ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ವಿಭಜನೆಗೊಂಡು, ಏಕನಾಥ ಶಿಂಧೆ ಮತ್ತು ಅವರ ಬಣದವರು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿ 40ಕ್ಕೂ ಹೆಚ್ಚು ದಿನಗಳಾದ ನಂತರ ಈಗ ರಾಜ್ಯದಲ್ಲಿ ಸಂಪುಟ ರಚನೆಯಾಗಿದೆ. ಇಂದು ಮೊದಲಬಾರಿಗೆ, ಒಂದನೇ ಹಂತದಲ್ಲಿ 18 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇವರಲ್ಲಿ 9 ಬಿಜೆಪಿ ಶಾಸಕರು ಮತ್ತು ಇನ್ನು 9 ಎಂಎಲ್ಎಗಳು ಶಿವಸೇನೆಯವರು. ಮಹಾರಾಷ್ಟ್ರದಲ್ಲಿ ಒಟ್ಟು 42 ಸಚಿವ ಸ್ಥಾನಗಳಿದ್ದು, ಸದ್ಯ 18 ಮಂದಿಗೆ ಮಾತ್ರ ಅವಕಾಶ ಲಭಿಸಿದೆ. ಹಾಗೇ, ಇನ್ನೂ ಕೆಲವು ದಿನಗಳ ಬಳಿಕ ಮಹಾರಾಷ್ಟ್ರದಲ್ಲಿ ಎರಡನೇ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ.
ಸಂಪುಟ ಸೇರಿದ ಸಚಿವರು ಇವರು..
ಇಂದು ಬಿಜೆಪಿಯ ಚಂದ್ರಕಾಂತ್ ಪಾಟೀಲ್, ಸುಧೀರ್ ಮುನಗಂಟಿವಾರ್, ಗಿರೀಶ್ ಮಹಾಜನ್, ಸುರೇಶ್ ಖಡೆ, ವಿಖೆ ಪಾಟೀಲ್, ರವೀಂದ್ರ ಚವ್ಹಾಣ್, ಮಂಗಲ್ ಪ್ರಭಾತ್ ಲೋಧಾ, ವಿಜಯಕುಮಾರ್ ಗವಿತ್ ಮತ್ತು ಅತುಲ್ ಸಾವೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದರೆ, ಶಿವಸೇನೆಯ ದಾದಾ ಭುಸೆ, ಶಂಭುರಾಜೆ ದೇಸಾಯಿ, ಸಂದೀಪನ್ ಭುಮ್ರೆ, ಉದಯ್ ಸಾಮಂತ್, ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸರ್ಕರ್, ಗುಲಾಬ್ರಾವ್ ಪಾಟೀಲ್ ಮತ್ತು ಸಂಜಯ್ ರಾಥೌಡ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಜೂನ್ 30ರಂದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಶಿವಸೇನೆಯ ಏಕನಾಥ ಶಿಂಧೆ ಬಣ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದೆ. ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಮತ್ತು ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಒಂದು ತಿಂಗಳ ಮೇಲಾದರೂ ಇನ್ನೂ ಸಂಪುಟ ರಚನೆಯಾಗಿರಲಿಲ್ಲ. ಈ ಮಧ್ಯೆ ಏಕನಾಥ ಶಿಂಧೆ ಅನಾರೋಗ್ಯಕ್ಕೀಡಾಗಿದ್ದ ಕಾರಣ, ದೇವೇಂದ್ರ ಫಡ್ನವೀಸ್ ಅವರೇ ದೆಹಲಿಗೆ ಹೋಗಿ, ವರಿಷ್ಠರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದರು. ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿಕೊಂಡು ಬಂದಿದ್ದರು.
ಇದನ್ನೂ ಓದಿ: ಮಹಾ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ: ನಾಳೆ 14+14 ಸಚಿವರ ಸೇರ್ಪಡೆ ಸಾಧ್ಯತೆ