ಮುಂಬಯಿ: ಶಿವಸೇನೆಯೊಳಗೆ ಹುಟ್ಟಿರುವ ಬಂಡಾಯದಿಂದ ಉಂಟಾಗಿರುವ ರಾಜಕೀಯ ಅಯೋಮಯ ಪರಿಸ್ಥಿತಿಯನ್ನು ಸರಿಪಡಿಸಲು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮಧ್ಯ ಪ್ರವೇಶ ಮಾಡಿದ್ದಾರೆ. ಜೂನ್ ೩೦ರಂದು ರಾಜ್ಯ ವಿಧಾನಸಭಾ ಅಧಿವೇಶನವನ್ನು ಕರೆದು ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸೂಚನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜ್ಯಪಾಲರನ್ನು ಭೇಟಿಯಾಗಿದ್ದು, ಉದ್ಧವ್ ಠಾಕ್ರೆ ಅವರನ್ನು ವಿಶ್ವಾಸ ಮತ ಸಾಬೀತುಪಡಿಸಲು ಸೂಚಿಸುವಂತೆ ಮನವಿ ಮಾಡಿ ಪತ್ರವನ್ನು ಸಲ್ಲಿಸಿದ್ದರು. ಇತ್ತ ಎಂಟು ಮಂದಿ ಪಕ್ಷೇತರರು ಕೂಡಾ ತಾವು ಮಹಾ ವಿಕಾಸ ಅಘಾಡಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದೆ ಪಡೆದಿರುವುದಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅತ್ತ ಗುವಾಹಟಿಯ ಹೋಟೆಲ್‌ನಲ್ಲಿ ತಂಗಿರುವ ಶಿವಸೇನೆಯ ಏಕನಾಥ್ ಶಿಂಧೆ ಬಣ ಕೂಡಾ ಗುರುವಾರದ ಹೊತ್ತಿಗೆ ಮುಂಬಯಿ ತಲುಪುವ ಸಿದ್ಧತೆ ಕೈಗೊಂಡಿದೆ.
ಕೊನೆಗೂ ರಂಗಕ್ಕಿಳಿದ ಬಿಜೆಪಿ
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಹಿಂದೆ ಭಾರತೀಯ ಜನತಾ ಪಕ್ಷದ ಕೈವಾಡವಿದೆ ಎಂದು ಬಂಡಾಯ ಶುರುವಾದ ದಿನದಿಂದಲೇ ಸುದ್ದಿಯಲ್ಲಿತ್ತು. ಆದರೆ, ಬಂಡಾಯದ ಬಾವುಟ ಹಾರಿ ಇಷ್ಟು ದಿನವಾದರೂ ಯಾಕೆ ಬಿಜೆಪಿ ಸುಮ್ಮನಿದೆ ಎನ್ನುವ ಪ್ರಶ್ನೆ ಕಾಡುತ್ತಿತ್ತು.
ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆ ಮತ್ತು ಶಾಸಕರ ಅನರ್ಹತೆಗೆ ಸಂಬಂಧಿಸಿ ಅದು ನೀಡಿದ ತೀರ್ಪಿನ ಬಳಿಕ ಬಿಜೆಪಿ ಸಕ್ರಿಯಗೊಂಡಂತೆ ಕಾಣುತ್ತಿದೆ. ಮಹಾರಾಷ್ಟ್ರದ ಬಿಜೆಪಿಯ ಮಹಾನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಮಂಗಳವಾರ ಮಧ್ಯಾಹ್ನ ದೆಹಲಿಗೆ ಭೇಟಿ ನೀಡಿ ಅಲ್ಲಿ ಹಿರಿಯ ನಾಯಕರಾದ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚಿಸಿದರು.
ಅಲ್ಲಿಂದಲೇ ನಡೆಯಿತು ಅಧಿಕಾರ ಹಂಚಿಕೆ
ಈ ನಡುವೆ ದಿಲ್ಲಿಯಿಂದಲೇ ಗುವಾಹಟಿಯಲ್ಲಿರುವ ಏಕನಾಥ್ ಶಿಂಧೆ ಅವರನ್ನು ಸಂಪರ್ಕಿಸಿದ ಫಡ್ನವಿಸ್ ಅವರು ಬಿಜೆಪಿ ಮತ್ತು ಶಿವಸೇನೆಯ ಶಿಂಧೆ ಗುಂಪು ಸೇರಿ ಸರಕಾರ ರಚಿಸುವುದಾದರೆ ಯಾವ ಗುಂಪಿಗೆ ಎಷ್ಟು ಖಾತೆ ಎಂಬ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಗೆ ಬಿಟ್ಟುಕೊಟ್ಟು, ಶಿಂಧೆ ಡಿಸಿಎಂ ಆಗುವುದು ಈಗಿನ ಲೆಕ್ಕಾಚಾರ. ಜತೆಗೆ ಹಣಕಾಸು, ಕಂದಾಯ, ಗೃಹ ಸೇರಿದಂತೆ ಪ್ರಮುಖ ಖಾತೆಗಳ ಹಂಚಿಕೆಗೆ ಸಂಬಂಧಿಸಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಇದೆಲ್ಲ ಚರ್ಚೆಗಳು ಮುಗಿದ ಬಳಿಕವೇ ಫಡ್ನವಿಸ್ ಅವರು ದಿಲ್ಲಿಯಿಂದ ಮುಂಬಯಿಗೆ ಬಂದು ನೇರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ವಿಶ್ವಾಸ ಮತ ಯಾಚನೆಗೆ ಸೂಚಿಸುವಂತೆ ಮನವಿ ಮಾಡಿದ್ದು ಎಂದು ತಿಳಿದುಬಂದಿದೆ.
ಅವಿಶ್ವಾಸ ಗೊತ್ತುವಳಿ ಮಂಡಿಸದ ಬಿಜೆಪಿ
ನಿಜವೆಂದರೆ, ಬಿಜೆಪಿ ಈ ಪರಿಸ್ಥಿತಿಯಲ್ಲಿ ಸರಕಾರ ಅಲ್ಪಮತಕ್ಕಿಳಿದಿರುವ ಕಾರಣ ಮುಂದಿಟ್ಟು ಅವಿಶ್ವಾಸ ಸೂಚಕ ಗೊತ್ತುವಳಿಯನ್ನು ಮಂಡಿಸುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ವಿಶ್ವಾಸ ಮತದ ವೇಳೆ ಶಿವಸೇನೆಯ ಬಂಡಾಯ ಶಾಸಕರ ಮತಕ್ಕೆ ಸಂಬಂಧಿಸಿ ಕಾನೂನು ಬಿಕ್ಕಟ್ಟುಗಳಿರುವುದರಿಂದ ಮೊದಲು ಸರಕಾರವನ್ನು ಉರುಳಿಸಿ ಬಳಿಕ ಮುಂದಿನ ಹೆಜ್ಜೆ ಇಡುವ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಮುಂಬಯಿಗೆ ಬರಲು ಶಿಂಧೆ ಟೀಮ್ ರೆಡಿ
ಈ ನಡುವೆ, ಗುವಾಹಟಿಯಲ್ಲಿರುವ ಏಕನಾಥ್ ಶಿಂಧೆ ಬಣ ಗುರುವಾರ ಮುಂಬಯಿ ತಲುಪಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಫಡ್ನವಿಸ್ ಅವರು ರಾಜ್ಯಪಾಲರನ್ನು ಭೇಟಿಯಾದ ಬೆನ್ನಿಗೇ ಶಿಂಧೆ ಪಾಳಯವೂ ಅಲರ್ಟ್ ಆಗಿದ್ದು ಒಂದೊಮ್ಮೆ ಗುರುವಾರವೇ ಅಧಿವೇಶನ ನಡೆದರೆ ಅದಕ್ಕೆ ಪೂರಕವಾಗಿ ಮುಂಬಯಿ ತಲುಪಲು ಸಿದ್ಧತೆ ಮಾಡಿಕೊಳ್ಳಲಿದೆ.
ಇದನ್ನೂ ಓದಿ| Maha politics: ರಾಜ್ಯಪಾಲರ ಭೇಟಿಯಾದ ಫಡ್ನವಿಸ್, ಬಹುಮತ ಸಾಬೀತುಪಡಿಸುವಂತೆ ಠಾಕ್ರೆಗೆ ಸೂಚಿಸಲು ಮನವಿ