ಮುಂಬಯಿ: ಮಹಾರಾಷ್ಟ್ರದಲ್ಲಿರುವ ಶಿವಸೇನೆಯ ೧೮ ಸಂಸದರ ಪೈಕಿ ೧೨ ಮಂದಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ಸೇರುವುದು ಬಹುತೇಕ ಖಚಿತವಾಗಿದೆ. ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅವರೆಲ್ಲರಿಗೆ ವೈ ಕೆಟಗರಿ ಭದ್ರತೆ ನೀಡಲು ನಿರ್ಧರಿಸಿರುವುದರಿಂದ ವಿಭಜನೆ ಇನ್ನಷ್ಟು ಪಕ್ಕಾ ಆಗಿದೆ.
ಸಂಸದರಾದ ಧೈರ್ಯಶೀಲ್ ಸಂಭಾಜಿ ರಾವ್ ಮಾನೆ, ಸದಾಶಿವ ಲೋಖಂಡಡೆ, ಹೇಮಂತ್ ಗೋಡ್ಸೆ, ಹೇಮಂತ್ ಪಾಟೀಲ್, ರಾಜೇಂದ್ರ ಗಾವಿತ್, ಸಂಜಯ್ ಮಾಂಡಲಿಕ್, ಶ್ರೀಕಾಂತ್ ಶಿಂಧೆ, ಶ್ರೀರಂಗ ಬರ್ನೆ, ರಾಹುಲ್ ಶೀವಾಲ್, ಪ್ರತಾಪ ರಾವ್ ಗಣಪತ್ ರಾವ್ ಜಾಧವ್, ಕೃಪಾಲ್ ತುಮಾನೆ ಮತ್ತು ಭಾವನಾ ಗಾವಳಿ ಅವರು ಏಕನಾಥ್ ಶಿಂಧೆ ಬಣ ಸೇರಲಿದ್ದಾರೆ. ಇವರಿಗೆಲ್ಲ ವೈ ಕೆಟಗರಿ ಭದ್ರತೆ ನೀಡುವುದೆಂದು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಅವರ ಮನೆ ಮತ್ತು ಕಚೇರಿಗಳಿಗೆ ಪಾರಾಮಿಲಿಟರಿ ಭದ್ರತೆ ನೀಡಲಾಗುತ್ತದೆ.
ಇದರ ಜತೆಗೇ ಈ ೧೨ ಮಂದಿ ಸಂಸದರು ಲೋಕಸಭೆಯ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರನ್ನು ಭೇಟಿಯಾಗಿ ತಮ್ಮ ಗುಂಪಿಗೆ ಪ್ರತ್ಯೇಕ ವಿಪ್ ಮತ್ತು ಸದನ ನಾಯಕನ ಆಯ್ಕೆಗೆ ಅವಕಾಶ ನೀಡಬೇಕು ಎಂದು ಕೋರುವ ಸಾಧ್ಯತೆಗಳಿವೆ. ಮುಂಬಯಿ ಸಂಸದರಾಗಿರುವ ರಾಹುಲ್ ಶೀವಾಲ್ ಅವರನ್ನು ಸದನ ನಾಯಕರಾಗಿಯೂ ಭವಾನಿ ಗಾವಳಿ ಅವರನ್ನು ಮುಖ್ಯ ಸಚೇತಕರನ್ನಾಗಿಯೂ ನೇಮಿಸುವ ಸಾಧ್ಯತೆಗಳು ಕಂಡುಬಂದಿವೆ.
ಒಬ್ಬಂಟಿಯಾದರಾ ಠಾಕ್ರೆ?
ಈ ನಡುವೆ ನಡೆದ ಇನ್ನೊಂದು ಬೆಳವಣಿಗೆಯಲ್ಲಿ ಮುಖ್ಯಮಂತ್ರಿಗಳ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸರಕಾರದ ವಿರುದ್ಧ ಮತ ಚಲಾಯಿಸಿದ್ದ ಉದ್ಧವ್ ಠಾಕ್ರೆ ಬಣದ ೧೫ ಶಾಸಕರ ಪೈಕಿ ೧೪ ಮಂದಿ ಏಕನಾಥ್ ಶಿಂಧೆ ಬಣಕ್ಕೆ ತೆರಳಲು ನಿರ್ಧರಿಸಿದ್ದಾರೆ. ಇದರೊಂದಿಗೆ ಆದಿತ್ಯ ಠಾಕ್ರೆ ಒಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲ ಶಾಸಕರು ಶಿಂಧೆ ಬಣವನ್ನು ಸೇರಿದಂತಾಗಿದೆ.
ಈ ಶಾಸಕರ ವಿರುದ್ಧ ಅನರ್ಹತೆಯ ಕ್ರಮ ಆಗ್ರಹಿಸಿ ಏಕನಾಥ ಶಿಂಧೆ ಅವರು ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ಇನ್ನಷ್ಟೇ ನಡೆಯಬೇಕಾಗಿದೆ. ಅದರ ನಡುವೆ ಈ ಎಲ್ಲ ಶಾಸಕರು ಶಿಂಧೆ ಬಣಕ್ಕೆ ಜಿಗಿಯಲು ನಿರ್ಧರಿಸಿದಂತಿದೆ.
ಈ ಎಲ್ಲ ಹೊಡೆತಗಳ ನಡುವೆಯೂ ಉದ್ಧವ್ ಠಾಕ್ರೆ ಅವರು ಇನ್ನೂ ತಮ್ಮ ಪಟ್ಟು ಸಡಿಲಿಸಿದಂತೆ ಕಾಣುತ್ತಿಲ್ಲ. ಜನಪ್ರತಿನಿಧಿಗಳು ಹೋದರೆ ಹೋಗಲಿ ಪಕ್ಷವನ್ನು ಬಲಪಡಿಸುತ್ತೇನೆ ಎಂದು ನಾನಾ ವಿಭಾಗಗಳ ಪದಾಧಿಕಾರಿಗಳ ನೇಮಕವನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ| ಶಿವಸೇನಾದ ನೂತನ ಕಾರ್ಯಕಾರಿಣಿ ರಚಿಸಿದ ಶಿಂಧೆ, ಉದ್ಧವ್ ಪಕ್ಷದ ಅಧ್ಯಕ್ಷ