ಮುಂಬಯಿ: ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಹೊಸ ಸರಕಾರ ರಚನೆಯಾದ ಬಳಿಕ ಇಂದು ಮೊದಲ ಸವಾಲನ್ನು ಎದುರಿಸುತ್ತಿದೆ. ಭಾನುವಾರ ವಿಧಾನಸಭೆಯ ಸಭಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಇದನ್ನು ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ನಡುವಿನ ಮೊದಲ ಸುತ್ತಿನ ಕದನ ಎಂದೇ ಬಣ್ಣಿಸಲಾಗುತ್ತಿದೆ.
ರಾಜ್ಯಪಾಲ ಕೋಶ್ಯಾರಿ ಅವರ ಸೂಚನೆಯಂತೆ ಇಂದು ಮತ್ತು ನಾಳೆ (ಜು.೩-೪) ವಿಧಾನಸಭೆಯ ವಿಶೇಷ ಅಧಿವೇಶನ ನಡೆಡೆಯುತ್ತಿದೆ. ನಾಳೆ ಅಂದರೆ ಸೋಮವಾರ ನೂತನ ಮುಖ್ಯಮಂತ್ರಿ ಶಿಂಧೆ ವಿಶ್ವಾಸಮತ ಯಾಚಿಸಲಿದ್ದಾರೆ. ಇದಕ್ಕೂ ಮೊದಲು ಸ್ಪೀಕರ್ ಆಯ್ಕೆ ನಡೆಯುತ್ತಿದೆ.
ಸಭಾಧ್ಯಕ್ಷರ ಸ್ಥಾನ ಕಳೆದ ವರ್ಷದಿಂದಲೂ ಖಾಲಿ ಇರುವುದರಿಂದ ಮೊದಲಿಗೆ ಸ್ಪೀಕರ್ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ೨೦೨೧ರ ಫೆಬ್ರವರಿಯಲ್ಲಿ ಸಭಾಧ್ಯಕ್ಷರಾಗಿದ್ದ ನಾನಾ ಪಟೋಳೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದಲೂ ಸ್ಪೀಕರ್ ಹುದ್ದೆ ಖಾಲಿಯೇ ಇತ್ತು.
ಇಂದು ನಡೆಯುವ ಸ್ಪೀಕರ್ ಆಯ್ಕೆಗಾಗಿನ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಹಾಗೂ ಮಹಾ ವಿಕಾಸ ಅಘಾಡಿ ಮೈತ್ರಿಕೂಟದಿಂದ ಶಿವಸೇನೆಯ ಶಾಸಕ ರಾಜನ್ ಸಾಲ್ವಿ ನಾಮಪತ್ರ ಸಲ್ಲಿಕೆಯಾಗಿದೆ.
ವಿಶ್ವಾಶ ಮತ ಯಾಚನೆಗೂ ಮೊದಲು ನಡೆಯುವ ಈ ಚುನಾವಣೆಯಲ್ಲಿ ಪಕ್ಷಗಳ ಬಲಾಬಲದ ಪ್ರದರ್ಶನವೂ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ. ಆದರೆ ಬಿಜೆಪಿ ಅಭ್ಯರ್ಥಿ ನರ್ವೇಕರ್ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಯಾಕೆಂದರೆ, ಬಿಜೆಪಿ ತನ್ನ ಸ್ವಂತ ಬಲವಾದ ೧೦೬ ಶಾಸಕರು, ೧೭ ಪಕ್ಷೇತರರು ಮತ್ತು ೩೯ ಮಂದಿ ಶಿವಸೇನಾ ಬಂಡಾಯ ಶಾಸಕರ ಬಲವನ್ನು ಹೊಂದಿದೆ.
ಈಗಾಗಲೇ ಗೋವಾದಲ್ಲಿ ಬೀಡು ಬಿಟ್ಟಿದ್ದ ಶಿವಸೇನೆಯ ಬಂಡಾಯ ಶಾಸಕರನ್ನು ಇಲ್ಲಿಗೆ ಕರೆತರಲಾಗಿದ್ದು, ಶನಿವಾರ ಮಧ್ಯರಾತ್ರಿ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪಮುಖ್ಯಮಂತ್ರಿ ಫಡ್ನವಿಸ್ ಅವರೊಂಧಿಗೆಸಮಾಲೋಚನೆ ನಡೆಸಿದ್ದಾರೆ. ಇಲ್ಲಿಯ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಬೀಡು ಬಿಟ್ಟಿರುವ ಅವರಿಗೆ ʼವೈ ಪ್ಲಸ್ʼ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ| ಬಿಜೆಪಿ ಸಂಭ್ರಮಾಚರಣೆಯಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಿಸ್ ಆಗಿದ್ದು ಉದ್ದೇಶಪೂರ್ವಕವೇ?