Site icon Vistara News

Maha Politics: ರೆಬೆಲ್‌ ಶಾಸಕರ ಮನೆಗೆ ನೀಡಿದ ಭದ್ರತೆ ಹಿಂದೆಗೆತ, ಶಿಂಧೆ ಆಕ್ರೋಶ

Ekanath Shindhe house at thane

ಮುಂಬಯಿ: ಮಹಾರಾಷ್ಟ್ರದ ವಿದ್ಯಮಾನಗಳು ಕೇವಲ ರಾಜಕೀಯ ಮಟ್ಟದಲ್ಲಿ ಉಳಿಯದೆ ಬೀದಿ ಕಾಳಗದ ಹಂತಕ್ಕೂ ಇಳಿಯುತ್ತಿರುವ ಸಾಧ್ಯತೆ ಕಾಣುತ್ತಿದೆ. ಅದರ ನಡುವೆಯೇ ಗುವಾಹಟಿಯ ರ‍್ಯಾಡಿಸನ್‌ ಹೋಟೆಲ್‌ನಲ್ಲಿ ಕುಳಿತು ರಾಜ್ಯ ಸರಕಾರವನ್ನು ನಡುಗಿಸುತ್ತಿರುವ ರೆಬೆಲ್‌ ಶಾಸಕರ ಮನೆಗಳಿಗೆ ನೀಡಿದ ಭದ್ರತೆಯನ್ನೂ ಹಿಂದೆಗೆದುಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ʻನಾವು ಮಾತುಕತೆಗೂ ರೆಡಿ ಇದ್ದೇವೆ. ಕಾನೂನಿನ ಹೋರಾಟಕ್ಕೂ ಸಜ್ಜಾಗಿದ್ದೇವೆ. ನಮ್ಮ ಶಿವಸೈನಿಕರು ಬೀದಿಗಿಳಿದು ಹೋರಾಟ ಮಾಡಲೂ ಸೈʼ ಎಂದು ಉದ್ಧವ್‌ ಠಾಕ್ರೆ ಬಣದ ನಾಯಕ, ಸಂಸದ ಸಂಜಯ್‌ ರಾವತ್‌ ಅವರು ಶುಕ್ರವಾರ ಬೆಳಗ್ಗೆ ಹೇಳಿದ್ದರು. ಇದಾದ ಬಳಿಕ ರಾಜ್ಯದ ನಾನಾ ಭಾಗಗಳಲ್ಲಿ ರೆಬೆಲ್‌ ಶಿವಸೇನಾ ಶಾಸಕರ ಮನೆಗಳ ಮೇಲೆ ದಾಳಿ ನಡೆದಿದೆ. ಜತೆಗೆ ಹಲವು ಕಡೆಗಳಲ್ಲಿ ಅವರ ಭಾವಚಿತ್ರಗಳನ್ನು ಕಿತ್ತೆಸೆಯುವ, ಚಪ್ಪಲಿ ಹಾರ ಹಾಕುವ ವಿದ್ಯಮಾನಗಳೂ ನಡೆದಿವೆ. ಈ ನಡುವೆ, ಕೆಲವು ಕಡೆ ಮನೆಗಳಿಗೂ ದಾಳಿ ಮಾಡುವ ಪ್ರಯತ್ನ ನಡೆದಿದೆ.

ಇದನ್ನೆಲ್ಲ ಗಮನಿಸಿದ ಬಂಡಾಯ ಶಾಸಕರ ನಾಯಕ ಏಕನಾಥ್‌ ಶಿಂಧೆ ಅವರು, ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರಕಾರವು ಶಾಸಕರು ಮತ್ತು ಅವರ ಕುಟುಂಬಕ್ಕೆ ನೀಡಿದ ಭದ್ರತೆಯನ್ನು ಹಿಂದೆಗೆದುಕೊಳ್ಳುವ ಮೂಲಕ ದ್ವೇಷ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಗೃಹ ಸಚಿವ ದಿಲೀಪ್‌ ವಾಲ್ಸೆ ಪಾಟೀಲ್‌, ಡಿಜಿಪಿ ರಜನೀಶ್‌ ಸೇಥ್‌ ಮತ್ತು ಎಲ್ಲ ಪೊಲೀಸ್‌ ಕಮೀಷನರ್‌ಗಳನ್ನು ಉಲ್ಲೇಖಿಸಿ ಪತ್ರವನ್ನು ಬರೆದಿರುವ ಅವರು ಟ್ವಿಟರ್‌ನಲ್ಲೂ ಟ್ಯಾಗ್‌ ಮಾಡಿದ್ದಾರೆ.

ʻʻನಾವು ಈಗ ಹಾಲಿ ಶಾಸಕರು. ಆದರೆ, ನಮ್ಮ ನಿವಾಸಗಳಿಗೆ ಹಾಗೂ ನಮ್ಮ ಕುಟುಂಬಿಕರಿಗೆ ಶಿಷ್ಟಾಚಾರದಂತೆ ನೀಡಲಾಗಿದ್ದ ಭದ್ರತೆಯನ್ನು ಅಕ್ರಮವಾಗಿ ಮತ್ತು ಅನಧಿಕೃತವಾಗಿ ಹಿಂದಕ್ಕೆ ಪಡೆಯಲಾಗಿದೆ. ಇದೊಂದು ದ್ವೇಷದ ಕ್ರಮವಾಗಿದೆ. ಇದು ನಮ್ಮ ಕಠಿಣ ನಿರ್ಧಾರವನ್ನು ಮುರಿಯಲು ಮತ್ತು ಎನ್‌ಸಿಪಿ-ಕಾಂಗ್ರೆಸ್‌ ಗೂಂಡಾಗಳ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಳ್ಳಲಾಗಿದೆ,ʼʼ ಎಂದು ಶಿಂಧೆ ಅವರು ಹೇಳಿದ್ದಾರೆ.

ಹಿಂಸಾಚಾರಕ್ಕೆ ಪ್ರಚೋದನೆ
ಮಹಾ ವಿಕಾಸ ಅಘಾಡಿ ಕೂಟದ ಕೆಲವು ಮಿತ್ರ ಪಕ್ಷಗಳು ನಮ್ಮ ಶಾಸಕರ ಮನೆ ಮೇಲೆ ದಾಳಿ ನಡೆಸುವಂತೆ ತಮ್ಮ ಕಾರ್ಯಕರ್ತರಿಗೆ ಪ್ರಚೋದನೆ ನೀಡುತ್ತಿವೆ. ಒಂದೊಮ್ಮೆ ನಮ್ಮ ಕುಟುಂಬಿಕರಿಗೆ ಏನಾದರೂ ಆದರೆ, ಅದಕ್ಕೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಸಿಎಂ ಉದ್ಧವ್‌ ಠಾಕ್ರೆ, ಆದಿತ್ಯ ಠಾಕ್ರೆ, ಸಂಸದ ಸಂಜಯ್‌ ರಾವತ್‌ ಅವರೇ ಕಾರಣ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ನಿರಾಕರಿಸಿದ ಮಹಾ ಸರಕಾರ
ಆದರೆ, ಶಾಸಕರ ಮನೆಗೆ ನೀಡಿದ ಭದ್ರತೆಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂಬ ಆರೋಪವನ್ನು ಸರಕಾರ ತಳ್ಳಿ ಹಾಕಿದೆ. ʻʻಮುಖ್ಯಮಂತ್ರಿಗಳಾಗಲಿ, ಗೃಹ ಇಲಾಖೆಯಾಗಲೀ ಈ ನಿಟ್ಟಿನಲ್ಲಿ ಯಾವುದೇ ಸೂಚನೆ ನೀಡಿಲ್ಲ. ಟ್ವಿಟರ್‌ ಮೂಲಕ ಮಾಡಲಾಗಿರುವ ಎಲ್ಲ ಆರೋಪಗಳು ಸುಳ್ಳು ಮತ್ತು ಆಧಾರರಹಿತʼʼ ಎಂದು ಗೃಹ ಸಚಿವ ದಿಲೀಪ್‌ ವಾಲ್ಸೆ ಪಾಟೀಲ್‌ ಹೇಳಿದ್ದಾರೆ.

ರಕ್ಷಣೆ ಕೊಟ್ಟಿದ್ದು ನಿಮಗೆ, ಮನೆಗಲ್ಲ!
ಈ ನಡುವೆ, ಎರಡು ಗುಂಪಿನ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಸಂಜಯ್‌ ರಾವತ್‌ ಅವರು ಆರೋಪಕ್ಕೆ ಠಕ್ಕರ್‌ ಕೊಟ್ಟಿದ್ದಾರೆ. ʻʻನೀವೊಬ್ಬ ಶಾಸಕರು. ರಕ್ಷಣೆ ಕೊಟ್ಟಿರುವುದು ನಿಮಗೆ. ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ರಕ್ಷಣೆ ನೀಡಲು ಸಾಧ್ಯವಿಲ್ಲʼʼ ಎಂದಿದ್ದಾರೆ.

ನಿಜವೆಂದರೆ, ಸಂಜಯ್‌ ರಾವತ್‌ ಅವರ ಪ್ರಚೋದನಾತ್ಮಕ ಹೇಳಿಕೆ ಬಳಿಕ ಗುವಾಹಟಿಯಲ್ಲಿರುವ ಶಾಸಕರ ಮನೆಗಳ ಮೇಲೆ ಕೆಲವು ಕಡೆ ದಾಳಿ ನಡೆದಿದೆ. ಇದನ್ನು ಶಿವಸೇನಾ ಕಾರ್ಯಕರ್ತರೇ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಎನ್‌ಸಿಪಿ, ಕಾಂಗ್ರೆಸ್‌ ಕಾರ್ಯಕರ್ತರು ಸೇರಿಕೊಂಡಿದ್ದಾರೆ ಎನ್ನುವ ಆರೋಪವೂ ಇದೆ. ಇದನ್ನೂ ಓದಿ| Maha politics: ಬೀದಿಯಲ್ಲಿ ನೋಡಿಕೊಳ್ತೀವಿ ಎಂದ ರಾವತ್‌, ಮಹಾ ಸಂಘರ್ಷಕ್ಕೆ ತಿರುಗುತ್ತಾ ಬಂಡಾಯ?

Exit mobile version