Site icon Vistara News

Maha politics: ಉದ್ಧವ್‌ ಠಾಕ್ರೆ ಟೀಮ್‌ ಕೂಡಾ ಗುವಾಹಟಿಗೆ ಶಿಫ್ಟ್‌? ಅದೇ ಹೋಟೆಲಲ್ಲಿ 20 ಕೋಣೆ ಬುಕ್‌!

radison blue guwahati

ಮುಂಬಯಿ: ಮಹಾರಾಷ್ಟ್ರ ರಾಜಕೀಯ ಭಾನುವಾರವೂ ಕ್ಷಣ ಕ್ಷಣ ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಒಂದು ಕಡೆ ಏಕನಾಥ್‌ ಶಿಂಧೆ ಪಡೆ ಗುವಾಹಟಿಯಲ್ಲಿ ಕೂತಿದ್ದರೆ, ಉದ್ಧವ್‌ ಠಾಕ್ರೆ ಬಣ ಮಹಾರಾಷ್ಟ್ರದಲ್ಲಿ ಕುಳಿತು ಪ್ಲ್ಯಾನ್‌ ಮಾಡುತ್ತಿದೆ. ಒಬ್ಬರನ್ನು ಒಬ್ಬರು ಮಣಿಸುವ ಆಟದಲ್ಲಿ ದಾಳಗಳನ್ನು ಉರುಳಿಸಲಾಗುತ್ತಿದೆ. ಆದರೆ, ಈಗ ಇಬ್ಬರೂ ಒಂದೇ ಕಡೆ ಕುಳಿತು ಪ್ಲ್ಯಾನ್‌ ಮಾಡುವ ಕಾಲವೊಂದು ಸನ್ನಿಹಿತವಾಗಿದೆ!

ಹೌದು, ಉದ್ಧವ್‌ ಠಾಕ್ರೆ ಅವರು ಪ್ರತಿ ಬಾರಿ ಮಾತನಾಡುವಾಗಲೂ ರೆಬೆಲ್‌ ಶಾಸಕರು ಮುಂಬಯಿಗೆ ಬನ್ನಿ, ಮಾತನಾಡೋಣ ಎನ್ನುತ್ತಿರುತ್ತಾರೆ. ಈ ನಡುವೆ, ಸಂಜಯ್‌ ರಾವತ್‌ನಂಥವರು ʻಮುಂಬಯಿಗೆ ಬರ್ತೀರಲ್ವಾ.. ನೋಡಿಕೊಳ್ಳುತ್ತೇವೆʼ ಎಂಬರ್ಥದಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ಒಂದೊಮ್ಮೆ ಬಂಡಾಯ ಶಾಸಕರ ಜತೆ ಎದುರಾಬದುರಾ ಕುಳಿತು ಮಾತನಾಡಿದರೆ ಅವರನ್ನು ಮನವೊಲಿಸಬಲ್ಲೆ ಎನ್ನುವ ಸಣ್ಣ ಆಸೆಯೊಂದು ಉದ್ಧವ್‌ ಠಾಕ್ರೆ ಬಣದಲ್ಲಿದೆ. ಈ ನಡುವೆ ಸುಮಾರು ೨೦ ರೆಬೆಲ್‌ ಶಾಸಕರು ಉದ್ಧವ್‌ ಠಾಕ್ರೆ ಅವರ ಬಣಕ್ಕೆ ಮರಳುವ ಆಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎರಡೂ ವಿಚಾರಗಳು ಕೈಗೂಡಬೇಕಾದರೆ ಶಾಸಕರ ಜತೆ ಮುಖಾಮುಖಿ ಆಗುವುದು ಮುಖ್ಯ. ಇದೇ ಕಾರಣಕ್ಕೆ ಉದ್ಧವ್‌ ಠಾಕ್ರೆ ಅವರು ತಾವೇ ನೇರವಾಗಿ ಗುವಾಹಟಿಗೆ ಹೋಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಹೌದು, ಉದ್ಧವ್‌ ಠಾಕ್ರೆ ಬಣದಲ್ಲಿರುವ ೧೫-೧೬ ಶಾಸಕರು ಕೂಡಾ ಗುವಾಹಟಿಗೆ ಹೋಗಿ, ರೆಬೆಲ್‌ ಶಾಸಕರು ತಂಗಿರುವ ಅದೇ ಹೋಟೆಲ್‌ನಲ್ಲಿ ತಂಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಗುವಾಹಟಿಯ ರ‍್ಯಾಡಿಸನ್‌ ಬ್ಲ್ಯೂ ಹೋಟೆಲನ್ನು ಸಂಪರ್ಕಿಸಿ ೨೦ ರೂಮ್‌ ಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.

ಈ ರೀತಿ ಒಂದೇ ಹೋಟೆಲ್‌ನಲ್ಲಿ ಉಳಿದರೆ ಅಲ್ಲಿರುವ ರೆಬೆಲ್‌ ಶಾಸಕರನ್ನು ಭೇಟಿ ಮಾಡಿ ಮನವೊಲಿಸಬಹುದು ಎನ್ನುವುದು ಉದ್ಧವ್‌ ಠಾಕ್ರೆ ಟೀಮ್‌ನ ಲೆಕ್ಕಾಚಾರ.

ರೂಮ್‌ ಕೊಡುತ್ತಾ ಹೋಟೆಲ್‌?
ನಿಜವೆಂದರೆ, ರೆಬೆಲ್‌ ಶಾಸಕರು ಮೊದಲಾಗಿ ಹೋಗಿದ್ದು ಸೂರತ್‌ಗೆ. ಅಲ್ಲಿ ತಂಗಿದ್ದು ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ. ಅಲ್ಲಿ ಶಿಫ್ಟ್‌ ಆಗಿದ್ದು ಗುವಾಹಟಿಗೆ. ಅಲ್ಲೂ ಇರುವುದು ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲೇ. ಇದು ಯಾಕೆಂದರೆ, ಇದು ಅತ್ಯಂತ ಸುರಕ್ಷಿತವಾದ ಪ್ರದೇಶ ಎಂಬ ಕಾರಣಕ್ಕೆ. ಯಾವ ವಿರೋಧಿ ಬಣದವರು ಕೂಡಾ ಅಲ್ಲಿಗೆ ತಲುಪಲು ಸಾಧ್ಯವಾಗಬಾರದು ಎಂಬ ಕಾರಣಕ್ಕೆ. ಅದೇ ಕಾರಣಕ್ಕೆ ಹೋಟೆಲ್‌ಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ರೆಬೆಲ್‌ ಗುಂಪಿನ ನಾಯಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಅಲ್ಲಿ ಪ್ರವೇಶವಿಲ್ಲ. (ಕಳೆದ ಬಾರಿ ಕರ್ನಾಟಕದ ಶಾಸಕರ ತಂಡ ಮುಂಬಯಿಯಲ್ಲಿದ್ದಾಗ ಡಿ.ಕೆ. ಶಿವಕುಮಾರ್‌ ಮತ್ತು ಟೀಮ್‌ ಅವರನ್ನು ಭೇಟಿಯಾಗಲು ಹೋಗಿತ್ತು. ಆವರೆ ಯಾವ ಕಾರಣಕ್ಕೂ ಅವಕಾಶ ಕೊಟ್ಟಿರಲಿಲ್ಲ. ಕೊನೆಗೆ ಪೊಲೀಸರ ಮೂಲಕ ಅವರನ್ನು ಬೇರೆ ಕಡೆಗೆ ಶಿಫ್ಟ್‌ ಮಾಡಲಾಗಿತ್ತು. ಹೋಟೆಲ್‌ಗಳು ಆ ಮಟ್ಟದ ಸುರಕ್ಷತೆ ಹೊಂದಿದ್ದರಷ್ಟೇ ರಾಜಕಾರಣಿಗಳು ಇಂಥ ಆಪರೇಷನ್‌ಗೆ ಅವುಗಳನ್ನು ಆಯ್ಕೆ ಮಾಡುತ್ತವೆ. ಒಳಗೆ ಹೋಗಲು ಅವಕಾಶ ನಿರಾಕರಿಸುವುದು ಒಂದು ಕಡೆಯಾದರೆ ಒಳಗೆ ಇರುವ ಯಾವ ಶಾಸಕನೂ ಹೊರಗೆ ಬಾರದಷ್ಟು ಬಿಗಿ ಭದ್ರತೆ ಅಲ್ಲಿರುತ್ತದೆ) ಈ ನಡುವೆ, ಶಿಂಧೆ ನೇತೃತ್ವದ ತಂಡ ಈ ಹೋಟೆಲನ್ನು ಮೊದಲು ಜೂನ್‌ ೨೮ರವರೆಗೆ ಬುಕ್‌ ಮಾಡಿತ್ತು. ಅದನ್ನೀಗ ಜೂನ್‌ ೩೦ರವರೆಗೆ ವಿಸ್ತರಿಸಲಾಗಿದೆ.

ಪರಿಸ್ಥಿತಿ ಹೀಗಿರುವಾಗ ಅದೇ ಹೋಟೆಲ್‌ ಉದ್ಧವ್‌ ಠಾಕ್ರೆ ಬಣದ ಶಾಸಕರಿಗೆ ಆಸರೆ ಕೊಡುತ್ತದಾ ಎನ್ನುವುದು ಮುಖ್ಯ ಪ್ರಶ್ನೆ. ಆದರೆ, ಬಹುತೇಕ ಇದು ಸಾಧ್ಯವಿಲ್ಲದ ಮಾತು. ಠಾಕ್ರೆ ಬಣ ರೂಮ್‌ ಕೊಡಿ ಎಂದು ಕೇಳಿದ ಮನವಿಯನ್ನು ಅದು ಬಹುತೇಕ ತಿರಸ್ಕರಿಸುವುದು ಖಚಿತ.

ಬೇರೆ ಹೋಟೆಲ್‌ ನೋಡಬಹುದು!
ಉದ್ಧವ್‌ ಠಾಕ್ರೆ ಬಣಕ್ಕೆ ಈಗಿರುವ ಆಪ್ಶನ್‌ ಏನೆಂದರೆ ಗುವಾಹಟಿಯಲ್ಲಿರುವ, ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ಗೆ ಸಮೀಪದ ಯಾವುದಾದರೂ ಹೋಟೆಲನ್ನು ಬುಕ್‌ ಮಾಡುವುದು. ಆದರೆ, ಅಲ್ಲಿಂದ ಬಂಡಾಯ ಶಾಸಕರನ್ನು ಭೇಟಿ ಮಾಡಲು ಬೇರೆ ದಾರಿಯನ್ನು ಹುಡುಕಿಕೊಳ್ಳಬೇಕಾಗುತ್ತದೆ.!

Exit mobile version