Site icon Vistara News

ತಲೆ ಕಡಿದರೂ ಗುವಾಹಟಿಗೆ ಹೋಗೊಲ್ಲ, ನಾಳೆ ಇ.ಡಿ. ಕಚೇರಿಗೂ ಹೋಗೊಲ್ಲ, ಅರೆಸ್ಟ್‌ ಮಾಡ್ಲಿ ಎಂದ ಸಂಜಯ್‌ ರಾವತ್‌

sanjay Raut

ಮುಂಬಯಿ: ಸಾವಿರ ಕೋಟಿ ಮೊತ್ತದ ಪತ್ರಾ ಚಾಲ್‌ ಭೂಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ಸಮನ್ಸ್‌ ಪಡೆದಿರುವ ಶಿವಸೇನಾ ಸಂಸದ ಸಂಜಯ್‌ ರಾವತ್‌ ಅವರು ತಾನು ಬಿಜೆಪಿಯ ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.
ʻʻಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕಾರಣಕ್ಕೂ ನನಗೆ ಇ.ಡಿ ಸಮನ್ಸ್‌ ನೀಡಿದ್ದಕ್ಕೂ ಸಂಬಂಧವಿದೆ ಎನ್ನುವುದು ಚೆನ್ನಾಗಿ ಗೊತ್ತಿದೆ. ನಾವು ಬಾಳಾಸಾಹೇಬರ ಶಿವ ಸೈನಿಕರು ದೊಡ್ಡ ಹೋರಾಟವೊಂದಕ್ಕೆ ಇಳಿದಿದ್ದೇವೆ. ನಮ್ಮನ್ನು ತಡೆಯುವ ದೊಡ್ಡ ಸಂಚು ನಡೆದಿದೆ. ಏನೇ ಆದರೂ, ನನ್ನ ತಲೆಯನ್ನೇ ಕಡಿದರೂ ನಾನು ಗುವಾಹಟಿಗಂತೂ ಹೋಗುವುದಿಲ್ಲ. ಬೇಕಿದ್ದರೆ ನನ್ನನ್ನು ಅರೆಸ್ಟ್‌ ಮಾಡ್ಲಿʼ ಎಂದು ಸವಾಲು ಹಾಕಿದ್ದಾರೆ.
ʻʻಇ.ಡಿ. ನನಗೆ ಸಮನ್ಸ್‌ ನೀಡಿದೆ ಎಂದು ಗೊತ್ತು. ಆದರೆ ನಾನು ಬಗ್ಗುವುದಿಲ್ಲ. ಈ ಕಷ್ಟಕಾಲದಲ್ಲಿ ನಾನು ಪಕ್ಷದೊಂದಿಗೆ ಇರಲೇಬೇಕು. ನನ್ನ ಶಾಸಕರ ಜತೆ ಇರಬೇಕು. ಹಾಗಾಗಿ ನಾನು ಮಂಗಳವಾರ ಇ.ಡಿ. ಕಚೇರಿಗೆ ಹೋಗುವುದಿಲ್ಲ. ಹಾಗಂತ ಹೋಗುವುದಿಲ್ಲ ಎಂದಲ್ಲ, ಸಮಯ ಕೇಳುತ್ತೇನೆ. ಮುಂದೆ ಯಾವತ್ತಾದರೂ ಹೋಗುತ್ತೇನೆʼʼ ಎಂದರು.

ಶುಭವಾಗಲಿ ಎಂದ ಏಕನಾಥ್‌ ಶಿಂಧೆ ಪುತ್ರ!
ಶಿವಸೇನೆಯ ಏಕನಾಥ್‌ ಶಿಂಧೆ ಬಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಸಂಜಯ್‌ ರಾವತ್‌ ಅವರಿಗೆ ಇ.ಡಿ. ಸಮನ್ಸ್‌ ನೀಡಿರುವುದು ಕೆಲವರಿಗೆ ತುಂಬ ಖುಷಿಯಾಗಿದೆ. ʻʻಸಂಜಯ್‌ ರಾವತ್‌ ಅವರೇ ಶುಭಾಯಶಗಳು ನಿಮಗೆ… ಇ.ಡಿ. ಸಮನ್ಸ್‌ ನೀಡಿರುವುದಕ್ಕೆʼ ಎಂದು ಏಕನಾಥ್‌ ಶಿಂಧೆ ಅವರ ಪುತ್ರ ಶ್ರೀಕಾಂತ್‌ ಶಿಂಧೆ ಕುಟುಕಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಕಾಂತ್‌ ಶಿಂಧೆ, ಮಹಾರಾಷ್ಟ್ರದ ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ ಮತ್ತು ಬಂಡಾಯ ಶಾಸಕರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಏನಿದು ರಾವತ್‌ ಭೂಹಗರಣ?

ಪತ್ರಾ ಚಾಲ್‌ ಭೂಹಗರಣ ಎನ್ನುವುದು ೧೦೩೪ ಕೋಟಿ ರೂ. ಹಗರಣ ಎಂದು ಹೇಳಲಾಗಿದೆ. ಇದರಲ್ಲಿ ಪ್ರಧಾನವಾಗಿರುವುದು ಸಂಜಯ್‌ ರಾವತ್‌ ಅವರ ಪತ್ನಿ ವರ್ಷಾ ರಾವತ್‌. ಈ ಹಗರಣ ಹಿಂದೆಯೇ ಬೆಳಕಿಗೆ ಬಂದು ಸಂಜಯ್‌ ರಾವತ್‌ ಅವರ ಆಪ್ತರಾದ ಪ್ರವೀಣ್‌ ರಾವತ್‌ ಅವರಿಗೆ ಸೇರಿದ ೯ ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ವರ್ಷಾ ರಾವತ್‌ ಅವರಿಗೆ ಸೇರಿದ ೨ ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಭೂಮಿಗೆ ಸಂಬಂಧಿಸಿದ ದಾಖಲೆ ಇತ್ಯರ್ಥಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇದಕ್ಕೆ ಭಾರಿ ಪ್ರಮಾಣದ ಲಂಚ ಪಡೆಯಲಾಗಿದೆ ಎನ್ನುವುದು ಪ್ರಧಾನ ಆರೋಪ. ಪ್ರವೀಣ್‌ ರಾವತ್‌ ಅವರು ಸುಮಾರು ೫೫ ಕೋಟಿ ರೂಪಾಯಿಯನ್ನು ವರ್ಷಾ ಅವರ ಖಾತೆಗೆ ಹಸ್ತಾಂತರಿಸಿದ್ದನ್ನು ಇ.ಡಿ ಗಮನಿಸಿದೆ. ಇದರ ಜತೆಗೆ ಸಂಜಯ್‌ ರಾವತ್‌ ಮತ್ತು ಅವರ ಆಪ್ತರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವಿಮಾನ ಯಾನ ಟಿಕೆಟ್‌ಗಳನ್ನು ಕೊಡಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ | ಮಹಾ ಬಿಕ್ಕಟ್ಟಿನ ನಡುವೆಯೇ ಉದ್ಧವ್ ಠಾಕ್ರೆ ಬಣದ ಟ್ರಬಲ್‌ ಶೂಟರ್‌ ಸಂಜಯ್‌ ರಾವತ್‌ಗೆ ಇ.ಡಿ ಸಮನ್ಸ್‌

Exit mobile version