ನವ ದೆಹಲಿ: ಮಹಾರಾಷ್ಟ್ರ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಆಗಿರುವ ನರಹರಿ ಜೈರ್ವಾಲ್ ಅವರಿಗೆ ರೆಬೆಲ್ ಶಾಸಕರ ಅನರ್ಹತೆ ದೂರನ್ನು ಸ್ವೀಕರಿಸಿ ಕ್ರಮ ಕೈಗೊಳ್ಳುವ ಅಧಿಕಾರವಿದೆಯೇ ಎಂಬ ಪ್ರಶ್ನೆ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ತೀವ್ರ ಚರ್ಚೆಗೆ ಒಳಗಾಯಿತು.
ಏಕನಾಥ್ ಶಿಂಧೆ ಮತ್ತು ಟೀಮ್ ಸಲ್ಲಿಸಿದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅನರ್ಹತೆ ವಿಚಾರದಲ್ಲಿ ಅವಸರದ ತೀರ್ಮಾನ ಮಾಡಬಾರದು ಎಂದು ಡೆಪ್ಯೂಟಿ ಸ್ಪೀಕರ್ ಅವರಿಗೆ ಸಲಹೆ ನೀಡಿತು. ಅದಕ್ಕಿಂತಲೂ ಮುಖ್ಯವಾಗಿ ಸುಪ್ರೀಂಕೋರ್ಟ್ ಚರ್ಚೆ ಮಾಡಿದ್ದು, ಡೆಪ್ಯೂಟಿ ಸ್ಪೀಕರ್ ವಿರುದ್ಧ ಸಲ್ಲಿಸಲಾದ ಅವಿಶ್ವಾಸ ಗೊತ್ತುವಳಿಯನ್ನು ತಿರಸ್ಕರಿಸಿದ್ದು ಯಾಕೆ ಎಂಬುದನ್ನು.
ಸಂವಿಧಾನದ ೧೭೯ರ ವಿಧಿಯಡಿ ಡೆಪ್ಯೂಟಿ ಸ್ಪೀಕರ್ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಾಗಿರುತ್ತದೆ. ಅದೇ ವ್ಯಕ್ತಿ ಪಕ್ಷಾಂತರ ನಿಷೇಧ ಕಾಯ್ದೆಯ ೧೦ನೇ ಶೆಡ್ಯೂಲ್‌ನಡಿ ಬರುವ ಶಾಸಕರ ಅನರ್ಹತೆಯನ್ನು ವಿಚಾರಣೆ ನಡೆಸುವುದಕ್ಕೆ ಅರ್ಹತೆ ಹೊಂದಿರುತ್ತಾರೆಯೇ ಎನ್ನುವ ಗಂಭೀರ ಪ್ರಶ್ನೆಯ ಬಗ್ಗೆ ತೀರ್ಮಾನ ಆಗಬೇಕಲ್ಲವೇ ಎಂದು ಸ್ವತಃ ಕೋರ್ಟ್ ಕೇಳಿತು. ಇದೇ ಪ್ರಶ್ನೆಯನ್ನು ಏಕನಾಥ್ ಶಿಂಧೆ ಬಣವೂ ಎತ್ತಿತ್ತು. ʻʻಡೆಪ್ಯೂಟಿ ಸ್ಪೀಕರ್ ಅವರನ್ನು ಕಿತ್ತು ಹಾಕುವ ನಿರ್ಣಯದ ಬಗ್ಗೆ ಒಂದು ತೀರ್ಮಾನವಾಗುವ ವರೆಗೆ ಅವರಿಗೆ ಅನರ್ಹತೆ ಅರ್ಜಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಅವಕಾಶ ನೀಡಬಾರದು ಎಂದು ಶಿಂಧೆ ಬಣ ಕೋರಿತ್ತು. ಇದನ್ನೇ ೧೫ ರೆಬೆಲ್ ಶಾಸಕರ ಪರವಾಗಿ ವಕೀಲರಾಗಿರುವ ನೀರಜ್ ಕಿಶನ್ ಕೌಲ್ ಅವರು ಪ್ರಸ್ತಾಪಿಸಿದರು.
ಡೆಪ್ಯೂಟಿ ಸ್ಪೀಕರ್ ತಾನೇ ಅವಿಶ್ವಾಸ ಗೊತ್ತುವಳಿಯನ್ನು ಎದುರಿಸುತ್ತಿದ್ದರೆ ಅವರಿಗೆ ಅನರ್ಹತೆ ಅರ್ಜಿಯನ್ನು ನಿರ್ಧರಿಸಲು ಅನುಮತಿ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನಬಾಮ್ ರೆಬಿಯಾ ಕೇಸ್‌ನಲ್ಲಿ ಹೇಳಿರುವುದನ್ನು ಕೌಲ್ ಉಲ್ಲೇಖಿಸಿದರು.
ಡೆಪ್ಯೂಟಿ ಸ್ಪೀಕರ್ ವಿರುದ್ಧ ಶಿಂಧೆ ಗುಂಪಿನ 34 ಶಾಸಕರು ಅವಿಶ್ವಾಸ ಸೂಚಕ ಗೊತ್ತುವಳಿಯನ್ನು ಈಮೇಲ್ ಮೂಲಕ ಕಳುಹಿಸಿದ್ದರು. ಆದರೆ, ಇದು ಅನಾಮಧೇಯ ಮೇಲ್‌ಗಳ ಮೂಲಕ ಬಂದಿರುವ ಪತ್ರ ಹಾಗಾಗಿ ಸ್ವೀಕರಿಸಲಾಗದು ಎಂದು ಹೇಳಿ ನರಹರಿ ಜೈರ್ವಾಲ್ ತಿರಸ್ಕರಿಸಿದ್ದರು.
ಸುಪ್ರೀಂಕೋರ್ಟ್‌ನಲ್ಲಿ ಈ ವಿಚಾರ ಪ್ರಸ್ತಾಪಕ್ಕೆ ಬಂದು ಅವರ ವಿರುದ್ಧದ ದೂರನ್ನು ಅವರೇ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಸಾಧ್ಯವೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಆಗ ವಕೀಲರು ಡೆಪ್ಯೂಟಿ ಸ್ಪೀಕರ್ ಪರ ವಕೀಲರು, ಪತ್ರದಲ್ಲಿ ನೈಜತೆ ಇರಲಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂದರು.
ಆಗ ಕೋರ್ಟ್ ನೈಜತೆಯನ್ನು ಯಾರಾದರೂ ಪರಿಶೀಲಿಸಿದ್ದಾರೆಯೆ? ಇದರ ಬಗ್ಗೆ ದಾಖಲೆಗಳಿವೆಯೇ ಎಂದು ಕೇಳಿತು. ಆಗ ವಕೀಲರು ದಾಖಲೆಗಳೇನೂ ಇಲ್ಲ ಎಂದರು. ದೂರು ಸರಿಯಾದ ಈಮೇಲ್ ಐಡಿಗಳಿಂದ ಬಂದಿಲ್ಲ, ನಿರ್ದಿಷ್ಟ ಶಾಸಕರ ಮೇಲ್‌ಗಳಿಂದ ಬಂದಿಲ್ಲ. ಅನಾಮಧೇಯ ಮೇಲ್‌ಗಳಿಂದ ಬಂದಿವೆ. ಹೀಗಾಗಿ ತಿರಸ್ಕರಿಸಲಾಗಿದೆ ಎಂದರು.
ಹಾಗಿದ್ದರೆ ಮುಖ್ಯ ಕಾರ್ಯದರ್ಶಿಗಳು ಈ ಸಂಬಂಧದ ಎಲ್ಲ ದಾಖಲೆ ಪರಿಶೀಲಿಸಿ ವರದಿ ನೀಡಬೇಕು ಎಂದು ಕೋರ್ಟ್ ತಿಳಿಸಿತು.
ಇದನ್ನೂ ಓದಿ| maha politics: ಶಿಂಧೆ ಟೀಮ್‌ಗೆ ಸುಪ್ರೀಂ ರಿಲೀಫ್, ವಿಚಾರಣೆ ಜುಲೈ 11ಕ್ಕೆ ಮುಂದೂಡಿಕೆ, ಅಲ್ಲಿವರೆಗೆ 16 ಶಾಸಕರು ಸೇಫ್