ನವ ದೆಹಲಿ: ಗುರುವಾರ ಸಂಜೆ ೫ ಗಂಟೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂಬ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ಸೂಚನೆಯ ವಿರುದ್ಧ ಮಹಾವಿಕಾಸ ಅಘಾಡಿ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ. ಶಾಸಕರ ಅನರ್ಹತೆ ಕುರಿತ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ರಾಜ್ಯಪಾಲರು ವಿಶ್ವಾಸ ಮತ ಯಾಚಿಸಲು ಸೂಚಿಸುವಂತಿಲ್ಲ ಎಂದು ವಾದಿಸಿ ಠಾಕ್ರೆ ಬಣ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ. ಈ ದಾವೆಯನ್ನು ಸ್ವೀಕರಿಸಿರುವ ಸುಪ್ರೀಂಕೋರ್ಟ್ ಬುಧವಾರ ಸಂಜೆ ಐದು ಗಂಟೆಗೆ ವಿಚಾರಣೆ ನಡೆಸಲು ಸಮಯ ನೀಡಿದೆ.
ಮಹಾರಾಷ್ಟ್ರ ರಾಜ್ಯ ಸರಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ ಅರ್ಜಿಯನ್ನು ಸಲ್ಲಿಸಿದ್ದು, ಅರ್ಜಿಯನ್ನು ಬುಧವಾರ ಸಂಜೆಯೊಳಗೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ. ಪಡಿವಾಳ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ವಿಚಾರಣೆಯನ್ನು ಸಂಜೆ ಐದು ಗಂಟೆಗೆ ನಿಗದಿ ಮಾಡಿತು.
ರಾಜ್ಯ ಸರಕಾರದ ವಾದವೇನು?
ಶಿವಸೇನೆಯ ಏಕನಾಥ್ ಶಿಂಧೆ ಬಣದ ೧೬ ಶಾಸಕರ ವಿರುದ್ಧ ಉದ್ಧವ್ ಠಾಕ್ರೆ ಬಣ ಡೆಪ್ಯೂಟಿ ಸ್ಪೀಕರ್ ಮುಂದೆ ಅನರ್ಹತೆ ಅರ್ಜಿ ದಾಖಲಿಸಿತ್ತು. ಶಾಸಕಾಂಗ ಪಕ್ಷ ಸಭೆಯಲ್ಲಿ ಭಾಗವಹಿಸದ ಕಾರಣಕ್ಕಾಗಿ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಬೇಕು ಎಂಬ ವಾದವನ್ನು ಮಂಡಿಸಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಡೆಪ್ಯೂಟಿ ಸ್ಪೀಕರ್ ನರಹರಿ ಜೈರ್ವಾಲ್ ಅವರು, ʻನಿಮ್ಮನ್ನು ಯಾಕೆ ಶಾಸಕತ್ವದಿಂದ ಅನರ್ಹಗೊಳಿಸಬಾರದುʼ ಎಂದು ಕಾರಣ ಕೇಳಿ ಶಾಸಕರಿಗೆ ನೋಟಿಸ್ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಶಿಂಧೆ ಬಣ ಸುಪ್ರೀಂಕೋರ್ಟ್ ಮೊರೆ ಹೊಕ್ಕಿತ್ತು.
ವಿಚಾರಣೆ ನಡೆಸುವ ವೇಳೆ ಹಲವು ವಿಚಾರಗಳನ್ನು ಪರಿಗಣಿಸಿದ ಕೋರ್ಟ್, ಜುಲೈ ೧೨ರವರೆಗೆ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ಡೆಪ್ಯೂಟಿ ಸ್ಪೀಕರ್‌ಗೆ ಸೂಚಿಸಿತ್ತು.
ಈ ಹಂತದಲ್ಲಿ ಉದ್ಧವ್ ಠಾಕ್ರೆ ಬಣದ ವಕೀಲರಾಗಿರುವ ದೇವದತ್ತ ಕಾಮತ್ ಸುಪ್ರೀಂಕೋರ್ಟ್ ಮುಂದೆ ಒಂದು ನಿವೇದನೆ ಸಲ್ಲಿಸಿದ್ದರು. ʻʻನೀವೇನೋ ಅನರ್ಹತೆ ಪ್ರಕ್ರಿಯೆಗೆ ಜುಲೈ ೧೨ರವರೆಗೆ ತಡೆಯಾಜ್ಞೆ ನೀಡಿದ್ದೀರಿ. ಆದರೆ, ಒಂದು ವೇಳೆ ಅದಕ್ಕಿಂತ ಮೊದಲೇ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದರೆ ಏನು ಮಾಡಬೇಕುʼʼ ಎಂದು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಕೋರ್ಟ್‌ನ ಗಮನಕ್ಕೆ ತರಬಹುದು ಎಂದು ಹೇಳಿದ್ದರು. ಇದರ ಅನುಸಾರವೇ ಇದೀಗ ಠಾಕ್ರೆ ಬಣ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ.
ಮತ ಹಾಕಲು ಅವಕಾಶ ಬೇಡ
-ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿರುವಾಗ ಅದರ ತೀರ್ಪು ಬರುವವರೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಅವಕಾಶ ನೀಡಬಾರದು.
-ಶಿವಸೇನೆಯ ಶಿಂಧೆ ಬಣದ ಶಾಸಕರಿಗೆ ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬಾರದು. ಅದರಲ್ಲೂ ಮುಖ್ಯವಾಗಿ ಅನರ್ಹತೆ ನೋಟಿಸ್‌ಗೆ ಒಳಗಾಗಿರುವ ೧೬ ಮಂದಿಗೆ ಅವಕಾಶ ನೀಡಲೇಬಾರದು ಎಂದು ಸರಕಾರದ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ನಡುವೆ, ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಾವು ವಿಶ್ವಾಸ ಮತ ಯಾಚನೆ ಪರವಾಗಿ ತೀರ್ಪು ಕೊಡುತ್ತೇವೋ, ವಿರುದ್ಧವಾಗಿ ನೀಡುತ್ತೇವೊ ಅದು ಮುಖ್ಯವಲ್ಲ. ನಿಮ್ಮ ಅಹವಾಲನ್ನು ಖಂಡಿತವಾಗಿ ಆಲಿಸುತ್ತೇವೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಏನು ಹೇಳಬಹುದು?
ಸಾಧ್ಯತೆ ೧: ೧೬ ಶಾಸಕರ ಅನರ್ಹತೆ ಪ್ರಶ್ನೆ ವಿಚಾರಣೆಯ ಹಂತದಲ್ಲಿರುವುದರಿಂದ ಅಲ್ಲಿವರೆಗೆ ವಿಶ್ವಾಸ ಮತ ಯಾಚನೆ ಬೇಡ.
ಸಾಧ್ಯತೆ ೨: ವಿಶ್ವಾಸ ಮತಕ್ಕೆ ಆದೇಶ ನೀಡುವುದು ರಾಜ್ಯಪಾಲರ ಪರಮಾಧಿಕಾರ. ಅವರು ಆ ಪ್ರಕ್ರಿಯೆ ನಡೆಸುವಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಬಳಿಕ ಏನಾದರೂ ಕಾನೂನು ಸಮಸ್ಯೆ ಉಂಟಾದರೆ ಕೋರ್ಟ್ ಬಳಿ ಬರಬಹುದು.
ಸಾಧ್ಯತೆ ೩: ೧೬ ಶಾಸಕರ ಅನರ್ಹತೆ ಪ್ರಶ್ನೆ ಕೋರ್ಟ್ ಮುಂದೆ ಇರುವುದರಿಂದ ಅವರ ಮತ ಚಲಾವಣೆಗೆ ಅವಕಾಶ ಬೇಡ.
ಇದನ್ನೂ ಓದಿ: Maha politics: ಡೆಪ್ಯೂಟಿ ಸ್ಪೀಕರ್‌ಗೆ ತರಾಟೆ, ಅವಿಶ್ವಾಸ ಗೊತ್ತುವಳಿ ಅನಾಮಿಕ ಎಂದಿದ್ದಕ್ಕೆ ದಾಖಲೆ ಕೇಳಿದ ಸುಪ್ರೀಂ