೂನ್ ೨೮ರಿಂದ ಜೂನ್ ೩೦ರವರೆಗೆ ವಿಸ್ತರಿಸಲಾಗಿದೆ. ಹಾಗಾಗಿ ಏನಿದ್ದರೂ ಜೂನ್ ೨೮ರ ಬಳಿಕವೇ ಅವರೆಲ್ಲ ಮರಳಿ ಬರುವುದು ಎನ್ನುವುದು ಸ್ಪಷ್ಟ.
ಬರೋಡಾದಲ್ಲಿ ನಡೆದಿತ್ತಾ ಫಡ್ನವಿಸ್-ಶಿಂಧೆ ಭೇಟಿ?
ಈ ನಡುವೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಶುಕ್ರವಾರ ರಾತ್ರಿ ಬರೋಡಾದಲ್ಲಿ ಭೇಟಿಯಾಗಿ ಸರಕಾರ ರಚನೆಯ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಶಿಂಧೆ ಅವರು ಗುವಾಹಟಿಯಿಂದ ವಿಶೇಷ ವಿಮಾನದಲ್ಲಿ ಬರೋಡಾಕ್ಕೆ ಬಂದಿದ್ದು, ಫಡ್ನವಿಸ್ ಅವರು ಮುಂಬಯಿಯಿಂದ ಬರೋಡಾಕ್ಕೆ ತೆರಳಿದ್ದರು ಎನ್ನಲಾಗಿದೆ.
ನಿಜಕ್ಕೂ ಈ ಭೇಟಿ ನಡೆದಿದೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಅತ್ಯಂತ ನಿಖರ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆಯಾದರೂ ಕೇವಲ ಸರಕಾರ ರಚನೆಗೆ ಸಂಬಂಧಿಸಿ ಮಾತನಾಡಲು ಇಷ್ಟೊಂದು ಸರ್ಕಸ್‌ನ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಈಗ ತಂತ್ರಜ್ಞಾನದ ಯುಗವಾಗಿರುವುದರಿಂದ ನೇರವಾಗಿ ಫೋನ್ ಮೂಲಕವೇ ಮಾತನಾಡಬಹುದು. ಹಾಗಿರುವಾಗ ರಾತ್ರೋರಾತ್ರಿ ಭೇಟಿಯಾಗುವ ರಿಸ್ಕ್ ಯಾಕೆ ತೆಗೆದುಕೊಂಡರು ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಮಂತ್ರಿಗಳಿಗೆ ಕೊಕ್ ಕೊಡ್ತಾರಂತೆ
ಈ ಮಧ್ಯೆ, ಮಹಾ ವಿಕಾಸ ಅಘಾಡಿ ಸರಕಾರದಲ್ಲಿರುವ ಬಂಡುಕೋರ ಶಾಸಕರನ್ನು ಮಂತ್ರಿ ಪಟ್ಟದಿಂದ ಕಿತ್ತು ಹಾಕಲಾಗುವುದು ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೊಸ ಬಾಂಬ್ ಸಿಡಿಸಿದ್ದಾರೆ. ಶಿಂಧೆ ಅವರೊಂದಿಗೆ ಹೋಗಿರುವ ಮಂತ್ರಿಗಳಿಗೆ ಬೆದರಿಕೆ ಹಾಕುವ ನಿಟ್ಟಿನಲ್ಲಿ ಈ ಹೇಳಿಕೆ ನೀಡಲಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಶಿಂಧೆ ಬಣದಲ್ಲಿರುವ ಐವತ್ತು ಶಾಸಕರಲ್ಲಿ ಮೂವರು ಶಿವಸೇನೆ ಮತ್ತು ಇಬ್ಬರು ಇತರ ಶಾಸಕರು ಇದ್ದಾರೆ.