ಮುಂಬಯಿ: ಮಹಾರಾಷ್ಟ್ರ ರಾಜಕೀಯ ಅತ್ಯಂತ ಅಯೋಮಯವಾಗಿಯೇ ಮುಂದುವರಿಯುತ್ತಿದೆ (Maha politics). ಪ್ರಧಾನ ಪಾತ್ರಧಾರಿಗಳಾಗಿರುವ ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಏಕನಾಥ್ ಶಿಂಧೆ ಬಣ, ದೇವೇಂದ್ರ ಫಡ್ನವಿಸ್ ಅವರ ಬಿಜೆಪಿ… ಹೀಗೆ ಪ್ರತಿಯೊಬ್ಬರೂ ಒಂದೊಂದು ಅಸ್ತ್ರಗಳನ್ನು ಹಿಡಿದುಕೊಂಡು ಕಾಯುತ್ತಿದ್ದಾರೆ. ಆದರೆ, ಯಾರೂ ಸರಕಾರ ಪತನ ಅಥವಾ ಹೊಸ ಸರಕಾರ ರಚನೆ ನಿಟ್ಟಿನಲ್ಲಿ ರಣಾಂಗಣಕ್ಕೆ ಇಳಿಯುವ ಸೂಚನೆ ಕಾಣುತ್ತಿಲ್ಲ. ಇಂಥ ಹೊತ್ತಿನಲ್ಲಿ ಸ್ವಯಂ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರೇ ಮೊದಲ ಹೆಜ್ಜೆ ಇಡುತ್ತಾರಾ? ತಾವೇ ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುತ್ತಾರಾ ಎಂಬ ಕುತೂಹಲ ಹೆಚ್ಚಾಗುತ್ತಿದೆ.
ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಮತ್ತು ಅದು ನೀಡಿದ ತೀರ್ಪಿನ ಆಧಾರದಲ್ಲಿ ಒಂದು ಹಂತದಲ್ಲಿ ವಿಶ್ವಾಸ ಮತ ಯಾಚನೆ ಅಥವಾ ಅವಿಶ್ವಾಸ ಗೊತ್ತುವಳಿಗೆ ಬಹುತೇಕ ವೇದಿಕೆ ಸಿದ್ಧವಾದಂತಿದೆ. ಆದರೆ, ಎಲ್ಲಾ ಬಣಗಳು ಇನ್ನೂ ಕಾರ್ಯತಂತ್ರ ಹೆಣೆಯುವ ಪ್ರಕ್ರಿಯೆಯಲ್ಲೇ ನಿರತವಾಗಿವೆ. ಯಾರೂ ಮೊದಲ ಹೆಜ್ಜೆ ಇಡಲು ಸಿದ್ಧವಾದಂತೆ ಕಾಣುತ್ತಿದೆ. ಯಾರಾದರೂ ಮೊದಲ ಹೆಜ್ಜೆ ಇಟ್ಟರೆ ಅದಕ್ಕೆ ಕೌಂಟರ್ ಅಟ್ಯಾಕ್ ಮಾಡುವ ಇಲ್ಲವೇ ಬೆಂಬಲಕ್ಕೆ ನಿಲ್ಲುವ ಜಾಣ ನಡೆಯನ್ನು ಎಲ್ಲರೂ ಅನುಸರಿಸುವಂತೆ ಕಾಣುತ್ತಿದೆ.
೧. ಏಕನಾಥ್ ಶಿಂಧೆ ಬಣ ಗೊಂದಲದಲ್ಲಿ…
ಗುವಾಹಟಿಯ ರ‍್ಯಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ತಂಗಿರುವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಂಡಾಯ ಶಾಸಕರು ಮಹಾ ವಿಕಾಸ ಅಘಾಡಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದೆಗೆದುಕೊಳ್ಳುವುದಾಗಿ ರಾಜ್ಯಪಾಲರಿಗೆ ತಿಳಿಸಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಸ್ವತಃ ಶಿಂಧೆ ಅವರೇ ಸೋಮವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆ ಬಗ್ಗೆ ಚರ್ಚೆ ಆಗುತ್ತಿತ್ತು. ಆದರೆ, ಇನ್ನೂ ಏಕನಾಥ್ ಶಿಂಧೆ ಅವರು ಹೋಟೆಲ್ ಬಿಟ್ಟು ಕದಲಲಿಲ್ಲ. ಇದೀಗ ಬುಧವಾರ ಸಂಜೆ ಅವರು ೫೦ ಶಾಸಕರ ಜತೆ ಮುಂಬಯಿಗೆ ಬರುತ್ತಾರೆ ಎಂಬ ಮಾಹಿತಿ ಇದೆ.
೨. ಮೊದಲ ಹೆಜ್ಜೆ ಇಡಲೊಪ್ಪದ ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ ಬಣ ತಾನು ಅಲ್ಪಮತಕ್ಕೆ ಇಳಿದಿರುವುದನ್ನು ಅರ್ಥ ಮಾಡಿಕೊಂಡಿದೆಯಾದರೂ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅದು ಸರಕಾರ ಉರುಳುವುದಕ್ಕೆ ಮೊದಲು ಜನರ ಅನುಕಂಪ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿಯೇ ಸಂಜೆ ಸಂಪುಟ ಸಭೆಯನ್ನು ಕರೆದಿದೆ. ಅದರಲ್ಲಿ ಸರಕಾರಕ್ಕೆ ಏನೂ ಆಗಿಲ್ಲ ಎಂಬಂತೆ ಕೆಲವು ಜನಪ್ರಿಯ ಘೋಷಣೆಗಳನ್ನು ಪ್ರಕಟಿಸುವ ಸಾಧ್ಯತೆಯೂ ಇದೆ. ಅಂದರೆ, ಉದ್ಧವ್ ಠಾಕ್ರೆ ಬಣ ಯಾರಾದರೂ ಒಂದು ಹೆಜ್ಜೆ ಮುಂದಿಡಲಿ ಎಂದು ಕಾಯುತ್ತಿದೆ.
೩. ಬಿಜೆಪಿ ಅವಕಾಶ ಬಳಸಿಕೊಳ್ಳುತ್ತಾ?
ನಿಜವೆಂದರೆ, ಮಹಾರಾಷ್ಟ್ರದ ರಾಜಕೀಯ ಅಸ್ಥಿರತೆಗೆ ನಿಜವಾದ ಅಂತ್ಯ ಹಾಡಬಹುದಾದ ತಾಕತ್ತು ಇರುವುದು ಬಿಜೆಪಿ. ಆದರೆ, ಕಳೆದ ಒಂದು ವಾರದಿಂದಲೂ ಬಿಜೆಪಿ ತಂತ್ರಗಾರಿಕೆಯಲ್ಲೇ ಮುಳುಗಿದೆ ಹೊರತು ಒಂದು ಹೆಜ್ಜೆ ಮುಂದಿಟ್ಟಿಲ್ಲ. ಏಕನಾಥ್ ಶಿಂಧೆ ಬಣದ ಬಂಡಾಯದಿಂದ ಮಹಾ ವಿಕಾಸ ಅಘಾಡಿ ಸರಕಾರ ವಿಶ್ವಾಸ ಮತ ಕಳೆದುಕೊಂಡಿದೆ ಎಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದರೆ ಬೆಳವಣಿಗೆಗಳ ಚಹರೆಯೇ ಬದಲಾಗಿ ಹೋಗುತ್ತದೆ. ಬಹುತೇಕ ಸಂದರ್ಭದಲ್ಲಿ ಸಣ್ಣ ಸುಳಿವು ಸಿಕ್ಕಿದರೂ ಬಿಜೆಪಿ ಅಂತಹ ಕ್ರಮಕ್ಕೆ ಮುಂದಾಗಿತ್ತು. ಆದರೆ, ಇಲ್ಲಿ ಅದೂ ಅಳೆದೂ ತೂಗಿ ನೋಡುತ್ತಿದೆ. ದೇವೇಂದ್ರ ಫಡ್ನವಿಸ್ ಅವರು ಮಂಗಳವಾರವೂ ದಿಲ್ಲಿ ತಲುಪಿದ್ದಾರೆ. ಅದರೆ ಫಲ ಏನು ಎನ್ನುವುದು ಸ್ಪಷ್ಟವಾಗಿಲ್ಲ.
೪. ಹಾಗಿದ್ದರೆ ರಾಜ್ಯಪಾಲರು ಮುಂದಾಗ್ತಾರಾ?
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಇಷ್ಟೂ ಬೆಳವಣಿಗೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವವರು ರಾಜ್ಯಪಾಲರಾಗಿರುವ ಭಗತ್ ಸಿಂಗ್ ಕೋಶ್ಯಾರಿ. ಕೊರೊನಾದಿಂದ ಆಸ್ಪತ್ರೆ ಸೇರಿದ್ದ ಅವರು ಸೋಮವಾರದಿಂದ ಕರ್ತವ್ಯಕ್ಕೆ ಮರಳಿದ್ದಾರೆ. ಮೊದಲ ಹಂತದಲ್ಲಿ ಅವರು ಉದ್ಧವ್ ಠಾಕ್ರೆ ಸರಕಾರ ತೆಗೆದುಕೊಂಡ ಹಲವು ತೀರ್ಮಾನಗಳ ಬಗ್ಗೆ ವಿವರ ಕೇಳಿದ್ದಾರೆ. ಸರಕಾರ ಅತ್ಯಂತ ಅವಸರವಸರವಾಗಿ ಕೆಲವೊಂದು ಯೋಜನೆಗಳನ್ನು ಮಂಜೂರು ಮಾಡುತ್ತಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ವಾಸ್ತವಿಕವಾಗಿ ರಾಜ್ಯದಲ್ಲಿರುವ ಸಂಕೀರ್ಣ ರಾಜಕೀಯ ಪರಿಸ್ಥಿತಿಯ ಅರಿವು ಅವರಿಗೂ ಇದೆ. ಇದೇ ರೀತಿ ಬಿಟ್ಟರೆ ಅದು ಇನ್ನಷ್ಟು ಕಾಲ ಎಳೆಯಬಹುದು ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಉದ್ಧವ್ ಠಾಕ್ರೆ ಸರಕಾರ ಬಹುಮತ ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸದ್ಯ ರಾಜ್ಯಪಾಲರೇ ಒಂದು ಹೆಜ್ಜೆ ಮುಂದಿಡುವ ಅನಿವಾರ್ಯತೆ ಎದುರಾಗಿದೆ. ಅವರ ಸಕ್ರಿಯ ನಡೆಗಳನ್ನು ಗಮನಿಸಿದರೆ ಶೀಘ್ರವೇ ಅವರು ಒಂದು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.