ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಣ ಮಾಡಿದ್ದ ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರು ವಿಧಾನಸಭೆಯ ಅಂಗಣದಲ್ಲಿ ತಮಗಿರುವ ಬಹುಮತವನ್ನು ಸಾಬೀತುಪಡಿಸುವ ಮೂಲಕ ವಿಶ್ವಾಸಮತವನ್ನು ಗೆದ್ದಿದ್ದಾರೆ. ಏಕನಾಥ್ ಶಿಂಧೆ ಅವರು ಸೋಮವಾರ ಬೆಳಗ್ಗೆ ೧೧ ಗಂಟೆಗೆ ವಿಶ್ವಾಸಮತ ಯಾಚಿಸಿದ್ದು, ಅವರಿಗೆ ೧೬೪ ಮತಗಳು ಲಭಿಸಿವೆ. ೨೮೮ ಸದಸ್ಯರ ಸದನದಲ್ಲಿ ೧೪೫ ಮ್ಯಾಜಿಕ್ ಸಂಖ್ಯೆ ಆಗಿದೆ. ಈ ಮೂಲಕ ಅವರು ದೊಡ್ಡ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದಿದ್ದಾರೆ. ವಿಶ್ವಾಸ ಮತದ ವಿರುದ್ಧ ಕೇವಲ ೯೯ ಮತಗಳು ಮಾತ್ರ ಬಿದ್ದಿವೆ. ಅಂದರೆ ಮಹಾ ವಿಕಾಸ ಅಘಾಡಿ ಕೂಟದಲ್ಲಿ ಕೆಲವರು ವಿಶ್ವಾಸಮತಕ್ಕೆ ಗೈರುಹಾಜರಾಗಿದ್ದಾರೆ.
ಭಾನುವಾರ ನಡೆದ ಸ್ಪೀಕರ್ ಚುನಾವಣೆಯಲ್ಲೂ ಶಿವಸೇನೆ-ಬಿಜೆಪಿ ಮಿತ್ರ ಕೂಟ ೧೬೪ ಶಾಸಕರ ಬೆಂಬಲವನ್ನು ಪಡೆದಿತ್ತು. ಅವರೆಲ್ಲರೂ ಈಗ ವಿಶ್ವಾಸಮತದ ಸಂದರ್ಭದಲ್ಲೂ ಸರಕಾರದ ಬೆನ್ನಿಗೆ ನಿಂತಿದ್ದಾರೆ. ಇವರಲ್ಲಿ ಬಿಜೆಪಿ ೧೦೬, ಶಿಂಧೆ ಬಣದ ೩೯ ಶಾಸಕರಿದ್ದರೆ, ಇತರ ೧೯ ಮಂದಿ ಪಕ್ಷೇತರರು ಮತ್ತು ಇತರ ಪಕ್ಷದ ಬೆಂಬಲಿಗ ಶಾಸಕರು. ಸ್ಪೀಕರ್ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿ ಕೂಟದ ಪರವಾಗಿ ೧೧೨ ಮತಗಳು ಬಿದ್ದಿದ್ದವು. ಈಗ ಕೇವಲ ೯೯ ಮತಗಳು ಬಿದ್ದಿರುವುದನ್ನು ಗಮನಿಸಿದರೆ ಹಲವು ಶಾಸಕರು ವಿಶ್ವಾಸ ಮತಕ್ಕೆ ಕೈಕೊಟ್ಟಿರುವುದು ಸ್ಪಷ್ಟವಾಗಿದೆ. ಆದಿತ್ಯ ಠಾಕ್ರೆ ಸೇರಿದಂತೆ ಕೆಲವು ಉದ್ಧವ್ ಬಣದ ಶಾಸಕರೇ ಸದನಕ್ಕೆ ಬಂದಿಲ್ಲ. ಕೆಲವು ಎನ್‌ಸಿಪಿ ಶಾಸಕರು ನಾಪತ್ತೆಯಾಗಿರುವ ಸಂಶಯ ವ್ಯಕ್ತವಾಗಿದೆ.
ಕಳೆದ ಜೂನ್ ೨೦ರಂದು ಶಿವಸೇನೆಯಿಂದ ಬಂಡಾಯವೆದ್ದ ಏಕನಾಥ್ ಶಿಂಧೆ ಬಣ ಮೊದಲು ಸೂರತ್‌ಗೆ ಹೋಗಿ, ಅಲ್ಲಿಂದ ಗುವಾಹಟಿಗೆ ಹಾರಿತ್ತು. ಆಗಲೇ ಮಹಾ ವಿಕಾಸ ಅಘಾಡಿ ಸರಕಾರದ ಪತನದ ಸೂಚನೆಗಳು ಸಿಕ್ಕಿದ್ದವು. ಬಳಿಕ ನಾನಾ ನಾಟಕೀಯ ಬೆಳವಣಿಗೆಗಳು ನಡೆದು ಬಿಜೆಪಿ ಬೆಂಬಲದೊಂದಿಗೆ ಶಿಂಧೆ ಅವರು ಮುಖ್ಯಮಂತ್ರಿ ಹುದ್ದೆಗೇರಿದರು. ಇದೀಗ ರಾಜ್ಯ ವಿಧಾನಸಭೆಯಲ್ಲಿ ಅವರಿಗಿರುವ ಬಹುಮತ ಸಾಬೀತಾಗಿದೆ.
ಶಾಸಕಾಂಗ ಪಕ್ಷ ನಾಯಕರಾಗಿ ಆಯ್ಕೆ
ಇದಕ್ಕೂ ಮೊದಲು ಏಕನಾಥ್ ಶಿಂಧೆ ಅವರು ಶಿವಸೇನೆಯ ಶಾಸಕಾಂಗ ಪಕ್ಷ ನಾಯಕರಾಗಿ ಆಯ್ಕೆಯಾದರು. ಪಕ್ಷದ ಮುಖ್ಯ ಸಚೇತಕರಾಗಿ ಭರತ್ ಗೋಗಾವಾಲೆ ಆಯ್ಕೆ ನಡೆಯಿತು. ಈ ಎರಡೂ ಆಯ್ಕೆಯನ್ನು ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಅನುಮೋದಿಸಿದ್ದಾರೆ. ಇದರೊಂದಿಗೆ ಏಕನಾಥ್ ಶಿಂಧೆ ಬಣ ಶಿವಸೇನೆಯಲ್ಲಿ ಪರಮಾಧಿಕಾರತ್ವ ಪಡೆದಂತಾಯಿತು.
ಹಿಂದಿನ ಸುದ್ದಿ| Maha politics | ಜುಲೈ 2 ರಿಂದ ವಿಶೇಷ ಅಧಿವೇಶನ; ಸಿಎಂ ಶಿಂಧೆ ವಿಶ್ವಾಸಮತ ಯಾಚನೆ