Site icon Vistara News

ಆಂಧ್ರ ಸ್ಟೈಲಲ್ಲಿ ಮಹಾ ಪಾಲಿಟಿಕ್ಸ್‌: ಎನ್‌ಟಿಆರ್‌ ಅವರನ್ನು ಚಂದ್ರಬಾಬು  ನಾಯ್ಡು ಕಿತ್ತೆಸೆದಂತೆ ಇಲ್ಲೂ ಆಗುತ್ತಾ?

ಮುಂಬಯಿ: ಮಹಾರಾಷ್ಟ್ರದಲ್ಲಿ ಎದ್ದಿರುವ ಶಿವಸೇನೆ ಬಂಡಾಯ 1995ರಲ್ಲಿ ಆಂಧ್ರ ಪ್ರದೇಶದ ಎನ್‌.ಟಿ. ರಾಮರಾವ್‌ ಅವರ ತೆಲುಗು ದೇಶಂ ಪಾರ್ಟಿಯಲ್ಲಿ ಎದ್ದ ಬಿರುಗಾಳಿಯನ್ನೇ ನೆನಪಿಸುತ್ತಿದೆ. ಆವತ್ತು ಚಂದ್ರಬಾಬು ನಾಯ್ಡು ಅವರು ತನ್ನ ಮಾವ ಎನ್‌.ಟಿ.ಆರ್‌. ಅವರನ್ನೇ ಮೂಲೆಗುಂಪು ಮಾಡಿದ, ರಾಜಕೀಯವಾಗಿ ನಿರ್ನಾಮ ಮಾಡಿದ ರೋಚಕ ಕಥೆಗೂ ಮಹಾರಾಷ್ಟ್ರದ ಬೆಳವಣಿಗೆಗಳಿಗೂ ಹಲವು ಸಾಮ್ಯತೆಗಳಿವೆ.

ಆಂಧ್ರ ಪ್ರದೇಶದಲ್ಲಿ ಏನಾಗಿತ್ತು?

ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಚಿತ್ರನಟ ಕಮ್‌ ರಾಜಕಾರಣಿ ನಂದಮೂರಿ ತಾರಕ ರಾಮ ರಾವ್‌ (ಎನ್‌ಟಿಆರ್)‌ ಅವರ ವಿರುದ್ಧ ಟಿಡಿಪಿಯ ಬಹುತೇಕ ಎಲ್ಲ ಶಾಸಕರ ತಿರುಗಿಬಿದ್ದಿದ್ದರು. ಇದಕ್ಕೆ ಕಾರಣವಾಗಿದ್ದು ಎನ್‌ಟಿಆರ್‌ ಅವರ ಪತ್ನಿ ವ್ಯಾಮೋಹ! 1985ರಲ್ಲಿ ಮೊದಲ ಪತ್ನಿಯನ್ನು ಕಳೆದುಕೊಂಡ ಎನ್‌ಟಿಆರ್‌ ಅವರು ಲಕ್ಷ್ಮಿ ಪಾರ್ವತಿ ಅವರ ಜತೆ ಕೆಲವು ವರ್ಷ ಸಹಜೀವನ ನಡೆಸಿ 1993ರಲ್ಲಿ ಅಧಿಕೃತವಾಗಿ ಮದುವೆಯಾದರು. ಆಗ ಎನ್‌ಟಿಆರ್‌ಗೆ 70 ವರ್ಷ. ಈ ವಯಸ್ಸಲ್ಲಿ ಮದುವೆ ಮಾಡಿಕೊಂಡ ಬಗ್ಗೆಯೇ ಕುಟುಂಬದಲ್ಲಿ ವಿರೋಧವಿತ್ತು. ಆದರೆ, ಯಾವಾಗ ಆಕೆಯೇ ರಾಜಕೀಯವನ್ನು ನಿಯಂತ್ರಿಸಲು ಮುಂದಾದರೋ ಎಲ್ಲ ಆಕ್ರೋಶಗಳು ಹೊರಗೆ ಬಿದ್ದವು. ಆದರೆ, ಎನ್‌ಟಿಆರ್‌ ಮಾತ್ರ ಲಕ್ಷ್ಮಿ ಬಂದ ಮೇಲೆ ತನ್ನ ಅದೃಷ್ಟ ಖುಲಾಯಿಸಿದೆ ಎಂದೇ ಭಾವಿಸಿ ಆಕೆ ಹೇಳಿದ್ದಕ್ಕೆಲ್ಲ ಸೈ ಅನ್ನುತ್ತಿದ್ದರು.

ಎನ್‌ಟಿ ರಾಮ ರಾವ್‌ ಜತೆಗೆ ಲಕ್ಷ್ಮೀ ಪಾರ್ವತಿ

ಶಿವಸೇನೆ ಪ್ರಕರಣದಲ್ಲಿ ಬಂಡಾಯ ಶಾಸಕರು ವಿರೋಧಿಸುತ್ತಿರುವುದು ಶಿವಸೇನೆಯ ಅಸ್ವಾಭಾವಿಕ ಸಂಬಂಧವನ್ನು. ನಮ್ಮದು ಹಿಂದುತ್ವ ಆಧಾರಿತ ಪಕ್ಷ. ನಾವು ಹಿಂದುತ್ವದ ಪ್ರಬಲ ವಿರೋಧಿಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗೆ ಸೇರಿದ್ದೇ ತಪ್ಪು. ಹಾಗಾಗಿ ಮಹಾ ವಿಕಾಸ ಅಘಾಡಿಯಿಂದ ಹೊರಬರಬೇಕು ಎನ್ನುವುದು ಬಂಡಾಯ ಶಾಸಕರ ಪ್ರಬಲ ಹಕ್ಕೊತ್ತಾಯ. ಎನ್‌ಸಿಪಿ-ಕಾಂಗ್ರೆಸನ್ನು ಕಟ್ಟಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸುವುದು ಹೇಗೆ ಎನ್ನುವುದು ಶಿವಸೇನಾ ಶಾಸಕರ ಮೂಲಭೂತ ಪ್ರಶ್ನೆ. ಹಾಗಾಗಿ, ಹಿಂದುತ್ವದ ಗೆಣೆಕಾರನಾಗಿರುವ ಬಿಜೆಪಿ ಜತೆ ಹೋಗಬೇಕು ಎನ್ನುವುದು ಡಿಮ್ಯಾಂಡ್‌. ಆದರೆ, ಉದ್ಧವ್‌ ಠಾಕ್ರೆ ಪ್ರಕಾರ, ಬಿಜೆಪಿ ಶಿವಸೇನೆಯನ್ನು ಮುಗಿಸಲು ಯತ್ನಿಸುತ್ತಿದೆ. ಎನ್‌ಸಿಪಿ-ಕಾಂಗ್ರೆಸ್‌ಗಳು ಪಕ್ಷಕ್ಕೆ ಅಧಿಕಾರ ಕೊಟ್ಟಿವೆ. ಹಾಗಿರುವಾಗ ಇದೇ ಒಳ್ಳೆಯದು.

ಶಿವಸೇನೆ ಪ್ರಕರಣದಲ್ಲಿ ನಗರಾಭಿವೃದ್ಧಿ ಸಚಿವರಾಗಿರುವ ಏಕನಾಥ್‌ ಶಿಂಧೆ ಬಂಡಾಯದ ಮುಂಚೂಣಿ ನಾಯಕನಾದರೆ ಆವತ್ತು ಬಂಡಾಯದ ಬಾವುಟ ಹಿಡಿದದ್ದು ಎನ್‌ಟಿಆರ್‌ ಅವರ ಅಳಿಯ ಎನ್‌. ಚಂದ್ರಬಾಬು ನಾಯ್ಡು. ಅವರು ಆಗ ಹಣಕಾಸು ಮತ್ತು ಕಂದಾಯ ಮಂತ್ರಿ ಆಗಿದ್ದರು. ಚಂದ್ರಬಾಬು ನಾಯ್ಡು ಮಾತ್ರವಲ್ಲ, ಎನ್‌ಟಿಆರ್‌ ಅವರ ಇನ್ನೊಬ್ಬ ಅಳಿಯ ದಗ್ಗುಬಾಟಿ ವೆಂಕಟೇಶ್ವರ ರಾವ್‌, ಇಬ್ಬರು ಮಕ್ಕಳಾದ ನಂದಮೂರಿ ಹರಿಕೃಷ್ಣ ಮತ್ತು ಬಾಲಕೃಷ್ಣ ಕೂಡಾ ಅಪ್ಪನನ್ನು ಕುರ್ಚಿಯಿಂದ ಕೆಳಗಿಳಿಸಬೇಕು ಎನ್ನುವ ಹೋರಾಟಕ್ಕೆ ಸೇರಿಕೊಂಡಿದ್ದರು.

ಶಿವಸೇನೆಯಂತೆಯೇ ಅಲ್ಲೂ ಟಿಡಿಪಿ ಶಾಸಕರಿಗೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ಇತ್ತು. ಅದರಲ್ಲೂ ರಾಜಕೀಯವಾಗಿ ಯಾವ ಅನುಭವವೂ ಇಲ್ಲದ ಲಕ್ಷ್ಮಿ ಪಾರ್ವತಿ ಅವರ ಇಶಾರೆ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಅವರು ಎನ್‌ಟಿಆರ್‌ ಅವರನ್ನೇ ಕಿರುಬೆರಳಲ್ಲಿ ಕುಣಿಸುತ್ತಿದ್ದಾರೆ ಎಂದೆಲ್ಲ ಸುದ್ದಿ ಹರಡಿತ್ತು. ಎನ್‌ಟಿಆರ್‌ ಅವರೂ ಲಕ್ಷ್ಮಿ ಪಾರ್ವತಿ ಅವರನ್ನು ಯಾರೇ ಟೀಕಿಸಿದರೂ ಕೇಳುತ್ತಿರಲಿಲ್ಲ. ಕೊನೆ ಕೊನೆಗೆ ಅವರು ಯಾವ ಶಾಸಕರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ.

ಏಕನಾಥ್‌ ಶಿಂಧೆ- ಉದ್ಧವ್‌ ಠಾಕ್ರೆ

ಶಿವಸೇನೆ ಶಾಸಕರ ಪ್ರಧಾನ ಆರೋಪಗಳಲ್ಲಿ ಉದ್ಧವ್‌ ಠಾಕ್ರೆ ತಮ್ಮ ಕೈಗೇ ಸಿಗುವುದಿಲ್ಲ. ಅವರು ಎನ್‌ಸಿಪಿ-ಕಾಂಗ್ರೆಸ್‌ ಶಾಸಕರಾದರೆ ಅವರನ್ನು ರಾಜಾರೋಷವಾಗಿ ಭೇಟಿ ಮಾಡಿ ಬರುತ್ತಾರೆ. ನಾವು ವರ್ಷಾ ಬಂಗಲೆಯ ಹೊರಗೆ ಕಾದು ನಿಲ್ಲಬೇಕು.  ಉದ್ಧವ್‌ ಠಾಕ್ರೆ ಅವರು ನಮ್ಮನ್ನು ಭೇಟಿ ಮಾಡಬೇಕೋ ಬೇಡವೋ ಎಂದು ನಿರ್ಧರಿಸುವುದು ಕೂಡಾ  ಅವರ ಸುತ್ತ ಆವರಿಸಿಕೊಂಡಿರುವ ಎನ್‌ಸಿಪಿ- ಕಾಂಗ್ರೆಸ್‌ ನಾಯಕರೇ ಎನ್ನುವುದು ಅವರ ದೂರು. ಇದು ಎಲ್ಲಿಯವರೆಗೆ ಎಂದರೆ ಕೆಲವೊಮ್ಮೆ ಸಂಪುಟದ ಮಂತ್ರಿಗಳಿಗೂ ಉದ್ಧವ್‌ ಅವರನ್ನು ಭೇಟಿಯಾಗಲು ಅವಕಾಶ ಸಿಗುತ್ತಿರಲಿಲ್ಲವಂತೆ.

ನಂಬರ್‌ಗಳ ಲೆಕ್ಕಾಚಾರ!

1994ರ ಚುನಾವಣೆಯಲ್ಲಿ ಆಂಧ್ರ ಪ್ರದೇಶ ವಿಧಾನಸಭೆಯ 294 ಸ್ಥಾನಗಳಲ್ಲಿ 216ರನ್ನು ತೆಲುಗುದೇಶಂ ಗೆದ್ದಿತ್ತು. ಆದರೆ, ಚಂದ್ರಬಾಬು ಬಂಡಾಯವೆದ್ದಾಗ 200ರಷ್ಟು ಶಾಸಕರು ಅವರ ಬೆನ್ನಿಗೆ ನಿಂತಿದ್ದರು. ಶಿವಸೇನೆ ವಿಚಾರಕ್ಕೆ ಬಂದರೂ 56 ಶಾಸಕರ ಪೈಕಿ 40ಕ್ಕೂ ಅಧಿಕ ಶಾಸಕರು ಈಗ ಏಕನಾಥ್‌ ಶಿಂಧೆ ಅವರ ಬಣದಲ್ಲಿದ್ದಾರೆ. ಇದು ಹೆಚ್ಚಾಗುತ್ತಲೇ ಇದೆ. ಜತೆಗೆ 10 ಮಂದಿ ಪಕ್ಷೇತರರೂ ಇದ್ದಾರೆ. ಅಂದರೆ ಬಹುತೇಕ ಶಿವಸೇನಾ ಶಾಸಕರು ಉದ್ಧವ್‌ ಠಾಕ್ರೆ ಅವರ ಕೈ ಬಿಟ್ಟಿದ್ದಾರೆ.

ಆಂಧ್ರದಲ್ಲಿ ಫೈನಲಿ ಏನಾಯ್ತು?
1995ರ ಆಗಸ್ಟ್‌ 23ರಂದು ತೆಲುಗು ದೇಶಂನ ಬಂಡಾಯ ಶಾಸಕರು ಹೈದರಾಬಾದ್‌ನ ಹೋಟೆಲ್‌ ವೈಸರಾಯ್‌ನ್ನು ಸೇರಿಕೊಂಡರು. ಆರಂಭದಲ್ಲಿ ಸಣ್ಣ ಗುಂಪು ಇದ್ದದ್ದು ನಿಧಾನಕ್ಕೆ ಬೆಳೆಯತೊಡಗಿತು.. ಪಕ್ಕಾ ಶಿವಸೇನೆಯ ಪ್ರಕರಣದಂತೆ. ಒಂದು ಹಂತದಲ್ಲಿ ಬಂಡಾಯ ಬಣ ಎನ್‌ಟಿಆರ್‌ ಅವರನ್ನೇ ತೆಲುಗು ದೇಶಂ ಶಾಸಕಾಂಗ ಪಕ್ಷ ನಾಯಕತ್ವದಿಂದ ಕಿತ್ತು ಹಾಕಿತು. ಮುಂದಿನ ಹೆಜ್ಜೆ ಮುಖ್ಯಮಂತ್ರಿ ಹುದ್ದೆಯಿಂದ ಎನ್‌ಟಿಆರ್‌ ಅವರನ್ನು ಕಿತ್ತು ಹಾಕುವುದಾಗಿತ್ತು.

ಈ ಪ್ರಯತ್ನಕ್ಕೆ ಪ್ರತೀಕಾರವೆಂಬಂತೆ ಎನ್‌ಟಿಆರ್‌ ಅವರು 1995ರ ಆಗಸ್ಟ್‌ 25ರಂದು ಚಂದ್ರ ಬಾಬು ನಾಯ್ಡು ಸೇರಿದಂತೆ ಐವರು ಮಂತ್ರಿಗಳನ್ನು ಕಿತ್ತು ಹಾಕಿದರು. ಮಾತ್ರವಲ್ಲ ಆಂಧ್ರ ಪ್ರದೇಶ ವಿಧಾನಸಭೆಯನ್ನೇ ವಿಸರ್ಜಿಸಿ ಹೊಸ ಚುನಾವಣೆಯನ್ನು ಘೋಷಿಸಿದರು. ಸಂಪುಟ ಸಭೆಯ ಈ ನಿರ್ಣಯವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಲು ಹೊರಟಿದ್ದರು ಎನ್‌.ಟಿ.ಆರ್‌.

ಆದರೆ, ಚಂದ್ರಬಾಬು ನಾಯ್ಡು ಅವರು ಮಹಾಚಾಣಾಕ್ಷ. ಎನ್‌ಟಿಆರ್‌ ರಾಜಭವನ ತಲುಪುವ ಮೊದಲೇ ಎನ್‌ಟಿಆರ್‌ ಅವರು ವಿಶ್ವಾಸ ಮತ ಕಳೆದುಕೊಂಡಿದ್ದಾರೆ. ಹಾಗಾಗಿ ಬಲಾಬಲ ಪರೀಕ್ಷೆ ನಡೆಯಲಿ ಎಂಬ ವಾದ ಮಂಡಿಸಿದ್ದರು. ಆಗಸ್ಟ್‌ 27ರಂದು ಮಹತ್ವದ ಆದೇಶ ಹೊರಡಿಸಿದ ರಾಜ್ಯಪಾಲರು ಆಗಸ್ಟ್‌ 31ರೊಳಗೆ ಬಹುಮತ ಸಾಬೀತುಪಡಿಸಿ ಎಂದು ಎನ್‌ಟಿಆರ್‌ ಅವರಿಗೆ ಸೂಚಿಸಿದರು.

ಆಗಸ್ಟ್‌ 30ರಂದು ಬಂಡುಕೋರರ ಬಣ ಎನ್‌ಟಿಆರ್‌ ಅವರನ್ನು ಪಕ್ಷದ ಕಾರ್ಯಕಾರಿ ಸಮಿತಿ ಮುಖ್ಯಸ್ಥನ ಸ್ಥಾನದಿಂದ ಕಿತ್ತು ಹಾಕಿತು. ಆ ಸ್ಥಾನದಲ್ಲಿ ನಾಯ್ಡು ಪ್ರತಿಷ್ಠಾಪಿತರಾದರು.  ಇದೆಲ್ಲ ಬೆಳವಣಿಗೆಗಳಿಂದ ಕಂಗೆಟ್ಟ ಎನ್‌ಟಿಆರ್‌, ಯಾರೂ ತನ್ನೊಂದಿಗಿಲ್ಲ ಎನ್ನುವುದನ್ನು ಅರಿತು ಆಗಸ್ಟ್‌ 31ರಂದು ವಿಶ್ವಾಸಮತ ಯಾಚನೆಗೆ ಮುನ್ನವೇ ರಾಜೀನಾಮೆ ನೀಡಿ ನಿರ್ಗಮಿಸಿದರು. 1995ರ ಸೆಪ್ಟೆಂಬರ್‌ 1ರಿಂದ ನಾಯ್ಡು ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದರು

ಏನಾಗಲಿದೆ ಶಿವಸೇನೆ ಕಥೆ?

ಸದ್ಯದ ಮಾಹಿತಿ ಪ್ರಕಾರ, 56 ಶಾಸಕರ ಪೈಕಿ 40ಕ್ಕೂ ಹೆಚ್ಚು ಶಿವಸೇನಾ ಶಾಸಕರು ಏಕನಾಥ್‌ ಶಿಂಧೆ ಅವರ ಜತೆಗಿದ್ದಾರೆ. ಮತ್ತು ಇನ್ನಷ್ಟು ಮಂದಿ ಅವರನ್ನು ಸೇರಿಕೊಳ್ಳುವ ಸಾಧ್ಯತೆಯೂ ಇದೆ. ಉದ್ಧವ್‌ ಠಾಕ್ರೆ ಬಣ 16 ಬಂಡಾಯ ಶಾಸಕರ ಅನರ್ಹತೆ ಮತ್ತಿತರ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದೆಯಾದರೂ ಇದು ಕಾನೂನು ಹೋರಾಟಕ್ಕೆ ಹಾದಿಯಾಗಬಹುದೇ ಹೊರತು ಅಂತಿಮ ಜಯ ಕಷ್ಟ ಸಾಧ್ಯ. ಈಗಾಗಲೇ ಉದ್ಧವ್‌ ಠಾಕ್ರೆ ಅವರ ಆತ್ಮೀಯ ಬಳಗವೇ ದೂರ ಹೋಗಿದೆ. ಅಂತಿಮವಾಗಿ ಇನ್ನಷ್ಟು ಮಂದಿ ಆ ಕಡೆಗೆ ಸರಿದರೆ ಉದ್ಧವ್‌ ಏಕಾಂಗಿಯಾಗುವ ಅಪಾಯವಿದೆ. ಕೇವಲ ಆದಿತ್ಯ ಠಾಕ್ರೆ ಮತ್ತು ಸಂಜಯ್‌ ರಾವತ್‌ ಮಾತ್ರ ಕೊನೆಯವರೆಗೆ ಉಳಿಯಬಹುದು.

ಇತ್ತ ಏಕನಾಥ್‌ ಶಿಂಧೆ ಬಣ ಪಕ್ಷದ ಚಿಹ್ನೆಯಾದ ಬಿಲ್ಲುಬಾಣವನ್ನೂ ತನ್ನ ಕೈಗೇ ತೆಗೆದುಕೊಂಡು ಉದ್ಧವ್‌ ಠಾಕ್ರೆ ಅವರ ಮೇಲೆಯೇ ಗುರಿಯಾಗಿಡುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಹಾಗಿದ್ದರೆ ಉದ್ಧವ್‌ ಠಾಕ್ರೆ ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗುತ್ತಾರಾ? ಅಥವಾ ಕೊನೆಯ ಕ್ಷಣದಲ್ಲಿ ಬಂಡಾಯವನ್ನು ಒಪ್ಪಿಕೊಂಡು ಶರಣಾಗತರಾಗುತ್ತಾರಾ? ಪಕ್ಷದ ಜವಾಬ್ದಾರಿಯನ್ನು  ಉಳಿಸಿಕೊಂಡು ಮಾರ್ಗದರ್ಶಕರಾಗುತ್ತಾರಾ? ಕಾದು ನೋಡಬೇಕು.

ಇದನ್ನೂ ಓದಿ| ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿರುವ ಏಕನಾಥ್‌ ಶಿಂಧೆ ಯಾರು?

Exit mobile version