Site icon Vistara News

Maha politics: ಬೀದಿಯಲ್ಲಿ ನೋಡಿಕೊಳ್ತೀವಿ ಎಂದ ರಾವತ್‌, ಮಹಾ ಸಂಘರ್ಷಕ್ಕೆ ತಿರುಗುತ್ತಾ ಬಂಡಾಯ?

Eknath Shindhe supporters

ಮುಂಬಯಿ: ಒಬ್ಬರ ಬೆನ್ನ ಹಿಂದೆ ಇನ್ನೊಬ್ಬರು ಗುವಾಹಟಿಯತ್ತ ಸಾಗಿ ಏಕನಾಥ್‌ ಶಿಂಧೆ ಬಣವನ್ನು ಸೇರಿಕೊಳ್ಳುತ್ತಿರುವ ಬೆಳವಣಿಗೆಯನ್ನು ಅಸಹಾಯಕವಾಗಿ ನೋಡುತ್ತಿರುವ ಉದ್ಧವ್‌ ಠಾಕ್ರೆ ಬಣ ಇದೀಗ ಬೀದಿ ಕಾಳಗದ ಬೆದರಿಕೆ ಒಡ್ಡಿದೆ. ಉದ್ಧವ್‌ ಠಾಕ್ರೆ ಬಣದಲ್ಲಿರುವ ಸಂಜಯ್‌ ರಾವತ್‌ ಅವರು, ಏಕನಾಥ್‌ ಶಿಂಧೆ ಬಣದ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಇದಕ್ಕೆ ಬಗ್ಗದೆ ಹೋದರೆ ಶಿವಸೈನಿಕರು ಹೋರಾಟಕ್ಕಾಗಿ ಬೀದಿಗೆ ಇಳಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಶಿವಸೇನೆಯ ಕಾರ್ಯಕರ್ತರ ನಡುವೆಯೇ ಸಂಘರ್ಷಕ್ಕೆ ಮುನ್ನುಡಿ ಬರೆಯುವ ಪ್ರಯತ್ನ ನಡೆಸಿದ್ದಾರೆ.

ಏಕನಾಥ್‌ ಶಿಂಧೆ ಬಣದಲ್ಲಿ ಸದ್ಯ ೫೦ಕ್ಕೂ ಅಧಿಕ ಶಾಸಕರಿದ್ದಾರೆ. ಅವರ ಪೈಕಿ ೪೦ರಷ್ಟು ಮಂದಿ ಶಿವಸೇನೆಯ ಶಾಸಕರು. ಅವರಲ್ಲಿ ೨೧ ಮಂದಿಯನ್ನು ಅನರ್ಹಗೊಳಿಸುವಂತೆ ಉದ್ಧವ್‌ ಠಾಕ್ರೆ ಬಣದ ಮುಖ್ಯ ಸಚೇತಕರು ಉಪಸ್ಪೀಕರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಉದ್ಧವ್‌ ತಂಡದಲ್ಲಿ ಈಗಾಗಲೇ ಮೂರನೇ ಎರಡರಷ್ಟು ಶಾಸಕರು ಇರುವುದರಿಂದ ಇದೊಂದು ಹತಾಶ ಕ್ರಮವೆಂದು ಬಣ್ಣಿಸಲಾಗಿದೆ.

ಈ ನಡುವೆ ಏಕನಾಥ್‌ ಶಿಂಧೆ ಗುಂಪು ಶಾಸಕರನ್ನು ಮಾತ್ರವಲ್ಲದೆ, ಕಾರ್ಪೊರೇಟರ್‌ಗಳನ್ನೂ ತನ್ನತ್ತ ಸೆಳೆಯುವ ಕೆಲಸದಲ್ಲಿ ತಲ್ಲೀನವಾಗಿದೆ. ಠಾಣೆ ಮಹಾನಗರ ಪಾಲಿಕೆಯ ಸುಮಾರು ೬೦ ಕಾರ್ಪೊರೇಟರ್‌ಗಳು ಈಗಾಗಲೇ ಶಿಂಧೆ ಅವರಿಗೆ ಬೆಂಬಲ ನೀಡಿದ್ದಾರೆ.

ಈ ಬೆಳವಣಿಗೆ ಬಗ್ಗೆ ತಿಳಿಯುತ್ತಲೇ ಉದ್ಧವ್‌ ಠಾಕ್ರೆ ಬಣ ಮುಂಬಯಿ ಮಹಾನಗರ ಪಾಲಿಕೆಯ ಎಲ್ಲ ಶಿವಸೇನೆ ಕಾರ್ಪೊರೇಟರ್‌ಗಳ ಸಭೆಯನ್ನು ಸಂಜೆ ಏಳು ಗಂಟೆಗೆ ಕರೆದಿದೆ. ಆದರೆ, ಇಲ್ಲೂ ಶಿವಸೇನೆ ಎರಡು ಬಣಗಳಾಗಿ ವಿಭಜನೆ ಹೊಂದಿರುವುದರಿಂದ ಎಷ್ಟು ಜನ ಸಭೆಗೆ ಬರುತ್ತಾರೆ ಎನ್ನುವುದರ ಆಧಾರದ ಮೇಲೆ ಮುಂಬಯಿ ಮಹಾನಗರ ಪಾಲಿಕೆ ಯಾವ ಬಣದ ಹಿಂದಿದೆ ಎನ್ನುವುದು ಸ್ಪಷ್ಟವಾಗಲಿದೆ.

ಬೀದಿ ಕಾಳಗದ ಎಚ್ಚರಿಕೆ
ಈ ನಡುವೆ, ಸಂಜಯ್‌ ರಾವತ್‌ ಅವರು ಬಂಡುಕೋರರಿಗೆ ಎಚ್ಚರಿಕೆ ನೀಡುವ ಭರದಲ್ಲಿ ಶಿವಸೈನಿಕರು ಬೀದಿಗಿಳಿದು ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ. ಇದುವರೆಗೆ ಕಾನೂನು ಪ್ರಕಾರ ಮಾತ್ರ ಹೋರಾಟ ನಡೆಯುತ್ತಿದೆ. ಮುಂದೆ ಶಿವಸೈನಿಕರು ಬೀದಿಗಿಳಿದು ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.
ಶಿವಸೇನೆ ಮೊದಲೇ ಬೀದಿ ಕಾಳಗಕ್ಕೆ ಹೆಸರುವಾಸಿಯಾಗಿದೆ. ಇದೀಗ ಎರಡೂ ಬಣಗಳಲ್ಲಿ ಹತಾಶೆ, ಆಕ್ರೋಶಗಳು ಇವೆ. ಹೀಗಾಗಿ ಎರಡೂ ಬಣಗಳು ಬೀದಿಗೆ ಇಳಿದರೆ ದೊಡ್ಡ ಸಂಘರ್ಷವೇ ನಡೆಯುವ ಅಪಾಯವಿದೆ ಎನ್ನಲಾಗಿದೆ.
ಈಗಾಗಲೇ ಕೆಲವು ಕಡೆಗಳಲ್ಲಿ ಏಕನಾಥ್‌ ಶಿಂಧೆ ಪರವಾಗಿ ಮತ್ತು ಕೆಲವು ಕಡೆಗಳಲ್ಲಿ ವಿರುದ್ಧವಾಗಿ ಪೋಸ್ಟರ್‌ ಸಮರ ಕಾಣಿಸಿಕೊಂಡಿದೆ. ಅದು ಬೀದಿ ಜಗಳಕ್ಕೆ ಇಳಿಯುವ ಸಾಧ್ಯತೆ ಇಲ್ಲದಿಲ್ಲ.

ಇದನ್ನೂ ಓದಿ| ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿರುವ ಏಕನಾಥ್‌ ಶಿಂಧೆ ಯಾರು?

Exit mobile version