Site icon Vistara News

Maha politics: ಮಹತ್ವದ ವಿಚಾರಣೆ ಆರಂಭ, ಇಲ್ಲಿಗೇಕೆ ಬಂದ್ರಿ ಎಂದು ಕೇಳಿದ ಸುಪ್ರೀಂಕೋರ್ಟ್

Supreme Court

ನವದೆಹಲಿ: ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿ ಏಕನಾಥ್‌ ಶಿಂಧೆ ಬಣದ ಸಲ್ಲಿಸಿದ ಎರಡು ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠದ ಮುಂದೆ ಮಧ್ಯಾಹ್ನ ೧.೩೪ರ ಹೊತ್ತಿಗೆ ಆರಂಭಗೊಂಡಿದೆ. ಆರಂಭದಲ್ಲೇ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್‌ ತಗಾದೆಯನ್ನು ಎತ್ತಿದೆ. ಅದರಲ್ಲೂ ಪ್ರಮುಖವಾಗಿ ಈ ವಿಚಾರವನ್ನು ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್‌ ಅವರ ಎದುರೇ ಪ್ರಸ್ತಾಪಿಸಬಹುದಾಗಿತ್ತು, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಅದನ್ನು ಬಿಟ್ಟು ಸುಪ್ರೀಂಕೋರ್ಟ್‌ಗೇ ಯಾಕೆ ಬಂದಿದ್ದೀರಿ ಎಂದು ಕೇಳಿತು.

ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ಜೆ.ಬಿ.ಪಡಿವಾಳ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಮುಂದೆ ೧೫ ಬಂಡಾಯ ಶಾಸಕರ ಪರವಾಗಿ ಹಿರಿಯ ನ್ಯಾಯವಾದಿ ನೀರಜ್‌ ಕೌಲ್‌ ಅವರು ವಾದ ಮಂಡಿಸಿದರು.

ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ಡೆಪ್ಯೂಟಿ ಸ್ಪೀಕರ್‌ ಅವರು ೧೫ ಶಾಸಕರ ಅನರ್ಹತೆ ಅರ್ಜಿಯ ಬಗ್ಗೆ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ನೀರಜ್‌ ಕೌಲ್‌ ಹೇಳಿದರು. ಆಗ ಸುಪ್ರೀಂಕೋರ್ಟ್‌ ನೀವು ಹೈಕೋರ್ಟ್‌ಗೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿತು.

ಒಂದು ಅಲ್ಪಮತದ ಸರಕಾರ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ನಮ್ಮ ಮನೆಗಳನ್ನು ಸುಟ್ಟು ಹಾಕಲಾಗುತ್ತಿದೆ ಎಂದು ವಕೀಲರು ಹೇಳಿದಾಗ, ಮನೆಗಳನ್ನು ಸುಟ್ಟು ಹಾಕುವ ವಿಚಾರಗಳನ್ನು ನಾವು ಪರಿಗಣಿಸುವುದಿಲ್ಲ ಎಂದು ಹೇಳಿದರು.

ಡೆಪ್ಯೂಟಿ ಸ್ಪೀಕರ್‌ ಅವರು ಜೂನ್‌ ೨೧ರಂದು ನೋಟಿಸ್‌ ನೀಡಿ ಜೂನ್‌ ೨೭ರೊಳಗೆ ಉತ್ತರಿಸಲು ಅವಕಾಶ ನೀಡಿರುವಾಗ ಅವರ ಜತೆಗೇ ಈ ಬಗ್ಗೆ ಚರ್ಚಿಸಬಹುದಿತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಪ್ರಕರಣದ ವಿಚಾರಣೆ ನಡೆಯುತ್ತಿರುವ ರೀತಿಯನ್ನು ಗಮನಿಸಿದರೆ ಸುಪ್ರೀಂಕೋರ್ಟ್‌ ಡೆಪ್ಯೂಟಿ ಸ್ಪೀಕರ್‌ ಅವರ ಕಾರ್ಯವ್ಯಾಪ್ತಿಯಲ್ಲಿ ತಕ್ಷಣ ಹಸ್ತಕ್ಷೇಪ ನಡೆಸುವಂತೆ ಕಾಣುತ್ತಿಲ್ಲ. ಡೆಪ್ಯೂಟಿ ಸ್ಪೀಕರ್‌ ಅವರು ಕೇಳಿದಂತೆ ನೋಟಿಸ್‌ಗೆ ಉತ್ತರ ನೀಡಿ ಮುಂದಿನ ಕ್ರಮದ ನಿರೀಕ್ಷೆಯಲ್ಲಿರಿ. ಆಗಲೂ ಅನ್ಯಾಯ ಎಂದು ಅನಿಸಿದರೆ ಮರಳಿ ಕೋರ್ಟ್‌ಗೆ ಬರಬಹುದು ಎಂದು ಹೇಳುವ ಸಾಧ್ಯತೆ ಕಂಡುಬರುತ್ತಿದೆ.

ಇದನ್ನೂ ಓದಿ| ಮಹಾ ಕಾನೂನು ಹೋರಾಟ; ಕೆಲವೇ ಹೊತ್ತಲ್ಲಿ ಸುಪ್ರೀಂ ವಿಚಾರಣೆ ಪ್ರಾರಂಭ, ಜೈರ್ವಾಲ್‌ಗೆ ಸಿಬಲ್‌ ಬಲ

Exit mobile version