Site icon Vistara News

Maha politics: ಡಿಸಿಎಂ ಆಗಲು ಒಪ್ಪಿದ ಫಡ್ನವಿಸ್‌, ಹೈಕಮಾಂಡ್‌ ಸಲಹೆಗೆ ಮನ್ನಣೆ

devendra fadnvis

ಮುಂಬಯಿ: ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್‌ ಅವರು ಏಕನಾಥ್‌ ಶಿಂಧೆ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಲು ಒಪ್ಪಿದ್ದಾರೆ.

ಅಚ್ಚರಿಯ ನಡೆಯಲ್ಲಿ ಶಿವಸೇನೆಯ ಬಂಡಾಯ ನಾಯಕ ಏಕನಾಥ್‌ ಶಿಂಧೆ ಅವರನ್ನೇ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಎಂದು ಘೋಷಿಸಿದ ದೇವೇಂದ್ರ ಫಡ್ನವಿಸ್‌ ಅವರು ತಾನು ಯಾವುದೇ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದರು.

ಏಕನಾಥ್‌ ಶಿಂಧೆ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಾನು ಯಾವ ಹುದ್ದೆಯನ್ನೂ ವಹಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದ ಫಡ್ನವಿಸ್‌ ಅವರು ಕಿಂಗ್‌ ಮೇಕರ್‌ ಆಗಿ ರಾಜ್ಯ ರಾಜಕಾರಣದಲ್ಲಿ ನೇಪಥ್ಯಕ್ಕೆ ಸರಿಯುವ ಮಾತನ್ನು ಆಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಫಡ್ನವಿಸ್‌ ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳುವಂತೆ ಮನವಿ ಮಾಡಿದೆ. ಹಿರಿಯ ನಾಯಕರಾದ ಅಮಿತ್‌ ಶಾ ಮತ್ತು ಜೆ.ಪಿ. ನಡ್ಡಾ ಅವರಿಬ್ಬರೂ ಮಹಾರಾಷ್ಟ್ರದ ಹಿತದೃಷ್ಟಿಯಿಂದ ಡಿಸಿಎಂ ಹುದ್ದೆ ವಹಿಸಿಕೊಳ್ಳುವಂತೆ ಕೋರಿದ್ದರು.

ಅಂತಿಮವಾಗಿ ಹೈಕಮಾಂಡ್‌ ಮನವಿಗೆ ಮಣಿದ ಫಡ್ನವಿಸ್‌ ಉಪಮುಖ್ಯಮಂತ್ರಿಯಾಗಲು ಒಪ್ಪಿದ್ದಾರೆ. ದೇವೇಂದ್ರ ಫಡ್ನವಿಸ್‌ ಅವರು ೨೦೧೪ರಿಂದ ೨೦೧೯ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.

ಒಪ್ಪಿದರೆಂದ ಜೆ.ಪಿ. ನಡ್ಡಾ
ದೇವೇಂದ್ರ ಫಡ್ನವಿಸ್‌ ಅವರು ಡಿಸಿಎಂ ಆಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಟ್ವೀಟ್‌ ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷವು ಮಹಾರಾಷ್ಟ್ರದ ಜನತೆಯ ಆಶೋತ್ತರಗಳಿಗಾಗಿ ದೊಡ್ಡ ಮನಸ್ಸಿನೊಂದಿಗೆ ಏಕನಾಥ್‌ ಶಿಂಧೆ ಅವರನ್ನು ಬೆಂಬಲಿಸುವ ನಿರ್ಣಯ ಮಾಡಿದೆ. ದೇವೇಂದ್ರ ಫಡ್ನವಿಸ್‌ ಅವರು ಕೂಡಾ ದೊಡ್ಡ ಮನಸು ಮಾಡಿ ಮಂತ್ರಿಮಂಡಲದಲ್ಲಿ ಸೇರಲು ನಿರ್ಧರಿಸಿದ್ದಾರೆ. ಇದು ಮಹಾರಾಷ್ಟ್ರದ ಜನತೆಯ ಬಗ್ಗೆ ಅವರಿಗೆ ಇರುವ ಪ್ರೀತಿಯನ್ನು ತೋರಿಸುತ್ತದೆ ಎಂದು ಜೆ.ಪಿ. ನಡ್ಡಾ ಹೇಳಿದ್ದಾರೆ.

Maha politics | ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಏಕನಾಥ ಶಿಂಧೆ

Exit mobile version