Site icon Vistara News

Maha politics: ಸೋಲಿನಿಂದ ಕಂಗೆಟ್ಟ ಠಾಕ್ರೆ, ಪವಾರ್‌ರಿಂದ ಈಗ ಮಧ್ಯಂತರ ಚುನಾವಣೆ ಜಪ!

sharad pawar - uddhav

ಮುಂಬಯಿ: ಮಹಾ ವಿಕಾಸ ಅಘಾಡಿ ಸರಕಾರ ಪತನದಿಂದ ಕಂಗೆಟ್ಟಿರುವ ಶಿವಸೇನೆಯ ವಿಭಜಿತ ಬಣದ ನಾಯಕ, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಇದೀಗ ಮಧ್ಯಂತರ ಚುನಾವಣೆಯ ಜಪ ಶುರು ಮಾಡಿದ್ದಾರೆ. ಶಿವಸೇನೆಯನ್ನು ಒಡೆದು ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಪದವಿಯನ್ನು ಪಡೆದ ಏಕನಾಥ್‌ ಶಿಂಧೆ ಅವರು ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದುಕೊಂಡರು. ಆ ಬಳಿಕ ಮಾತನಾಡಿದ ಈ ಇಬ್ಬರು ನಾಯಕರು ಮಧ್ಯಂತರ ಚುನಾವಣೆಯ ಬಗ್ಗೆ ಮಾತನಾಡಿದರು.

ʻಬಿಜೆಪಿ-ಶಿವಸೇನೆಯ ಸರಕಾರ ಹೆಚ್ಚು ಕಾಲ ಬಾಳುವುದಿಲ್ಲ. ಹೆಚ್ಚೆಂದರೆ ಆರು ತಿಂಗಳು. ನಂತರ ಸರಕಾರ ಉರುಳುತ್ತದೆ. ಎನ್‌ಸಿಪಿ ಕಾರ್ಯಕರ್ತರು ಈಗಿನಿಂದಲೇ ಇದಕ್ಕೆ ಸಿದ್ಧವಾಗಿರಬೇಕು,ʼʼ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದರು.

ಉದ್ಧವ್‌ ಠಾಕ್ರೆ ಸಭೆ
ಇತ್ತ ಉದ್ಧವ್‌ ಠಾಕ್ರೆ ಅವರು ಸೋಮವಾರ ಸಂಜೆ ಶಿವಸೇನೆಯ ಕೆಲವು ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಕಾರ್ಯಕರ್ತರ ಜತೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಉದ್ಧವ್‌ ಠಾಕ್ರೆ, ʻʻತಾಕತ್ತಿದ್ದರೆ ಮಧ್ಯಂತರ ಚುನಾವಣೆ ಎದುರಿಸಿʼʼ ಎಂದು ಸವಾಲು ಹಾಕಿದರು.

ಸಭೆಯ ಬಳಿಕ ಉದ್ಧವ್‌ ಠಾಕ್ರೆ ಅವರು ಮಾಧ್ಯಮಗಳ ಜತೆ ಮಾತನಾಡಲು ನಿರಾಕರಿಸಿದರಾದರೂ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು. ʻʻಇದೆಲ್ಲವೂ ಶಿವಸೇನೆಯನ್ನು ಮುಗಿಸುವ ಬಿಜೆಪಿಯ ಸಂಚು. ಇಂಥ ನೌಟಂಕಿ ಆಟಗಳನ್ನು ಆಡುವುದನ್ನು ಬಿಟ್ಟು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಿಸಿʼʼ ಎಂಬ ಸವಾಲನ್ನು ಶಿಂಧೆ ಅವರಿಗೆ ನೀಡಿದರು.

ʻʻಇಬ್ಬರೂ ಜನತಾ ಕೋರ್ಟಿಗೆ ಹೋಗೋಣ. ಯಾರು ಸರಿ ಯಾರು ತಪ್ಪು ಎಂದು ಅವರು ನಿರ್ಧರಿಸಲಿ. ನಾವು ತಪ್ಪು ಮಾಡಿದ್ದರೆ ರಾಜ್ಯದ ಜನರು ನಮ್ಮನ್ನು ಮನೆಗೆ ಕಳುಹಿಸಲಿ. ನೀವು (ಬಿಜೆಪಿ-ಶಿಂಧೆ ಬಣ) ತಪ್ಪು ಮಾಡಿದ್ದರೆ ಜನ ನಿಮ್ಮನ್ನು ಮನೆಗೆ ಕಳುಹಿಸಲಿದ್ದಾರೆ,ʼʼ ಎಂದು ಠಾಕ್ರೆ ಹೇಳಿದ್ದಾರೆ.

ಇಬ್ಬರು ಶಾಸಕರು ಶಿಂಧೆ ಬಣಕ್ಕೆ
ಈ ಎಲ್ಲ ಘಟನೆಗಳ ನಡುವೆಯೇ ಉದ್ಧವ್‌ ಠಾಕ್ರೆ ಬಣದ ಬಲ ಕುಸಿಯುತ್ತಿದೆ. ಭಾನುವಾರ ಮತ್ತು ಸೋಮವಾರ ಇಬ್ಬರು ಶಾಸಕರು ಶಿಂಧೆ ಬಣವನ್ನು ಸೇರಿದ್ದಾರೆ. ಕೆಲವು ದಿನಗಳ ಹಿಂದೆ ಠಾಕ್ರೆ ಅವರ ಪರವಾಗಿ ಬೀದಿಯಲ್ಲಿ ಕಣ್ಣೀರು ಹಾಕಿದ್ದ ಸಂತೋಷ್‌ ಬಂಗಾರ್‌ ಎಂಬ ಶಾಸಕ ಸೋಮವಾರ ಬೆಳಗ್ಗೆ ಏಕನಾಥ್‌ ಶಿಂಧೆ ಬಣದಲ್ಲಿ ಕಾಣಿಸಿಕೊಂಡಿದ್ದಾರೆ!

ಈಗ ಏಕನಾಥ್‌ ಶಿಂಧೆ ಬಣ ಪ್ರಬಲವಾಗಿರುವುದು, ಸ್ಪೀಕರ್‌ ಅವರು ಶಿಂಧೆ ಅವರನ್ನು ಶಾಸಕಾಂಗ ಪಕ್ಷ ನಾಯಕನನ್ನಾಗಿ ಘೋಷಣೆ ಮಾಡಿದ್ದಕ್ಕೆ ಮಾನ್ಯತೆ ನೀಡಿರುವುದು ಒಂದು ಕಡೆಯಾದರೆ, ಉದ್ಧವ್‌ ಠಾಕ್ರೆ ಬಣದ ೧೬ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಬೇಡಿಕೆಯನ್ನು ಸ್ಪೀಕರ್‌ ಮುಂದಿಟ್ಟಿರುವುದು ಕೆಲವು ಶಾಸಕರನ್ನು ಆತಂಕಕ್ಕೆ ತಳ್ಳಿದೆ. ತಾವೂ ಶಾಸಕತ್ವ ಕಳೆದುಕೊಳ್ಳಬೇಕಾದೀತು ಎಂಬ ಭಯದಿಂದ ಕೆಲವರು ನಿಷ್ಠೆ ಬದಲಿಸುತ್ತಿರುವುದು ಕಂಡುಬರುತ್ತಿದೆ.

ಇದನ್ನೂ ಓದಿ | Maha politics: ಮಹಾ ವಿಕಾಸ ಅಘಾಡಿಯಲ್ಲಿ ಬಿರುಕು, ಸದ್ಯವೇ ಕಾಂಗ್ರೆಸ್‌ ಹೊರಕ್ಕೆ?

Exit mobile version