ಮುಂಬಯಿ: ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಭಾನುವಾರ ಬೆಳಗ್ಗೆ ೧೦ ಗಂಟೆಗೆ ಬಿಡುಗಡೆಗೊಳ್ಳಲಿದ್ದು, ರಾಜಭವನದ ಕರ್ತವ್ಯಕ್ಕೆ ಮರಳಲಿದ್ದಾರೆ. ರಾಜ್ಯ ಅತ್ಯಂತ ವಿಚಿತ್ರವಾದ ರಾಜಕೀಯ ಬಿಕ್ಕಟ್ಟು (Maha politics) ಎದುರಿಸುತ್ತಿರುವ ಹೊತ್ತಿನಲ್ಲಿ ಅವರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಅಚ್ಚರಿ ಎಂದರೆ, ಇದುವರೆಗೂ ಯಾವ ರಾಜಕೀಯ ಪಕ್ಷಗಳೂ ಅವರ ಜತೆ ಈ ಬಗ್ಗೆ ಚರ್ಚಿಸಿಲ್ಲ. ಇದಕ್ಕೆ ಅವರು ಆಸ್ಪತ್ರೆಯಲ್ಲಿ ಇದ್ದುದೂ ಕಾರಣವಾಗಿರಬಹುದು. ಹಾಗಿದ್ದರೆ ಅವರೀಗ ಕರ್ತವ್ಯಕ್ಕೆ ಮರಳಿರುವುದರಿಂದ ಮಹಾ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಳ್ಳುತ್ತವೋ ಅಥವಾ ಬರೀ ವಾಗ್ಯುದ್ಧದಲ್ಲೇ ದಿನ ಕಳೆಯುತ್ತವೋ ಎನ್ನುವುದನ್ನು ಕಾದು ನೋಡಬೇಕು.
ಆಡಳಿತಾರೂಢ ಮಿತ್ರ ಕೂಟದ ಪ್ರಧಾನ ಪಕ್ಷವಾಗಿರುವ ಶಿವಸೇನೆಯಲ್ಲಿ ಮೂಡಿರುವ ಒಡಕಿನಿಂದ ಸರಕಾರ ಅಲ್ಪಮತಕ್ಕಿಳಿದಿದೆ ಎಂಬ ವಾದ ಮಂಡಿಸಿ ಬಿಜೆಪಿ ಸರಕಾರ ರಚನೆಗೆ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಬಹುದು, ಅವರು ಸದನದಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸೂಚನೆ ನೀಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಬಿಕ್ಕಟ್ಟು ಸೃಷ್ಟಿಯಾಗಿ ಆರು ದಿನ ಕಳೆದರೂ ಅಂತ ಸನ್ನಿವೇಶ ನಿರ್ಮಾಣವಾಗಿಲ್ಲ. ಇದೀಗ ರಾಜ್ಯಪಾಲರು ಮರಳಿ ಬಂದಿರುವುದರಿಂದ ಬಿಜೆಪಿ ಆ ನಿಟ್ಟಿನಲ್ಲಿ ಹೆಜ್ಜೆ ಇಡುತ್ತದೋ ಎನ್ನುವ ನಿರೀಕ್ಷೆ ಇದೆ.
ರಾಜ್ಯಪಾಲರೇನು ಮಾಡಬಹುದು?
ರಾಜ್ಯಪಾಲರು ರಾಜ್ಯದ ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸಿಕೊಂಡಿರುವುದು ತುಂಬ ಮುಖ್ಯವಾಗುತ್ತದೆ. ಯಾವುದೇ ಗುಂಪು ದೂರು ನೀಡಿದರೆ ಅದಕ್ಕೆ ಸಂಬಂಧಪಟ್ಟಂತೆ ಮುಂದಿನ ಹೆಜ್ಜೆ ಇಡಬಹುದು. ಅಥವಾ ಆಡಳಿತ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಅನಿಸಿದರೆ ಅವರೇ ಸ್ವತಃ ಮುಖ್ಯಮಂತ್ರಿಯವರನ್ನು ಕರೆದು ಕೇಳಬಹುದು. ಬೇಕಿದ್ದರೆ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಲು ಅವಕಾಶವಿದೆ.
ತಡರಾತ್ರಿವರೆಗೆ ಮೀಟಿಂಗ್
ಗುವಾಹಟಿಯ ರ‍್ಯಾಡಿಸನ್ ಹೋಟೆಲ್‌ನಲ್ಲಿ ಬೀಡುಬಿಟ್ಟಿರುವ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಗುಂಪು ಇದೀಗ ಅನರ್ಹತೆ ಮತ್ತು ಮುಂದಿನ ಸರಕಾರ ರಚನೆ ವಿಷಯದಲ್ಲಿ ತೀವ್ರ ಗೊಂದಲದಲ್ಲಿದೆ. ಹೀಗಾಗಿ ಅದು ಶನಿವಾರ ರಾತ್ರಿ ತುಂಬ ಹೊತ್ತಿನವರೆಗೆ ಕಾನೂನಾತ್ಮಕ ವಿಚಾರಗಳು ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿತು. ಇತ್ತ ಉದ್ಧವ್ ಠಾಕ್ರೆ ಬಣದಲ್ಲೂ ಭಾರಿ ಮೀಟಿಂಗ್‌ಗಳು ನಡೆದಿವೆ.
ಅನರ್ಹತೆ ನೋಟಿಸ್ ಚರ್ಚೆ
ಬಂಡಾಯ ಬಣದ ೧೬ ಶಾಸಕರ ವಿರುದ್ಧ ಡೆಪ್ಯುಟಿ ಸ್ಪೀಕರ್ ಹೊರಟಿರುವ ಶೋಕಾಸ್ ನೋಟಿಸ್‌ಗೆ ಸೋಮವಾರ ಸಂಜೆ ೫.೩೦ರೊಳಗೆ ಉತ್ತರ ನೀಡಬೇಕಾಗಿದ್ದು, ಅದರ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ. ಪ್ರತಿಯೊಬ್ಬರೂ ಸ್ಪಷ್ಟವಾದ ಮತ್ತು ನಿಖರವಾದ ಉತ್ತರ ನೀಡಬೇಕು ಎಂದು ಸೂಚಿಸಲಾಗಿದೆ. ತುರ್ತಾಗಿ ಕರೆದ ಶಾಸಕಾಂಗ ಪಕ್ಷ ಸಭೆಗೆ ಹೋಗಿಲ್ಲ ಎಂಬ ಒಂದೇ ಕಾರಣವನ್ನು ಇಟ್ಟುಕೊಂಡು ಶಾಸಕತ್ವದಿಂದ ಅನರ್ಹಗೊಳಿಸಲಾಗದು ಎಂಬ ವಾದವನ್ನು ಎಲ್ಲರೂ ಮಂಡಿಸಲಿದ್ದಾರೆ. ಜತೆಗೆ ಯಾಕೆ ಬರಲಾಗಿಲ್ಲ ಎಂಬುದಕ್ಕೂ ಕಾರಣ ನೀಡಲಿದ್ದಾರೆ.
ರಾಜ್ಯದೆಲ್ಲೆಡೆ ಬಿಗಿ ಭದ್ರತೆ
ಈ ನಡುವೆ, ಶಿವಸೇನೆಯ ಎರಡು ಬಣಗಳ ಕಾರ್ಯಕರ್ತರ ನಡುವೆ ಬೀದಿ ಕಾಳಗ ನಡೆಯಬಹುದು ಎಂಬ ಆತಂಕವಿದ್ದು ಎಲ್ಲ ಕಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಶನಿವಾರ ಕೆಲವು ಬಂಡಾಯ ಶಾಸಕರ ಮನೆಗೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಜತೆಗೆ ಒಟ್ಟಾರೆಯಾಗಿ ಮುಂಬಯಿಯನ್ನು ಕಟ್ಟೆಚ್ಚರದ ಸ್ಥಿತಿಯಲ್ಲಿ ಇರಿಸಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರ ಮನೆ ಇರುವ ಠಾಣೆಯಲ್ಲಿ ಹೆಚ್ಚಿನ ಭದ್ರತೆ ಸಜ್ಜುಗೊಳಿಸಲಾಗಿದೆ. ಶಿಂಧೆ ಅವರ ಮನೆಯನ್ನು ಪೊಲೀಸರು ತೀವ್ರ ಕಟ್ಟೆಚ್ಚರದಿಂದ ಗಮನಿಸುತ್ತಿದ್ದಾರೆ. ಎಲ್ಲೂ ಹಿಂಸೆಗೆ ಅವಕಾಶವಿಲ್ಲ ಎಂದು ಡಿಜಿಪಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ| Maharashtra politics: ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಗೆ ಕೊರೊನಾ ಸೋಂಕು