ಮುಂಬಯಿ: ಗುವಾಹಟಿಯಲ್ಲಿರುವ ಶಿವಸೇನೆಯ ಏಕನಾಥ್ ಶಿಂಧೆ ಅವರ ನೇತೃತ್ವದ ಬಂಡಾಯ ಶಾಸಕರ ಗುಂಪು ತಮ್ಮ ಬಣಕ್ಕೆ ʻಶಿವಸೇನಾ ಬಾಳಾ ಸಾಹೇಬ್ʼ ಎಂಬ ಹೆಸರು ಇಡಲು ಮುಂದಾಗಿರುವುದನ್ನು ಶನಿವಾರ ಸಂಜೆ ನಡೆದ ಶಿವಸೇನಾ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತೀವ್ರವಾಗಿ ಆಕ್ಷೇಪಿಸಲಾಗಿದೆ.
ಯಾರಾದರೂ ಠಾಕ್ರೆ ಇಲ್ಲವೇ ಸೇನೆ ಹೆಸರನ್ನು ಬಳಸಿಕೊಂಡರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕಾರಿಣಿ ನಿರ್ಧರಿಸಿ ಅದರ ಅಧಿಕಾರವನ್ನು ಉದ್ಧವ್ ಠಾಕ್ರೆ ಅವರಿಗೆ ವಹಿಸಿತು. ಈ ನಡುವೆ, ಸಭೆಯಲ್ಲಿ ಭಾಗವಹಿಸಿದ್ದ ಶಿವಸೇನಾ ಸಂಸದರಾದ ಸಂಜಯ್ ರಾವತ್, ʻʻಒಂದು ವೇಳೆ ಅವರಿಗೆ ಮತ ಬೇಕು ಅಂದರೆ ಅವರಪ್ಪನ ಹೆಸರು ಬಳಸಿಕೊಳ್ಳಿ, ನನ್ನಪ್ಪನ ಹೆಸರು ಯಾಕೆ ಬಳಸಬೇಕು ಎಂದು ಉದ್ಧವ್‌ಜಿ ಪ್ರಶ್ನಿಸಿದರುʼʼ ಎಂದು ಹೇಳಿದರು.
ಸಭೆಯಲ್ಲಿ ಆರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
೧. ರೆಬೆಲ್ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪೂರ್ಣಾಧಿಕಾರವನ್ನು ನೀಡಲಾಗಿದೆ.
೨. ಮುಂದಿನ ಎಲ್ಲ ಚುನಾವಣೆಗಳನ್ನು ಉದ್ಧವ್ ಠಾಕ್ರೆ ಅವರ ನೇತೃತ್ವದಲ್ಲೇ ಎದುರಿಸಲಾಗುವುದು.
೩. ಈ ಪಕ್ಷ ಬಾಳಾ ಸಾಹೇಬ್ ಠಾಕ್ರೆ ಅವರಿಗೆ ಸೇರಿದ್ದು, ಅವರ ಹೆಸರನ್ನು ಯಾರೂ ಬಳಸಿಕೊಳ್ಳುವಂತಿಲ್ಲ ಮತ್ತು ಅವರ ಹೆಸರಲ್ಲಿ ಬೇರೆ ಗುಂಪನ್ನು ರಚಿಸಿಕೊಳ್ಳುವಂತಿಲ್ಲ.
೪. ಸಂಘಟಿತ ಮಹಾರಾಷ್ಟ್ರಕ್ಕೆ ಸಂಬಂಧಿಸಿ ಪಕ್ಷದ ಸಿದ್ಧಾಂತದಲ್ಲಿ ಯಾವುದೇ ರಾಜಿ ಇಲ್ಲ.
೫. ಬಾಳಾ ಸಾಹೇಬ್ ಠಾಕ್ರೆ ಅವರ ಹಿಂದುತ್ವ ಸಿದ್ಧಾಂತದ ಪಾಲನೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.
೬. ಯಾರಾದರೂ ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರನ್ನು ಬಳಸಿಕೊಂಡರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು.
ಇದನ್ನೂ ಓದಿ ಶಿವಸೇನಾ ಬಾಳಾ ಸಾಹೇಬ್ ಎಂದು ಹೆಸರು ಇಟ್ಟುಕೊಂಡ ಶಿಂಧೆ ಬಣ, ಯಾವುದೇ ಪಕ್ಷದ ಜತೆ ವಿಲೀನ ಆಗಲ್ಲ