ಮುಂಬಯಿ: ಗುರುವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯಲಿರುವ ಅತ್ಯಂತ ಮಹತ್ವದ ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಳ್ಳಬೇಕಿರುವ ಶಿವಸೇನೆಯ ಏಕನಾಥ್ ಶಿಂಧೆ ಬಣ ಗುವಾಹಟಿಯಿಂದ ಗೋವಾಗೆ ಹಾರಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಎಲ್ಲರೂ ತಮ್ಮ ತಮ್ಮ ಬಟ್ಟೆ ಬರೆಗಳನ್ನು ಪ್ಯಾಕ್ ಮಾಡಿ ಇಟ್ಟುಕೊಂಡಿದ್ದಾರೆ.
ಶಿಂಧೆ ಬಣದಲ್ಲಿರುವ ಐವತ್ತು ಶಾಸಕರ ಪೈಕಿ ೧೦ ಮಂದಿ ಮುಂಬಯಿಗೆ ನೇರವಾಗಿ ತೆರಳಲಿದ್ದಾರೆ. ಉಳಿದ ೪೦ ಮಂದಿ ಗೋವಾಕ್ಕೆ ತೆರಳಲಿದ್ದಾರೆ. ಗುರುವಾರ ವಿಮಾನದ ಮೂಲಕ ಮುಂಬಯಿಗೆ ತೆರಳಿ ನೇರವಾಗಿ ವಿಧಾನಸಭೆ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಗೋವಾದ ತಾಜ್ ರೆಸಿಡೆಂಟ್ ಹೋಟೆಲ್‌ನಲ್ಲಿ ಭಿನ್ನ ಶಾಸಕರು ಉಳಿಯಲಿದ್ದು, ಅವರಿಗಾಗಿ ೭೦ ಕೋಣೆಗಳನ್ನು ಬುಕ್ ಮಾಡಲಾಗಿದೆ. ಸಂಜೆ ೩.೩೦ಕ್ಕೆ ಗುವಾಹಟಿಯಿಂದ ಶಾಸಕರನ್ನು ಹೊತ್ತ ಸ್ಪೈಸ್ ಜೆಟ್ ಚಾರ್ಟರ್ಡ್ ವಿಮಾನ ಗೋವಾಕ್ಕೆ ಹಾರಲಿದೆ ಎಂದು ನಿಗದಿಯಾಗಿದೆ. ಆವತ್ತು ಶಾಸಕರು ಸೂರತ್‌ನಿಂದ ಗುವಾಹಟಿಗೆ ಹಾರಿಬಂದ ವಿಮಾನವೇ ಇದು.
ಇದೆಲ್ಲದಕ್ಕೆ ಪೂರಕವಾಗಿ ಶಿಂಧೆ ಬಣದ ಶಾಸಕರು ಬುಧವಾರ ಬೆಳಗ್ಗಿನಿಂದಲೇ ಸಿದ್ಧತೆಯಲ್ಲಿ ತೊಡಗಿದ್ದಾರೆ. ಏಕನಾಥ್ ಶಿಂಧೆ ಅವರು ಬೆಳಗ್ಗೆ ಗುವಾಹಟಿಯ ಕಾಮಾಖ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಉಳಿದ ಶಾಸಕರು ವಿಶೇಷವಾಗಿ ವ್ಯವಸ್ಥೆ ಮಾಡಿದ ಬಸ್ಸಿನಲ್ಲಿ ಗುವಾಹಟಿ ಸಿಟಿ ರೌಂಡ್ಸ್ ಹೊಡೆದರು. ಜತೆಗೆ ಎಲ್ಲರೂ ತಮ್ಮ ತಮ್ಮ ಬಟ್ಟೆ ಬರೆಗಳನ್ನು ಜೋಡಿಸಿಟ್ಟು ರೆಡಿಯಾಗಿದ್ದಾರೆ.
ಈ ನಡುವೆ, ೩.೩೦ಕ್ಕೇ ವಿಮಾನವೇರಿ ಗೋವಾಕ್ಕೆ ಹೋಗುವ ಪ್ಲ್ಯಾನ್‌ನಲ್ಲಿ ಸಣ್ಣ ಬದಲಾವಣೆ ಆಗಿರುವ ಮಾಹಿತಿ ಬರುತ್ತಿದೆ.
ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದ ಮಹತ್ವದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ಸಂಜೆ ಐದು ಗಂಟೆಗೆ ನಡೆಯಲಿದೆ. ಈ ವಿಚಾರಣೆ ಅತ್ಯಂತ ಮಹತ್ವದ್ದಾಗಿದ್ದು, ಅದರಲ್ಲಿ ಯಾವ ತೀರ್ಮಾನ ಹೊರಬೀಳಲಿದೆ ಎನ್ನುವುದು ಕಾದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ. ಹೀಗಾಗಿ ೩.೩೦ರ ವಿಮಾನ ಪ್ರಯಾಣ ಸಂಜೆ ೬ ಗಂಟೆ ಬಳಿಕ ಮರುನಿಗದಿಯಾಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ| Maha politics: ನಾಳೆ ಸಂಜೆ 5 ಗಂಟೆಗೆ ಅಧಿವೇಶನ ಫಿಕ್ಸ್, ವಿಶ್ವಾಸಮತ ಸಾಬೀತುಪಡಿಸಲು ಠಾಕ್ರೆಗೆ ಆದೇಶ