ಮುಂಬಯಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಮಂಗಳವಾರ ರಾತ್ರಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿದ್ದು, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ ಅಘಾಡಿ ಸರಕಾರಕ್ಕೆ ಸೂಚಿಸುವಂತೆ ಮನವಿ ಮಾಡಿದ್ದಾರೆ.
ಮಧ್ಯಾಹ್ನ ದಿಲ್ಲಿಗೆ ತೆರಳಿದ್ದ ಅವರು ಅಲ್ಲಿ ಹಿರಿಯ ನಾಯಕ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಿ ರಾತ್ರಿ ಮುಂಬಯಿಗೆ ಮರಳಿದ್ದರು. ಅಲ್ಲಿಂದ ರಾತ್ರಿ ೧೦ ಗಂಟೆಯ ಹೊತ್ತಿಗೆ ರಾಜ ಭವನಕ್ಕೆ ತೆರಳಿದ್ದಾರೆ. ಶಿವಸೇನೆಯ ಏಕನಾಥ್ ಶಿಂಧೆ ಬಣ ಬಂಡಾಯವೆದ್ದಿರುವ ಹಿನ್ನೆಲೆಯಲ್ಲಿ ಮಹಾ ವಿಕಾಸ್ ಅಘಾಡಿ ಪಕ್ಷ ಅಲ್ಪಮತಕ್ಕೆ ಇಳಿದಿದೆ ಎಂಬ ವಾದದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಮಧ್ಯಪ್ರವೇಶಕ್ಕೆ ಕೋರಿಕೆ
ʻʻನಾವು ರಾಜ್ಯಪಾಲರಿಗೆ ಒಂದು ಪತ್ರವನ್ನು ಕೊಟ್ಟಿದ್ದೇವೆ. ಅದರಲ್ಲಿ ಶಿವಸೇನೆಯ ೩೯ ಶಾಸಕರು ತಾವು ಸೇನೆಯೊಂದಿಗೆ ಇಲ್ಲ ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದೇವೆ. ನಾವು ಮಹಾ ವಿಕಾಸ ಅಘಾಡಿ ಸರಕಾರವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದನ್ನು ತಿಳಿಸಿದ್ದೇವೆ. ಈ ಪರಿಸ್ಥಿತಿಯಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಉದ್ಧವ್ ಠಾಕ್ರೆ ಸರಕಾರಕ್ಕೆ ಸೂಚಿಸುವಂತೆ ಕೋರಿದ್ದೇವೆʼʼ ಎಂದು ರಾಜ್ಯಪಾಲರನ್ನು ಭೇಟಿಯಾದ ಬಳಿಕ ಫಡ್ನವಿಸ್ ತಿಳಿಸಿದರು.
ದಿಲ್ಲಿಯಲ್ಲಿ ಮಾತುಕತೆ
ದೇವೇಂದ್ರ ಫಡ್ನವಿಸ್ ಅವರು ದಿಲ್ಲಿಯಲ್ಲಿ ಹಿರಿಯ ನಾಯಕರ ಜತೆಗಿನ ಮಾತುಕತೆ ವೇಳೆ ಮಹಾರಾಷ್ಟ್ರದ ಸಂಕೀರ್ಣ ರಾಜಕೀಯ ಪರಿಸ್ಥಿತಿಯಲ್ಲಿ ಯಾವ ರೀತಿ ಮುಂದಿನ ದಾಳ ಉರುಳಿಸಬೇಕು ಎಂಬ ಬಗ್ಗೆ ಚರ್ಚಿಸಿರುವ ಸಾಧ್ಯತೆಗಳಿವೆ. ಜತೆಗೆ ಕಾನೂನಿನ ಅಂಶಗಳ ಪರಾಮರ್ಶೆ ನಡೆದಿದೆ. ಅವರ ಜತೆ ದಿಲ್ಲಿಯಲ್ಲಿ ಬಿಜೆಪಿ ಸಂಸದ ಮಹೇಶ್ ಜೇಠ್ಮಲಾನಿ ಅವರು ಕೂಡಾ ಇದ್ದರು. ಅಮಿತ್ ಶಾ ಅವರೊಂದಿಗೆ ಸುಮಾರು ೯೦ ನಿಮಿಷಗಳ ಕಾಲ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಪಕ್ಷೇತರರಿಂದ ಬೆಂಬಲ ಹಿಂದೆಗೆತ
ಈ ನಡುವೆ ಶಿವಸೇನೆಯ ಏಕನಾಥ್ ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿರುವ, ಗುವಾಹಟಿಯ ಹೋಟೆಲ್‌ನಲ್ಲಿ ತಂಗಿರುವ ಒಂಬತ್ತು ಮಂದಿ ಪಕ್ಷೇತರ ಶಾಸಕರು ಅಲ್ಲಿಂದಲೆ ಈ ಮೇಲ್ ಮೂಲಕ ರಾಜ್ಯಪಾಲರಿಗೆ ಪತ್ರ ಬರೆದು ತಾವು ಮಹಾ ವಿಕಾಸ ಅಘಾಡಿ ಸರಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
ಒಂದು ಹಂತದಲ್ಲಿ ಏಕನಾಥ ಶಿಂಧೆ ಬಣದ ಶಿವಸೇನಾ ಶಾಸಕರಲ್ಲಿ ಕೆಲವರು ಮುಂಬಯಿಗೆ ಬಂದು ಬೆಂಬಲ ವಾಪಸ್ ಪಡೆದಿರುವ ಪತ್ರಗಳನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಬಳಿಕ ಪ್ಲ್ಯಾನ್ ಬದಲಾಗಿದೆ. ಇದೀಗ ಒಂಬತ್ತು ಪಕ್ಷೇತರ ಶಾಸಕರನ್ನು ಬಳಸಿಕೊಂಡು ಹೊಸ ದಾಳ ಉರುಳಿಸಿದ್ದಾರೆ ಎಂದು ಹೇಳಲಾಗಿದೆ.
ಈ ಶಾಸಕರು ಮಹಾ ವಿಕಾಸ ಅಘಾಡಿ ಸರಕಾರ ಬಹುಮತ ಕಳೆದುಕೊಂಡಿದ್ದು ಅದು ಸದನದಲ್ಲಿ ತನ್ನ ಬಲ ಸಾಬೀತುಪಡಿಸುವಂತೆ ಸೂಚಿಸುವಂತೆ ರಾಜ್ಯಪಾಲರನ್ನು ಕೋರಿದ್ದಾರೆ.
ಪತ್ರ ಬರೆದ ಶಾಸಕರೆಂದರೆ, ಪ್ರಹಾರ್ ಪಾರ್ಟಿಯ ರಾಜ್ ಕುಮಾರ್ ಪಟೇಲ್, ಪಕ್ಷೇತರರಾದ ಆಶೀಶ್ ಜೈಸ್ವಾಲ್, ರಾಜೇಂದ್ರ ಎಡ್ರೋಕರ್, ನರೇಂದ್ರ ಬೊಂದೇಕರ್, ಮಂಜುಳಾ ಗಾವಿತ್, ಗೀತಾ ಜೈನ್, ವಿನೋದ್ ಅಗರ್ವಾಲ್ ಮತ್ತು ಚಂದ್ರಶೇಖರ್ ಪಾಟೀಲ್.
ಇದನ್ನೂ ಓದಿ| ಮಹಾರಾಷ್ಟ್ರದಲ್ಲಿ ಶಿಂಧೆ ಬಣದ ಬೆಂಬಲ ಪಡೆದು ಹೊಸ ಸರ್ಕಾರ ರಚನೆಗೆ ಬಿಜೆಪಿ ಸಜ್ಜು