Site icon Vistara News

Ranbir Kapoor: ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್ ಸಂಬಂಧ ನಟ ರಣಬೀರ್ ಕಪೂರ್‌ಗೆ ಇಡಿ ಸಮನ್ಸ್

Mahadev online Betting App Case, Ranbir Kapoor summoned by ED

ನವದೆಹಲಿ: ಕುಖ್ಯಾತ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ (Mahadev Online Betting App) ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಣಬೀರ್ ಕಪೂರ್ (Actor Ranbir Kapoor) ಅವರಿಗೆ ಜಾರಿ ನಿರ್ದೇಶನಾಲಯ (Enforcement Directorate) ಸಮನ್ಸ್ ನೀಡಿದೆ. ಅಕ್ಟೋಬರ್ 6ರಂದು ವಿಚಾರಣೆಗೆ ಹಾಜರಾಗುವಂತೆ ಇ ಡಿ ಸಮನ್ಸ್ ನೀಡಿದ್ದು(Summons), ನಟ ಸಮನ್ಸ್ ಸ್ವೀಕರಿಸಿದ್ದಾರೆ. ರಣಬೀರ್ ಕಪೂರ್ ಅವರ ಹೇಳಿಕೆಯನ್ನು ಸಾಕ್ಷಿಯಾಗಿ ಇ ಡಿ ದಾಖಲಿಸಲಿದೆ ಎಂದು ತಿಳಿದು ಬಂದಿದೆ. ರಣಬೀರ್ ಕಪೂರ್ ಅವರ ಮಹಾದೇವ್ ಬೆಟ್ಟಿಂಗ್ ಆ್ಯಪ್‌ ಪರವಾಗಿ ಪ್ರಚಾರ ಮಾಡಿದ್ದರು.

ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಅವರು ಆ್ಯಪ್ ಅನ್ನು ಯಾವಾಗ ಪ್ರಚಾರ ಮಾಡಲು ಪ್ರಾರಂಭಿಸಿದರು, ಈ ಪ್ರಚಾರಗಳಿಗಾಗಿ ಅವರು ಪಡೆದ ಹಣದ ಮೊತ್ತ ಮತ್ತು ಪಾವತಿಯ ವಿಧಾನವನ್ನು (ಚೆಕ್ ಮೂಲಕ ಅಥವಾ ನಗದು ರೂಪದಲ್ಲಿ) ಯಾವದಾಗಿತ್ತು ಮತ್ತು ಪ್ರಚಾರಕ್ಕಾಗಿ ಅವರನ್ನು ಯಾರು ಸಂಪರ್ಕಿಸಿದರು ಎಂಬಿತ್ಯಾದಿ ವಿಷಯಗಳ ಕುರಿತು ಇ ಡಿ ವಿಚಾರಣೆ ನಡೆಸಲಿದೆ.

ಮಹಾದೇವ್ ಬುಕ್ ಆ್ಯಪ್ ಒಂದು ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ವೇದಿಕೆಯಾಗಿದ್ದು, ಅದರ ಹಣಕಾಸು ವ್ಯವಹಾರಗಳ ಕುರಿತು ಇ ಡಿ ತನಿಖೆ ನಡೆಸುತ್ತಿದೆ. ಆ್ಯಪ್‌ ಹವಾಲಾ ಹಗರಣದಲ್ಲಿ ತೊಡಗಿರುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಇ ಡಿ ತನಿಖೆ ಕೈಗೊಂಡಿವೆ.

ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರು ಪ್ರಚಾರ ಮಾಡಿದ ಕಂಪನಿಯನ್ನು ದುಬೈನಿಂದ ನಡೆಸಲಾಗುತ್ತಿತ್ತು ಮತ್ತು ಬೇನಾಮಿ ಖಾತೆಗಳ ಮೂಲಕ ಹಣ ಲಪಟಾಯಿಸಲಾಗಿದೆ ಎಂಬ ಆರೋಪವಿದೆ. ಫೆಬ್ರವರಿ 2023 ರಲ್ಲಿ ಚಂದ್ರಕರ್ ಅವರು 200 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದ ಅದ್ಧೂರಿ ವಿವಾಹ ಸಮಾರಂಭ ಏರ್ಪಡಿಸಿದ್ದರು. ಈ ಘಟನೆ ಬಳಿಕ ಅಕ್ರಮ ವ್ಯವಹಾರದ ಹಗರಣ ಬೆಳಕಿಗೆ ಬಂತು.

ಈ ಸುದ್ದಿಯನ್ನೂ ಓದಿ: Anil Ambani: ಅಂಬಾನಿ ದಂಪತಿಗೆ ಇ ಡಿ ಸಂಕಷ್ಟ; ಇಂದು ಟೀನಾ ಅಂಬಾನಿ ವಿಚಾರಣೆ

ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೆಲವು ದಿನಗಳ ಹಿಂದೆ, ಕಂಪನಿಗೆ ಸಂಬಂಧಿಸಿದ ಹಲವು ಅಧಿಕಾರಿಗಳು, ಸೆಲೆಬ್ರಿಟಿಗಳ ಮನೆ ಹಾಗೂ ಕಚೇರಿಗಳನ್ನು ಶೋಧಿಸಿದ್ದರು. ಅಲ್ಲದೇ, 2.50 ಕೋಟಿ ರೂ. ಪಾಯಿ ಸೀಜ್ ಮಾಡಿದ್ದರು.

ಚಂದ್ರಕರ್ ಅವರ ಮದುವೆಗೆ ಬಾಲಿವುಡ್‌ನ ಬಹುದೊಡ್ಡ ಸೆಲೆಬ್ರಿಟಿ‌ಗಳು ಆಗಮಿಸಿದ್ದರು. ಟೈಗರ್ ಶ್ರಾಫ್, ಸನ್ನಿ ಲಿಯೋನ್, ನೆಹಾ ಕಕ್ಕರ್, ವಿಶಾಲ್ ದದ್ಲಾನಿ, ಎಲ್ಲಿ ಅವರಾಮ್, ಭಾರ್ತಿ ಸಿಂಗ್, ಭಾಗ್ಯಶ್ರೀ, ಕೀರ್ತಿ ಕರಬಂಧ, ನುಶ್ರತ ಭರುಚಾ, ಆತೀಫ್ ಅಸ್ಲಾಮ್, ರೆಹತಾ ಫತೇ ಅಲಿ ಖಾನ್, ಅಲಿ ಅಸ್ಗರ್, ಕೃಷ್ಣಾ ಅಭಿಷೇಕ್ ಮತ್ತು ಸುಖ್ವೀಂದರ್ ಸಿಂಗ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version