Site icon Vistara News

Maha politics: ಉದ್ಧವ್‌ ಠಾಕ್ರೆಗೆ ಸಂಪುಟ ಪೂರ್ಣ ಬೆಂಬಲ, ರಾಜೀನಾಮೆ ನೀಡದಿರಲು ನಿರ್ಧಾರ

ಮುಂಬಯಿ: ಮಹಾರಾಷ್ಟ್ರ ಸಚಿವ ಸಂಪುಟ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪೂರ್ಣ ಬೆಂಬಲವನ್ನು ಪ್ರಕಟಿಸಿದ್ದು, ಯಾವ ಕಾರಣಕ್ಕೂ ರಾಜೀನಾಮೆ ನೀಡದಂತೆ ಮನವಿ ಮಾಡಿದೆ. ಸಚಿವ ಬಲದ ಬೆಂಬಲದಿಂದ ಸಂತುಷ್ಟರಾಗಿರುವ ಉದ್ಧವ್‌ ಠಾಕ್ರೆ ಯಾವ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ಸಂಜೆ ಅತ್ಯಂತ ಮಹತ್ವದ ಸಚಿವ ಸಂಪುಟ ಸಭೆ ನಡೆದಿದ್ದು ಪ್ರಸಕ್ತ ಏಕನಾಥ್‌ ಶಿಂಧೆ ಬಣದಲ್ಲಿರುವ ಒಂಬತ್ತು ಸಚಿವರನ್ನು ಹೊರತುಪಡಿಸಿ ಉಳಿದ ಎಲ್ಲರೂ ಭಾಗವಹಿಸಿದ್ದರು. ಈ ಸಭೆಯ ಬಳಿಕ ಉದ್ಧವ್‌ ಠಾಕ್ರೆ ಅವರು ತಮ್ಮ ರಾಜೀನಾಮೆ ಸಲ್ಲಿಸಬಹುದು ಎಂಬ ಸುದ್ದಿಯೊಂದು ಹರಡಿತ್ತು. ಆದರೆ, ಸಂಪುಟ ಸಭೆಯಲ್ಲಿ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ಮೂಡಿಬಂದಿದೆ.

ಯಾಕೆ ರಾಜೀನಾಮೆ ಬೇಡ?
ಸಭೆಯಲ್ಲಿ ಉದ್ಧವ್‌ ಠಾಕ್ರೆ ರಾಜೀನಾಮೆ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ, ಹೆಚ್ಚಿನವರು ಬೇಡ ಎಂಬ ವಾದ ಮಂಡಿಸಿದ್ದಾರೆ.

ಇಡೀ ಶಿವಸೇನೆ ಉದ್ಧವ್‌ ಠಾಕ್ರೆ ಬೆನ್ನಿಗಿದೆ. ಕೇವಲ ಕೆಲವು ಶಾಸಕರು ಮಾತ್ರ ಗುವಾಹಟಿಯಲ್ಲಿ ಹೋಗಿ ಕಪಿ ಮುಷ್ಠಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರು ಮುಂಬಯಿಗೆ ಬಂದ ಮೇಲೆ ಎಲ್ಲವೂ ಸರಿ ಹೋಗಲಿದೆ. ಕೇವಲ ಕೆಲವು ಶಾಸಕರಿಗಾಗಿ ಉದ್ಧವ್‌ ಠಾಕ್ರೆ ಅವರು ಪಕ್ಷ ಮತ್ತು ಸರಕಾರವನ್ನು ಕಳೆದುಕೊಳ್ಳಬೇಕಾಗಿಲ್ಲ ಎಂದು ಸಮಾಧಾನ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಎಲ್ಲ ಶಾಸಕರು ಹೋಟೆಲ್‌ನಲ್ಲಿ ದಿಗ್ಬಂಧನದಲ್ಲಿದ್ದಾರೆ. ನಿಜವಾದ ಶಿವ ಸೈನಿಕರು ನಮ್ಮ ಜತೆಗೇ ಇದ್ದಾರೆ ಎಂದು ಸಂಜಯ್‌ ರಾವತ್‌ ಹೇಳಿದ್ದಾರೆ.

ಭಾವುಕ ಮನವಿ ಮಾಡಿದ ಠಾಕ್ರೆ
ಅದಕ್ಕಿಂತ ಮೊದಲು ಸಾಮಾಜಿಕ ಜಾಲ ತಾಣದ ಮೂಲಕ ಶಿವಸೇನೆಯ ಬಂಡಾಯ ಬಣದ ಶಾಸಕರಿಗೆ ಭಾವುಕ ಮನವಿ ಮಾಡಿದ ಠಾಕ್ರೆ ಮುಂಬಯಿಗೆ ಮರಳುವಂತೆ ಮನವಿ ಮಾಡಿದರು.

ʻʻಶಿವಸೇನೆ ಎಂಬ ಕುಟುಂಬದ ಒಬ್ಬ ಹಿರಿಯನಾಗಿ ಎಲ್ಲರಿಗೂ ಮನವಿ ಮಾಡುತ್ತಿದ್ದೇನೆ. ನೀವೆಲ್ಲರೂ ಈಗಲೂ ಶಿವಸೈನಿಕರೇ. ನಾವು ಎಲ್ಲ ವಿಚಾರಗಳ ಬಗ್ಗೆ ಕುಳಿತು ಮಾತನಾಡೋಣ. ನಿಮ್ಮ ಬಗ್ಗೆ ನನಗೆ ಪ್ರೀತಿ ಇದೆʼʼ ಎಂದು ಉದ್ಧವ್‌ ಹೇಳಿದ್ದರು.

ʻʻನೀವು ಅಲ್ಲಿ ಸಿಕ್ಕಿಬಿದ್ದಿದ್ದೀರಿ ಎನ್ನುವುದು ನಮಗೆ ಗೊತ್ತು. ನಿಮ್ಮ ಕುಟುಂಬದವರೂ ನಿಮ್ಮನ್ನು ದಯವಿಟ್ಟು ಕರೆಸಿಕೊಳ್ಳಿ ಎಂದು ನನಗೆ ಮನವಿ ಮಾಡುತ್ತಿದ್ದಾರೆ. ಅವರೆಲ್ಲರ ಪರವಾಗಿ ನಾನು ನಿಮಗೆ ಮನವಿ ಮಾಡುತ್ತೇನೆ,ʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ| ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಂದಾದ ಬಿಜೆಪಿ; ಏಕನಾಥ್‌ ಶಿಂಧೆಗೆ ಉಪಮುಖ್ಯಮಂತ್ರಿ ಹುದ್ದೆ ಆಫರ್‌

Exit mobile version