Site icon Vistara News

Maha politics: ಅನರ್ಹತೆ ನೋಟಿಸ್‌ ಪ್ರಶ್ನಿಸಿ ಸುಪ್ರೀಂ ಬಾಗಿಲು ಬಡಿದ ಶಿಂಧೆ ಟೀಮ್‌, ನಾಳೆಯೇ ವಿಚಾರಣೆಗೆ ಲಿಸ್ಟಿಂಗ್

supreme court

ಮುಂಬಯಿ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ಶಿವಸೇನೆಯ ಏಕನಾಥ್‌ ಶಿಂಧೆ ಬಣ, ೧೬ ಶಾಸಕರಿಗೆ ನೀಡಲಾಗಿರುವ ಅನರ್ಹತೆ ನೋಟಿಸ್‌ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದೆ. ಡೆಪ್ಯುಟಿ ಸ್ಪೀಕರ್‌ ನರಹರಿ ಜೈರ್ವಾಲ್‌ ಅವರು ನೀಡಿರುವ ನೋಟಿಸ್‌ಗೆ ಬಂಡಾಯ ಶಾಸಕರು ಸೋಮವಾರ ಸಂಜೆ ೫.೩೦ರೊಳಗೆ ಉತ್ತರ ನೀಡಬೇಕಾಗಿದೆ. ಅದರ ನಡುವೆಯೇ ಈ ಶಾಸಕರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಎರಡು ಪ್ರತ್ಯೇಕ ದಾವೆಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದು, ಸೋಮವಾರ ಮುಂಜಾನೆಯೇ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲಾಗಿದೆ. ಈ ಮನವಿಗೆ ಸ್ಪಂದಿಸಿರುವ ಕೋರ್ಟ್‌ ವಿಚಾರಣೆಗೆ ಒಪ್ಪಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ.ಬಿ. ಪಡಿವಾಳ ಅವರನ್ನೊಳಗೊಂಡ ಪೀಠದ ಮುಂದೆ ಲಿಸ್ಟಿಂಗ್‌ ಆಗಿದೆ.

ಶಿವಸೇನೆಯಿಂದ ಬಂಡೆದ್ದ ಏಕನಾಥ್‌ ಶಿಂಧೆ ಟೀಮ್‌ ಜೂನ್‌ ೨೦ರಂದು ರಾತ್ರಿ ಸೂರತ್‌ಗೆ ತೆರಳಿ ಅಲ್ಲಿಂದ ಜೂನ್‌ ೨೨ರಂದು ಗುವಾಹಟಿಗೆ ಹಾರಿತ್ತು. ಈ ನಡುವೆ ಜೂನ್‌ ೨೩ರಂದು ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿತ್ತು. ಜತೆಗೆ ಈ ಸಭೆಗೆ ಬಾರದಿದ್ದರೆ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ನೂತನ ವಿಪ್‌ ಸುನಿಲ್‌ ಪ್ರಭು ಸಚೇತಕಾಜ್ಞೆ ಹೊರಡಿಸಿದ್ದರು. ಆದರೆ, ಯಾವ ಬಂಡುಕೋರ ಶಾಸಕರೂ ಸಭೆಗೆ ಬಂದಿರಲಿಲ್ಲ.

ಈ ನಡುವೆ ಶಿವಸೇನೆಯ ಉದ್ಧವ್‌ ಬಣ ಏಕನಾಥ್‌ ಶಿಂಧೆ ಅವರನ್ನು ಶಾಸಕಾಂಗ ಪಕ್ಷ ನಾಯಕನ ಸ್ಥಾನದಿಂದ ಕೆಳಗಿಳಿಸಿ ಅಜಯ್‌ ಚೌಧರಿ ಅವರನ್ನು ನೇಮಿಸಿತ್ತು. ಇದನ್ನು ಡೆಪ್ಯುಟಿ ಸ್ಪೀಕರ್‌ ಆಗಿರುವ ನರಹರಿ ಜೈರ್ವಾಲ್‌ ಅವರು ಮಾನ್ಯ ಮಾಡಿದ್ದರು.

ಇದಾದ ಬೆನ್ನಿಗೇ ಶಾಸಕಾಂಗ ಪಕ್ಷ ನಾಯಕ ಅಜಯ್‌ ಚೌಧರಿ ಅವರು ಡೆಪ್ಯುಟಿ ಸ್ಪೀಕರ್‌ ಅವರಿಗೆ ಪತ್ರವೊಂದನ್ನು ಬರೆದು ಏಕನಾಥ್‌ ಶಿಂಧೆಯೂ ಸೇರಿದಂತೆ ಅವರ ಬಣದ ಒಟ್ಟು ೧೬ ಶಾಸಕರನ್ನು ಶಾಸಕಾಂಗ ಪಕ್ಷ ಸಭೆಗೆ ಆಗಮಿಸದೆ ಇರುವುದು, ಪಕ್ಷ ದ್ರೋಹದ ಕೆಲಸ ಮಾಡುತ್ತಿರುವುದು, ವಿಪ್‌ ಉಲ್ಲಂಘಿಸಿರುವುದು ಮೊದಲಾದ ಕಾರಣಗಳ ಆಧಾರದಲ್ಲಿ ಶಾಸಕತ್ವದಿಂದ ವಜಾ ಮಾಡಬೇಕು ಎಂದು ಕೋರಿದ್ದರು.

ಶನಿವಾರ (ಜೂನ್‌ ೨೫ರಂದು) ಈ ಅರ್ಜಿಯನ್ನು ಪರಿಗಣಿಸಿದ ನರಹರಿ ಜೈರ್ವಾಲ್‌ ಅವರು ೧೬ ಶಾಸಕರಿಗೆ ನೋಟಿಸನ್ನು ನಾನಾ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಕಳುಹಿಸಿ, ಸೋಮವಾರ ಸಂಜೆ ೫.೩೦ರೊಳಗೆ ಉತ್ತರ ನೀಡುವಂತೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದರು. ಇದೀಗ ಏಕನಾಥ್‌ ಶಿಂಧೆ ಬಣ ಎರಡು ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದೆ. ಒಂದು ಅರ್ಜಿಯನ್ನು ಶಿಂಧೆ ಅವರು ಸಲ್ಲಿಸಿದ್ದರೆ ಇನ್ನೊಂದನ್ನು ಶಾಸಕ ಭರತ್‌ ಗೋಗವಾಲೆ ಸಲ್ಲಿಸಿದ್ದಾರೆ.

ಶಿಂಧೆ ಬಣ ವಾದಿಸುವ ಅಂಶಗಳೇನು?
ಶಿಂಧೆ ಬಣ ಎರಡು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದೆ. ಒಂದು, ಅನರ್ಹತೆ ನೋಟಿಸ್‌ ಜಾರಿಗೊಳಿಸಿದ್ದನ್ನು ಪ್ರಶ್ನಿಸಿದ್ದು, ಇನ್ನೊಂದು ಶಾಸಕಾಂಗ ಪಕ್ಷ ನಾಯಕನಾಗಿ ಅಜಯ್‌ ಚೌಧರಿಯನ್ನು ನೇಮಿಸಿರುವುದು.

ಶಿವಸೇನೆಯಲ್ಲಿರುವ ಒಟ್ಟು ೫೬ ಶಾಸಕರಲ್ಲಿ ೪೨ಕ್ಕೂ ಅಧಿಕ ಶಾಸಕರು ನಮ್ಮ ಬಣದಲ್ಲಿದ್ದಾರೆ. ಆದರೂ ಕೇವಲ ಸಭೆಗೆ ಬರಲಿಲ್ಲ ಎಂಬ ಕಾರಣ ನೀಡಿ ೧೬ ಮಂದಿಯ ಮೇಲೆ ಅನರ್ಹತೆ ಶಿಕ್ಷೆ ವಿಧಿಸಲು ಮುಂದಾಗಿರುವುದು ಕಾನೂನುಬಾಹಿರ ಎನ್ನುವುದು ಶಿಂಧೆ ಬಣದ ವಾದ. ಪಕ್ಷದ ಸಭೆಯಲ್ಲಿ ಭಾಗವಹಿಸದೆ ಇರುವುದು ಶಾಸಕತ್ವ ರದ್ಧತಿಗೆ ಅರ್ಹವಾಗುವ ಅಪರಾಧವಲ್ಲ ಎಂದು ಅದು ಪ್ರತಿಪಾದಿಸುತ್ತಿದೆ. ಅದರ ಜತೆಗೆ ತಮ್ಮ ಬಣದಲ್ಲಿ ಮೂರನೇ ಎರಡಕ್ಕಿಂತಲೂ ಜಾಸ್ತಿ ಶಾಸಕರಿದ್ದಾರೆ. ಹಾಗಿರುವಾಗ ಉದ್ಧವ್‌ ಬಣಕ್ಕೆ ತಮ್ಮ ವಿರುದ್ಧ ದೂರು ನೀಡುವ ಅಧಿಕಾರವಿಲ್ಲ ಎಂದು ಶಿಂಧೆ ಬಣ ಹೇಳುತ್ತಿದೆ.

ಎರಡನೇ ಪ್ರಮುಖ ಅಂಶವೆಂದರೆ, ತಮ್ಮನ್ನು ಶಾಸಕಾಂಗ ಪಕ್ಷ ನಾಯಕನ ಸ್ಥಾನದಿಂದ ತಮ್ಮನ್ನು ಹೊರಹಾಕುವ ಹಕ್ಕೇ ಶಿವಸೇನೆಯ ಉದ್ಧವ್‌ ಬಣಕ್ಕಿಲ್ಲ. ಅಂದರೆ ಆವತ್ತು ನಡೆದ ಸಭೆಯಲ್ಲಿ ಪಕ್ಷದ ೫೬ ಶಾಸಕರ ಪೈಕಿ ೧೫ರಷ್ಟು ಶಾಸಕರೇ ಇದ್ದರು. ಹೀಗಾಗಿ ತಮ್ಮ ಬದಲು ಅಜಯ್‌ ಚೌಧರಿ ಅವರನ್ನು ನೇಮಿಸಿದ್ದೇ ಕಾನೂನು ಬಾಹಿರ ಎಂದು ಅದು ವಾದಿಸಲಿದೆ. ಈ ಮೂಲಕ ಅನರ್ಹತೆ ಶಿಕ್ಷೆಯಿಂದ ಪಾರಾಗುವ ಪ್ರಯತ್ನ ನಡೆಸಲಿದೆ.

ಸರಕಾರಕ್ಕೂ ದಾಖಲೆಗಳ ರವಾನೆ
ಒಂದು ಕಡೆ ಸುಪ್ರೀಂಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸುವ ಜತೆಗೆ ಇನ್ನೊಂದು ಕಡೆ ಸರಕಾರದ ವಕೀಲರಿಗೂ ತಮ್ಮ ವಾದಕ್ಕೆ ಪೂರಕವಾದ ದಾಖಲೆಗಳನ್ನು ಶಿಂಧೆ ಬಣ ಕಳುಹಿಸಿದೆ ಎಂದು ಹೇಳಲಾಗಿದೆ. \

ಯಾವ

ಇದನ್ನೂ ಓದಿ| Maha politics: ರಾಜಕೀಯ ಅಖಾಡದಿಂದ ಕಾನೂನು ಹೋರಾಟದತ್ತ ಸಾಗುತ್ತಿದೆ ಶಿವ ಸೇನಾ ಸಮರ

Exit mobile version