Site icon Vistara News

ರಾಜ್‌ ಠಾಕ್ರೆ ಗುಂಪಿನ ಏಕೈಕ ಶಾಸಕನ ಬೆಂಬಲ ಶಿಂಧೆಗೆ, ಅಧಿವೇಶನಕ್ಕೆ ಮುನ್ನ ಮುಂಬಯಿ ಫುಲ್‌ ಅಲರ್ಟ್‌

ಮುಂಬಯಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಾ ವಿಕಾಸ ಅಘಾಡಿ ಸರಕಾರ ವಿಶ್ವಾಸಮತ ಯಾಚನೆಗೆ ಸಮಯ ಸನ್ನಿಹಿತವಾಗುತ್ತಿರುವಂತೆಯೇ ಶಿವಸೇನೆಯ ಬಂಡಾಯ ಗುಂಪಿನ ಬಲ ಇನ್ನಷ್ಟು ಹೆಚ್ಚಿದೆ. ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನಿರ್ಮಾಣ ಸೇನೆ (ಎಂಎನ್‌ಎಸ್‌ )ಯ ಏಕೈಕ ಶಾಸಕರು ಇದೀಗ ಏಕನಾಥ್‌ ಶಿಂಧೆ ಬಣಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ.

ಗುವಾಹಟಿಯಲ್ಲಿರುವ ಏಕನಾಥ್‌ ಶಿಂಧೆ ಅವರು ಮಂಗಳವಾರ ರಾಜ್‌ ಠಾಕ್ರೆ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್‌ ಠಾಕ್ರೆ ಶಿವಸೇನೆಯ ಮೂಲ ಸತ್ವಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಂಡಾಯ ಬಣಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ೨೦೦೬ರಲ್ಲಿ ಶಿವಸೇನೆಯಿಂದ ದೂರಾಗಿದ್ದ ರಾಜ್‌ ಠಾಕ್ರೆ ಎಂಎನ್‌ಎಸ್‌ ಸ್ಥಾಪಿಸಿದ್ದರು.

ಗೋವಾ ತಲುಪಿದ ಶಿಂಧೆ ಬಣ
ಈ ನಡುವೆ ಗುವಾಹಟಿಯ ಹೋಟೆಲ್‌ನಲ್ಲಿ ತಂಗಿದ್ದ ಏಕನಾಥ್‌ ಶಿಂಧೆ ಬಣದ ೫೦ ಶಾಸಕರು ಗೋವಾದ ತಾಜ್‌ ರೆಸಿಡೆಂಟ್ ಹೋಟೆಲ್‌ಗೆ ವಿಮಾನ ಮೂಲಕ ತಲುಪಿದ್ದು, ಗುರುವಾರ ಮುಂಬಯಿಗೆ ಬರಲಿದ್ದಾರೆ.
ಈ ನಡುವೆ, ವಿಧಾನಸಭಾ ಅಧಿವೇಶನ, ವಿಶ್ವಾಸ ಮತ ಯಾಚನೆ ಮತ್ತು ಏಕನಾಥ್‌ ಶಿಂಧೆ ಬಣದ ಶಾಸಕರು ಮುಂಬಯಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ರೆಬೆಲ್‌ ಶಾಸಕರಿಗೆ ಪೂರ್ಣ ಪ್ರಮಾಣದ ಭದ್ರತೆ ಒದಗಿಸಬೇಕು ಎಂದು ಈಗಾಗಲೇ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಕೇಂದ್ರ ಗೃಹ ಇಲಾಖೆ ಕೂಡಾ ಭದ್ರತೆಯ ಮುನ್ನೆಚ್ಚರಿಕೆ ವಹಿಸಲು ಆದೇಶಿಸಿದೆ. ಈ ನಡುವೆ, ಭಾರತೀಯ ಜನತಾ ಪಕ್ಷದ ಸದಸ್ಯರು ಕೂಡಾ ಹೆಚ್ಚಿನ ಭದ್ರತೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ| Maha politics: ನಾಳೆ ಸಂಜೆ 5 ಗಂಟೆಗೆ ಅಧಿವೇಶನ ಫಿಕ್ಸ್‌, ವಿಶ್ವಾಸಮತ ಸಾಬೀತುಪಡಿಸಲು ಠಾಕ್ರೆಗೆ ಆದೇಶ

Exit mobile version