ಮುಂಬಯಿ: ಮಹಾರಾಷ್ಟ್ರ ರಾಜಕೀಯದಲ್ಲಿ ತಾವೇ ಮೇಲು ಎಂದು ಶಿವಸೇನೆಯ ಎರಡೂ ಬಣಗಳು ಸಾರುತ್ತಿವೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಬಣ ಶಾಸಕರ ಸಂಖ್ಯೆ ತೋರಿಸಿ ಗೆಲುವು ನಮ್ಮದೇ ಎನ್ನುತ್ತಿದ್ದರೆ, ಇತ್ತ ಉದ್ಧವ್ ಠಾಕ್ರೆ ಬಣ ಕಾನೂನು, ಅನರ್ಹತೆಯ ಅಸ್ತ್ರಗಳನ್ನು ಮುಂದಿಟ್ಟುಕೊಂಡು ಅಂತಿಮ ವಿಜಯಕ್ಕೆ ಸಿದ್ಧರಾಗೋಣ ಅಂತ ಹುರಿದುಂಬಿಸಿಕೊಳ್ಳುತ್ತಿದೆ.
ಇದೆಲ್ಲದರ ನಡುವೆಯೇ ಏಕನಾಥ್ ಶಿಂಧೆ ಬಣ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಬಾರಿ ಅವರ ಟೀಮಿಗೆ ದೊಡ್ಡ ಶಕ್ತಿಯೊಂದು ಸೇರ್ಪಡೆಗೊಂಡಿದೆ. ಅವರು ದೊಡ್ಡ ಶಕ್ತಿಯೋ ಗೊತ್ತಿಲ್ಲ. ಆದರೆ, ಅವರ ಸೋದರ ಮಾತ್ರ ಉದ್ಧವ್ ಠಾಕ್ರೆ ಬಣದ ಪರಮ ಶಕ್ತಿ!
ಅಂದರೆ, ಈ ಬಾರಿ ಏಕನಾಥ್ ಶಿಂಧೆ ಬಣವನ್ನು ಸೇರಲು ಹೊರಟಿರುವುದು ಬೇರೆ ಯಾರೂ ಅಲ್ಲ. ಉದ್ಧವ್ ಟೀಮ್ ಪರವಾಗಿ ಭರ್ಜರಿ ವಾದ ಮಂಡನೆ ಮಾಡುವ, ಎಚ್ಚರಿಕೆ ನೀಡುವ, ರೆಬೆಲ್ ಶಾಸಕರನ್ನು ʻಬನ್ನಿ ಮುಂಬಯಿಗೆʼ ಎಂದು ಪಂಥಾಹ್ವಾನ ನೀಡುವ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಖಾಸಾ ಸೋದರ ಶಾಸಕ ಸುನಿಲ್ ರಾವತ್! ಅವರು ಈಗ ಏಕನಾಥ್ ಶಿಂಧೆ ಬಣದ ಜತೆ ನೇರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಸುನಿಲ್ ರಾವತ್‌ಗೆ ಇರುವ ಸಿಟ್ಟೇನೆಂದರೆ ಮಹಾ ವಿಕಾಸ ಅಘಾಡಿ ಸರಕಾರ ರಚನೆಯಾದರೂ ತನಗೆ ಮಂತ್ರಿ ಪಟ್ಟ ಕೊಟ್ಟಿಲ್ಲ ಎನ್ನುವುದು. ಸಂಜಯ್ ರಾವತ್ ಅವರು ಕೂಡಾ ಈ ಹಿಂದೆ ಹಲವು ಬಾರಿ ಸೋದರನಿಗೆ ಮಂತ್ರಿ ಪಟ್ಟ ಕೊಡಿಸಲು ಪ್ರಯತ್ನಿಸಿ ವಿಫಲರಾಗಿದ್ದರು. ಈಗಲೂ ಅವರು ಅಘಾಡಿ ಸರಕಾರವನ್ನು ಉಳಿಸಿಕೊಳ್ಳುವ ದೊಡ್ಡ ಪ್ರಯತ್ನವನ್ನೇ ಮಾಡುತ್ತಿದ್ದು, ಅದು ಸಾಧ್ಯವಾದರೆ ದೊಡ್ಡ ಹುದ್ದೆ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಆದರೆ, ಒಪ್ಪಿಕೊಳ್ಳೋದೇ ಡೌಟು!
ಸುನಿಲ್ ರಾವತ್ ಅವರು ಕಳೆದ ಕೆಲವು ದಿನಗಳಿಂದ ರೆಬೆಲ್ ಶಾಸಕರ ಜತೆ ಸಂಪರ್ಕದಲ್ಲಿದ್ದಾರೆ ಎನ್ನುವುದು ಸ್ಪಷ್ಟ. ಆದರೆ, ಏಕನಾಥ್ ಶಿಂಧೆ ಅವರು ಸುನಿಲ್ ಅವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಕ್ಕೆ ಅಷ್ಟೇನೂ ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಅಣ್ಣ ಸಂಜಯ್ ರಾವತ್ ಅವರು ಏಕನಾಥ್ ಶಿಂಧೆ ಬಣದ ಮೇಲೆ ಮಾಡುತ್ತಿರುವ ನಿರಂತರ ಟೀಕೆಗಳು.
ಭಾನುವಾರವೂ ಸಂಜಯ್ ರಾವತ್ ತಮ್ಮ ದಾಳಿಯನ್ನು ಮುಂದುವರಿಸಿದ್ದು, ರೆಬೆಲ್ ಶಾಸಕರು ತಾಕತ್ತಿದ್ದರೆ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಿ ಗೆದ್ದುಬರಲಿ ಎಂದು ಸವಾಲು ಹಾಕಿದರು. ಈ ಹಿಂದೆ ಮುಂಬಯಿಗೆ ಬನ್ನಿ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದರು.
ಆದರೂ ಒಂದೊಮ್ಮೆ ಸುನಿಲ್ ರಾವತ್ ಅವರು ಏಕನಾಥ್ ಶಿಂಧೆ ಬಣವನ್ನೇನಾದರೂ ಸೇರಿಕೊಂಡರೆ ಅದು ಉದ್ಧವ್ ಠಾಕ್ರೆ ಬಣಕ್ಕೆ ದೊಡ್ಡ ಹೊಡೆತವೇ ಆಗಲಿದೆ.
ಶಿಕ್ಷಣ ಸಚಿವ ಸಾಮಂತ್ ಸೇರ್ಪಡೆ
ಇಷ್ಟೆಲ್ಲದರ ನಡುವೆಯೇ ಇದುವರೆಗೂ ಉದ್ಧವ್ ಠಾಕ್ರೆ ಬಣದಲ್ಲಿದ್ದ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಾವಂತ್ ಅವರು ಆಗಲೇ ಗುವಾಹಟಿ ಸೇರಿಬಿಟ್ಟಿದ್ದಾರೆ. ಭಾನುವಾರ ಅವರು ಸೂರತ್‌ನಿಂದ ವಿಶೇಷ ವಿಮಾನದಲ್ಲಿ ಗುವಾಹಟಿ ತಲುಪಿದ್ದು ಅವರನ್ನು ಶಿಂಧೆ ಬಣ ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದೆ. ಅಂದ ಹಾಗೆ ಸಾಮಂತ್ ಅವರು ಶಿಂಧೆ ಬಣ ಸೇರಿದ ಒಂಬತ್ತನೇ ಶಿವಸೇನಾ ಮಂತ್ರಿ.
ಇದನ್ನೂ ಓದಿ| Maha politics: ಬೀದಿಯಲ್ಲಿ ನೋಡಿಕೊಳ್ತೀವಿ ಎಂದ ರಾವತ್, ಮಹಾ ಸಂಘರ್ಷಕ್ಕೆ ತಿರುಗುತ್ತಾ ಬಂಡಾಯ?