Site icon Vistara News

Maha politics | ಇ.ಡಿ ನೆರವಿನಿಂದ ಮಹಾ ಸರ್ಕಾರ ರಚನೆ ಎಂದ ಫಡ್ನವಿಸ್‌!

maharashtra assembly

ಮುಂಬಯಿ: ಮಹಾರಾಷ್ಟ್ರದಲ್ಲಿ ನೂತನವಾಗಿ ರಚನೆಯಾಗಿರುವ ಸರ್ಕಾರ ವಿಪಕ್ಷಗಳ ನಾಯಕರು ಆರೋಪಿಸುತ್ತಿರುವಂತೆ ʼಇಡಿʼಯಿಂದ ರಚನೆಗೊಂಡಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಹೇಳಿದ್ದಾರೆ!

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ವಿಶ್ವಾಸ ಮತ ಪಡೆಯುತ್ತಿದ್ದಂತೆಯೇ ವಿಧಾನಸಭೆಯಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಇಡಿಯಿಂದಲೇ ರಚನೆಗೊಂಡಿದೆ. ಆದರೆ ಇಡಿ ಎಂದರೆ ಜಾರಿ ನಿರ್ದೇಶನಾಲಯದ (ಇಡಿ) ಭಯದಿಂದಲ್ಲ, ಬದಲಾಗಿ ಇಡಿ ಎಂದರೆ ಇ-ಏಕನಾಥ ಶಿಂಧೆ, ಡಿ-ಎಂದರೆ ದೇವೇಂದ್ರ ಫಡ್ನವಿಸ್‌ ಎಂದು ವಿವರಿಸಿದರು. ಶಿಂಧೆ ವಿಶ್ವಾಸಮತ ಪಡೆದಿರುವುದನ್ನು ನಿಜ ಶಿವಸೈನಿಕನಿಗೆ ದೊರೆತ ಅಭೂತ ಪೂರ್ವ ಬೆಂಬಲ ಎಂದು ಬಣ್ಣಿಸಿದರು.

ನೂತನ ಸರ್ಕಾರದ ಪರವಾಗಿ ವಿಶ್ವಾಸ ಮತ ಚಲಾಯಿಸಿದ ಎಲ್ಲರನ್ನೂ ಅಭಿನಂದಿಸಿದ ಅವರು, ಶಿಂಧೆ ಕಟ್ಟರ್‌ ಶಿವಸೈನಿಕ, ಬಾಳ್‌ ಸಾಹೇಬಹೇಬ್‌ ಠಾಕ್ರೆ ಅವರ ನಿಷ್ಠಾವಂತ ಬೆಂಬಲಿಗ ಎಂದರಲ್ಲದೆ, ಠಾಕ್ರೆಯವರ ಕನಸಿನಂತೆ ಇಂದು ನೂತನ ಹಿಂದೂ ಸರ್ಕಾರ ರಚನೆಯಾಗಿದೆ ಎಂದು ಹೇಳಿದರು.

ಏಕನಾಥ ಶಿಂಧೆ ಶಿವಸೇನೆಯಲ್ಲಿ ನಡೆಸಿಕೊಂಡು ಬಂದಿರುವ ವಿವಿಧ ಹೋರಾಟಗಳ ಮೇಲೆ ಬೆಳಕು ಚೆಲ್ಲಿದ ಫಡ್ನವಿಸ್‌, ಶಿಂಧೆ ಎಂದೂ ಅಧಿಕಾರಕ್ಕಾಗಿ ಹಂಬಲಿಸಿದವರಲ್ಲ, ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಲೇ ಬಂದಿದ್ದಾರೆ. ಅವರ ಈ ಎಲ್ಲ ಹೋರಾಟ, ಸೇವೆಯ ಫಲವಾಗಿ ಅವರಿಂದು ಮುಖ್ಯಮಂತ್ರಿಯಾಗಿ ನಮ್ಮ ಮುಂದೆ ನಿಂತಿದ್ದಾರೆ ಎಂದರು.

ನಮಗೆ ಅಧಿಕಾರ ಮುಖ್ಯವಲ್ಲ. ಬಹುಮತವಿಲ್ಲದಿದ್ದಾಗ ನಾವು ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದೇವೆ. ಆದರೆ ಬಿಜೆಪಿ ಮತ್ತು ಶಿವಸೇನೆಗೆ ಜನ ಅಧಿಕಾರ ನೀಡಿದ್ದರೂ, ಅದನ್ನು ಆಗು ಮಾಡುವಲ್ಲಿ ನಾವು ಸೋತಿದ್ದೆವು. ಅದನ್ನು ಶಿವಸೇನೆಯ ಶಾಸಕರು ಈಗ ಸಾಧ್ಯವಾಗಿಸಿದ್ದಾರೆ ಎಂದ ಫಡ್ನವಿಸ್‌, ಜನಬೆಂಬಲದ ಸರ್ಕಾರ ರಚಿಸುವಲ್ಲಿ ಶಿಂಧೆ ತೆಗೆದುಕೊಂಡ ನಿರ್ಧಾರಗಳು ಮಹತ್ವದ್ದು ಎಂದರು.

ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ಹಾಸ್ಯದ ದಾಟಿಯಲ್ಲಿಯೇ ಪ್ರಸ್ತಾಪಿಸಿದ ಫಡ್ನವಿಸ್‌, ಹಿಂದೊಮ್ಮೆ ನಾನು ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂದು ಹೇಳಿದ್ದೆ. ನಾನು ಹಾಗೆಂದಾಗ, ಹಲವರು ನನ್ನನ್ನು ಅಪಹಾಸ್ಯ ಮಾಡಿದರು. ನಾನು ಇಂದು ಹಿಂತಿರುಗಿದ್ದು, ನನ್ನೊಂದಿಗೆ ಅವರನ್ನು (ಏಕನಾಥ್ ಶಿಂಧೆ) ಅವರನ್ನೂ ಕರೆತಂದಿದ್ದೇನೆ. ನನ್ನನ್ನು ಅಪಹಾಸ್ಯ ಮಾಡಿದವರ ಮೇಲೆ ನಾನು ಸೇಡು ತೀರಿಸಿಕೊಳ್ಳುವುದಿಲ್ಲ. ನಾನು ಅವರನ್ನು ಕ್ಷಮಿಸುತ್ತೇನೆ, ರಾಜಕೀಯದಲ್ಲಿ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದರು.

ಇದನ್ನೂ ಓದಿ| Maha politics: ಸಿಎಂ ಆಗಿ ವಿಶ್ವಾಸ ಮತ ಗೆದ್ದ ಏಕನಾಥ್‌ ಶಿಂಧೆ, 164 ಶಾಸಕರ ಬೆಂಬಲ, ಅಘಾಡಿಗೆ ಕೇವಲ 99

Exit mobile version