Site icon Vistara News

Maha politics: ಎಲ್ಲದಕ್ಕೂ ಡೆಪ್ಯುಟಿ ಸ್ಪೀಕರ್‌, ಹಾಗಿದ್ರೆ ಮಹಾರಾಷ್ಟ್ರಕ್ಕೆ ಸ್ಪೀಕರ್‌ ಇಲ್ವಾ?

Nana patole

ಮುಂಬಯಿ: ರಾಜ್ಯವೊಂದರ ರಾಜಕೀಯ ಮಹಾನಾಟಕದ ವೇಳೆ (Maha politics) ನೆನಪಾಗುವ ಎರಡು ಪ್ರಮುಖ ಹುದ್ದೆಗಳು ವಿಧಾನಸಭೆಯ ಸ್ಪೀಕರ್‌ ಮತ್ತು ರಾಜ್ಯಪಾಲರು. ಒಂದು ರಾಜ್ಯದಲ್ಲಿ ಸರಕಾರದಲ್ಲಿ ಬಿಕ್ಕಟ್ಟು ಉಂಟಾದಾಗ ಅದನ್ನು ಬಗೆಹರಿಸುವ, ತಪ್ಪಿತಸ್ಥರನ್ನು ಶಿಕ್ಷಿಸುವ, ಬುದ್ಧಿ ಹೇಳುವ ಶಕ್ತಿವಂತರು ಇವರಿಬ್ಬರು.

ಆದರೆ, ಮಹಾರಾಷ್ಟ್ರದಲ್ಲಿ ಯಾರೂ ಕೂಡಾ ಸ್ಪೀಕರ್‌ ಹೆಸರನ್ನು ಹೇಳುತ್ತಲೇ ಇಲ್ಲ. ಈ ರಾಜಕೀಯ ಬಿಕ್ಕಟ್ಟಿನ ಪ್ರಮುಖ ಸೂತ್ರಧಾರರ ಉದ್ಧವ್‌ ಠಾಕ್ರೆ ಬಣವು ಇನ್ನೊಂದು ಬಣವಾದ ಏಕನಾಥ್‌ ಶಿಂಧೆ ಅವರ ಕೂಟದ ೧೬ ಶಾಸಕರನ್ನು ಅನರ್ಹಗೊಳಿಸಿ ಎಂದು ಡೆಪ್ಯುಟಿ ಸ್ಪೀಕರ್‌ ಅವರಿಗೆ ಮನವಿ ಮಾಡುತ್ತದೆ. ಡೆಪ್ಯುಟಿ ಸ್ಪೀಕರ್‌ ಅವರೆ ನೋಟಿಸ್‌ ಜಾರಿಗೊಳಿಸುತ್ತಾರೆ.

ಅತ್ತ ಏಕನಾಥ್‌ ಶಿಂಧೆ ಬಣ ಕೂಡಾ ಡೆಪ್ಯೂಟಿ ಸ್ಪೀಕರ್‌ ಅವರು ಇದನ್ನು ಒಪ್ಪಬಾರದು ಅನ್ನುತ್ತದೆ. ನಮಗೆ ವಿಧಾನಸಭೆಯಲ್ಲಿ ೫೬ರಲ್ಲಿ ೩೬ ಶಾಸಕರ ಅಂದರೆ ಮೂರನೇ ಎರಡರಷ್ಟು ಬಲವಿದೆ ಎಂದು ಡೆಪ್ಯುಟಿ ಸ್ಪೀಕರ್‌ ಆಗಿರುವ ನರಹರಿ ಜೈರ್ವಾಲ್‌ ಅವರಿಗೇ ಪತ್ರ ಬರೆಯುತ್ತದೆ. ಎಲ್ಲವೂ ಉಪಸ್ಪೀಕರ್‌ ಅವರೇ ಮಾಡುವುದಾದರೆ ಸ್ಪೀಕರ್‌ ಏನು ಮಾಡುತ್ತಾರೆ?

ನಿಜವೆಂದರೆ ಸ್ಪೀಕರೇ ಇಲ್ಲ!
ಮಹಾರಾಷ್ಟ್ರದ ಈ ಪರಿಸ್ಥಿತಿಯಲ್ಲಿ ಅತ್ಯಂತ ಅಗತ್ಯವಾಗಿದ್ದ ಸ್ಪೀಕರ್‌ ಹುದ್ದೆಯೇ ಖಾಲಿಯಾಗಿದೆ. ನಿಜವೆಂದರೆ ಇದು ಎರಡೂವರೆ ವರ್ಷಗಳಿಂದಲೂ ಖಾಲಿಯೇ ಇದೆ! ೨೦೧೯ರ ನವೆಂಬರ್‌ನಲ್ಲಿ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿಗಳು ಮೈತ್ರಿ ಮಾಡಿಕೊಂಡು ಮಹಾ ವಿಕಾಸ ಅಘಾಡಿ ರಚಿಸಿಕೊಂಡಾಗ ಒಂದು ಒಪ್ಪಂದ ಆಗಿತ್ತು. ಮುಖ್ಯಮಂತ್ರಿ ಹುದ್ದೆ ಶಿವಸೇನೆಗೆ (ಉದ್ಧವ್‌ ಠಾಕ್ರೆ), ಉಪಮುಖ್ಯಮಂತ್ರಿ ಹುದ್ದೆ ಎನ್‌ಸಿಪಿಗೆ (ಅಜಿತ್‌ ಪವಾರ್‌), ಸ್ಪೀಕರ್‌ ಹುದ್ದೆ ಕಾಂಗ್ರೆಸ್‌ಗೆ (ನಾನಾ ಪಟೋಲೆ) ಅವರಿಗೆ ಎಂದು ತೀರ್ಮಾನವಾಗಿತ್ತು. ಹಾಗೆಯೇ ನೇಮಕವಾಯಿತು.

ನಾನಾ ಪಟೋಲೆ

ಕಾಂಗ್ರೆಸ್‌ನ ನಾನಾ ಪಟೋಲೆ ಅವರು ಸ್ಪೀಕರ್‌ ಆಗಿ ಎನ್‌ಸಿಪಿಯ ನರಹರಿ ಜೈರ್ವಾಲ್‌ ಅವರು ಉಪಸ್ಪೀಕರ್‌ ಆಗಿ ಕೆಲವು ಸಮಯ ಕೆಲಸ ಮಾಡಿದರು. ಈ ನಡುವೆ, ಮಹಾರಾಷ್ಟ್ರ ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷ ಬೇಕಾಯಿತು. ಆವಾಗ ಕಂಡದ್ದು ನಾನಾ ಪಟೋಲೆ. ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ಸ್ಪೀಕರ್‌ ಹುದ್ದೆಗೆ ಬೇರೆ ಯಾರನ್ನಾದರೂ ನೇಮಿಸುವುದು ಎಂದು ತೀರ್ಮಾನವಾಗಿತ್ತು. ಆದರೆ, ಅದಕ್ಕೆ ಕಾಲ ಕೂಡಿ ಬರಲೇ ಇಲ್ಲ. ಕಳೆದ ಎರಡೂವರೆಗೆ ವರ್ಷಗಳಿಂದ ಸ್ಪೀಕರ್‌ ಕೆಲಸವನ್ನೂ ನರಹರಿ ಜೈರ್ವಾಲ್‌ ಅವರೇ ನಿರ್ವಹಿಸುತ್ತಿದ್ದಾರೆ. ಎರಡು ಬಜೆಟ್‌ಗಳು ಕಳೆದು ಹೋಗಿವೆ, ಸ್ಪೀಕರ್‌ ಇರಲೇ ಇಲ್ಲ! ಕಾಂಗ್ರೆಸ್‌ ಈ ಹುದ್ದೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡೇ ಇಲ್ಲ. ಇಲ್ಲವಾದರೆ ಒಬ್ಬ ನಾಯಕನಿಗೆ ಅವಕಾಶ ದೊರೆಯುತ್ತಿತ್ತು.

ನರಹರಿ ಜೈರ್ವಾಲ್‌

ಉಪಸ್ಪೀಕರ್‌ಗೆ ಅರ್ಹತೆ ಇದೆಯೇ?
ಸ್ಪೀಕರ್‌ ಹುದ್ದೆ ಎನ್ನುವುದು ಸದನದಲ್ಲಿ ಸರ್ವಶ್ರೇಷ್ಠ ಶಕ್ತಿವಂತ. ಅವರೇ ಕಾನೂನು, ಅವರೇ ನ್ಯಾಯಾಧೀಶರು. ಅವರಿಗೆಂದೇ ಕೆಲವೊಂದು ವಿಶೇಷಾಧಿಕಾರಗಳೂ ಇವೆ. ಪಕ್ಷಾಂತರ ನಿಷೇಧ ಕಾಯಿದೆಯ ಉಲ್ಲಂಘನೆ ವಿಷಯ ಬಂದಾಗ ಅವರೇ ಸುಪ್ರೀಂ. ಕೋರ್ಟ್‌ ಕೂಡಾ ಅವರ ಒಂದು ತೀರ್ಮಾನವನ್ನು ಬದಲಿಸಲು, ಪ್ರಶ್ನಿಸಲು ಹಿಂದೆ ಮುಂದೆ ನೋಡುತ್ತದೆ.

ಅಂತ ಶಕ್ತಿವಂತ ಸ್ಪೀಕರ್‌ ಹುದ್ದೆಯನ್ನು ಅವರ ಅನುಪಸ್ಥಿತಿಯಲ್ಲಿ ಉಪಸ್ಪೀಕರ್‌ ನೋಡಿಕೊಳ್ಳಬಹುದು. ಆದರೆ, ಒಂದು ಸೂಕ್ಷ್ಮವಿದೆ. ಕೆಲವೊಂದು ಸೂಕ್ಷ್ಮ ವಿಚಾರಗಳನ್ನು (ಅನರ್ಹತೆ ಮತ್ತಿತರ) ಸ್ಪೀಕರ್‌ ಅವರೇ ನಿಭಾಯಿಸಬೇಕು. ಯಾಕೆಂದರೆ, ನಿಯಮಗಳಲ್ಲಿ ಸ್ಪೀಕರ್‌ ಎನ್ನುವುದನ್ನೇ ಒತ್ತಿ ಹೇಳಲಾಗಿದೆ. ಸದನದಲ್ಲಿ ಕೆಲವೊಂದು ಪ್ರಮುಖ ನಿರ್ಣಯಗಳನ್ನು ಅವರೇ ತೆಗೆದುಕೊಳ್ಳಬೇಕು.

ಸದನಕ್ಕೆ ಸ್ಪೀಕರ್‌ ಇದ್ದು ಅವರ ಅನುಪಸ್ಥಿತಿಯಲ್ಲಿ ಡೆಪ್ಯೂಟಿ ಸ್ಪೀಕರ್‌ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ. ಈಗ ಹಾಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸ್ಪೀಕರ್‌ ಹುದ್ದೆ ಖಾಲಿಯೇ ಇರುವುದರಿಂದ ಮಾತ್ರ ಅನರ್ಹತೆ ಮತ್ತಿತರ ಪ್ರಮುಖ ವಿಚಾರಗಳು ಉಪಸ್ಪೀಕರ್‌ ವ್ಯಾಪ್ತಿಗೆ ಬರುತ್ತಿದೆ ಅಷ್ಟೆ

ಇದನ್ನೂ ಓದಿ| ಶಿಂಧೆ ಟೀಮ್‌ಗೆ ಅನರ್ಹತೆ ತೂಗುಗತ್ತಿ, 16 ರೆಬೆಲ್‌ಗಳಿಗೆ ಡೆಪ್ಯುಟಿ ಸ್ಪೀಕರ್‌ ನೋಟಿಸ್‌, ಉತ್ತರಿಸಲು 2 ದಿನ ಟೈಮ್‌

Exit mobile version