ಮುಂಬಯಿ: ಗುವಾಹಟಿಯ ಹೋಟೆಲ್‌ನಲ್ಲಿ ಬೀಡುಬಿಟ್ಟು ರಾಜಕೀಯ ನಡೆಸುತ್ತಿರುವ ಏಕನಾಥ್ ಶಿಂಧೆ ಬಣದಲ್ಲಿ ಶಿವಸೇನೆಯ ೪೭ ಮಂದಿ ಶಾಸಕರಿದ್ದಾರೆ ಎನ್ನುವುದು ಬಹುತೇಕ ಖಾತ್ರಿಯಾಗಿದೆ. ಯಾಕೆಂದರೆ, ರಾಜ್ಯಪಾಲರು ಕೇಂದ್ರಕ್ಕೆ ಕಳುಹಿಸಿರುವ ಒಂದು ಪಟ್ಟಿಯಲ್ಲಿ ಇಷ್ಟೂ ಜನರ ಹೆಸರನ್ನು ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಇದೆ.
ಶಿವಸೇನೆಯಿಂದ ಬಂಡೆದ್ದಿರುವ ಶಾಸಕರ ಭದ್ರತೆಗೆ ಸಂಬಂಧಿಸಿ ಭಾನುವಾರ ಮೂರು ಪ್ರಮುಖ ಆದೇಶಗಳು ಹೊರಬಿದ್ದಿವೆ. ಮೊದಲನೆಯ ಆದೇಶ ಕೇಂದ್ರ ಸರಕಾರದ್ದು. ಇದರಲ್ಲಿ ೧೫ ಮಂದಿ ರೆಬೆಲ್ ಶಾಸಕರಿಗೆ ವೈ ಶ್ರೇಣಿಯ ಭದ್ರತೆ ನೀಡುವಂತೆ ಸೂಚಿಸಲಾಗಿತ್ತು.
ಎರಡನೇ ಆದೇಶವನ್ನು ಹೊರಡಿಸಿದ್ದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು. ಅವರು ರಾಜ್ಯದ ಡಿಜಿಪಿ ಅವರಿಗೆ ಒಂದು ಪತ್ರವನ್ನು ಬರೆದು ರೆಬೆಲ್ ಶಾಸಕರಿಗೆ ಸೇರಿದ, ಮಹಾರಾಷ್ಟ್ರದಲ್ಲಿರುವ ಕುಟುಂಬಗಳಿಗೆ ರಕ್ಷಣೆ ನೀಡಬೇಕು ಎಂದು ಸೂಚಿಸಿದ್ದರು.
ಇದರ ಬೆನ್ನಿಗೇ ರಾಜ್ಯಪಾಲರು ಮೂರನೇ ಪತ್ರ ಬರೆದಿದ್ದಾರೆ. ಇದು ಕೇಂದ್ರ ಗೃಹ ಸಚಿವಾಲಯಕ್ಕೆ ಬರೆದ ಪತ್ರವಾಗಿದೆ. ಇದರಲ್ಲಿ ಶಿವಸೇನೆಯ ೪೭ ರೆಬೆಲ್ ಶಾಸಕರಿಗೆ ಮತ್ತು ಅವರ ಕುಟುಂಬಿಕರಿಗೆ ಭದ್ರತೆ ಒದಗಿಸುವಂತೆ ಕೋರಲಾಗಿದೆ. ಇವರಿಗೂ ಕೂಡಾ ವೈ ಶ್ರೇಣಿಯ ಭದ್ರತೆ ನೀಡುವಂತೆ ರಾಜ್ಯಪಾಲರು ಕೋರಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ, ಶಿಂಧೆ ಬಣದಲ್ಲಿ ೪೭ ಶಾಸಕರು ಇರುವುದು ರಾಜ್ಯಪಾಲರಿಗೆ ಖಾತ್ರಿ ಆಗಿದೆ ಎಂಬ ಅಭಿಪ್ರಾಯ ಬರುತ್ತಿದೆ.
ಸಂಖ್ಯೆಗಳ ಬಗ್ಗೆಯೇ ಗೊಂದಲ
ಶಿಂಧೆ ಬಣದಲ್ಲಿ ೫೦ಕ್ಕಿಂತಲೂ ಅಧಿಕ ಮಂದಿ ಇದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇದರಲ್ಲಿ ಐವರು ಪಕ್ಷೇತರರು ಮತ್ತು ಇಬ್ಬರರು ಇನ್ನೊಂದು ಪಕ್ಷದ ಶಾಸಕರೂ ಇದ್ದಾರೆ ಎನ್ನಲಾಗಿದೆ. ಭಾನುವಾರವೂ ಒಬ್ಬ ಸಚಿವರು ಅಲ್ಲಿಗೆ ತೆರಳಿದ್ದಾರೆ. ಅಲ್ಲಿಗೆ ಒಟ್ಟಾರೆ ಶಿಂಧೆ ಬಣದಲ್ಲಿ ೫೪ ಮಂದಿ ಇದ್ದ ಹಾಗಿದೆ. ಅವರಲ್ಲಿ ಅವರಲ್ಲಿ ಏಳು ಮಂದಿಯನ್ನು ಬಿಟ್ಟು ೪೭ ಮಂದಿ ಶಿವಸೇನೆ ಶಾಸಕರೇ ಆಗಿರಬೇಕು. ಅಲ್ಲಿಗೆ ಉದ್ಧವ್ ಠಾಕ್ರೆ ಬಣದಲ್ಲಿ ಕೇವಲ ಒಂಬತ್ತು ಶಾಸಕರಷ್ಟೇ ಉಳಿದಂತಾಗಿದೆ.
ಇದನ್ನೂ ಓದಿ| Maha politics: 15 ರೆಬೆಲ್ ಶಾಸಕರಿಗೆ ಸಿಆರ್‌ಪಿಎಫ್ ಭದ್ರತೆ, ಎಲ್ಲ ಶಾಸಕರ ಕುಟುಂಬಕ್ಕೆ ಸೆಕ್ಯುರಿಟಿಗೆ ಆರ್ಡರ್