Site icon Vistara News

ಜುಲೈ 11ರ ಬಳಿಕ ಮಹಾ ಸಂಪುಟ ವಿಸ್ತರಣೆ: ಬಿಜೆಪಿಯಿಂದ 25, ಶಿವಸೇನೆಯಿಂದ 13 ಮಂತ್ರಿಗಳು?

bjp-shinde

Mumbai: ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸಚಿವ ಸಂಪುಟ ಜುಲೈ ೧೧ರ ಬಳಿಕ ಯಾವುದೇ ದಿನ ವಿಸ್ತರಣೆಯಾಗುವ ಸಾಧ್ಯತೆ ಇದೆ. ಪೂರ್ಣ ಸಂಪುಟದಲ್ಲಿ ಒಟ್ಟು ೪೫ ಮಂದಿ ಇರುವ ನಿರೀಕ್ಷೆ ಇದ್ದು, ಹೆಚ್ಚಿನ ಸ್ಥಾನಗಳು ಬಿಜೆಪಿಗೆ ಸಿಗಲಿದೆ.

ಈಗ ಶಿವಸೇನೆಯ ಮುಖ್ಯಮಂತ್ರಿ ಮತ್ತು ಬಿಜೆಪಿಯ ಉಪ ಮುಖ್ಯಮಂತ್ರಿ ಇದ್ದಾರೆ. ಇನ್ನು ಬಿಜೆಪಿಯಿಂದ ೨೫ ಮಂದಿ ಹಾಗೂ ಶಿವಸೇನೆಯಿಂದ ೧೩ ಮಂದಿ ಸಂಪುಟ ಸೇರುವ ನಿರೀಕ್ಷೆ ಇದೆ. ಉಳಿದ ಸ್ಥಾನಗಳು ಪಕ್ಷೇತರರು ಮತ್ತು ಇತರ ಬೆಂಬಲಿಗ ಪಕ್ಷಗಳಿಗೆ ಸಿಗಲಿದೆ ಎನ್ನಲಾಗಿದೆ.

ಹೊಸಬರಿಗೆ ಮಣೆ ನಿರೀಕ್ಷೆ
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೊರತುಪಡಿಸಿದಂತೆ ಈ ಬಾರಿ ಹೊಸ ಮುಖಗಳಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಇದುವರೆಗೂ ಮಂತ್ರಿ ಸ್ಥಾನ ವಂಚಿತರಾಗಿರುವವರಿಗೆ ಈ ಬಾರಿ ಹುದ್ದೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಅವರ ಮಂತ್ರಿಗಿರಿಯ ಅವಧಿ ಎರಡೂವರೆ ವರ್ಷಗಳಾಗಿರುವುದರಿಂದ ಹೊಸಬರಿಗೆ ಅವಕಾಶ ನೀಡುವ ಮನಸ್ಸು ಮಾಡಲಾಗುತ್ತಿದೆ ಎನ್ನಲಾಗಿದೆ.

ಮೂವರಲ್ಲಿ ಒಬ್ಬರಿಗೆ ಸ್ಥಾನ
ಬಿಜೆಪಿ-ಶಿವಸೇನೆ ಮೈತ್ರಿ ಕೂಟದಲ್ಲಿ ಈಗ ಬಿಜೆಪಿಯ ೧೦೬ ಮತ್ತು ಶಿವಸೇನೆಯ ೪೦ ಶಾಸಕರು ಇದ್ದಾರೆ. ಸದ್ಯದ ಲೆಕ್ಕಾಚಾರ ಪ್ರಕಾರ ಬಿಜೆಪಿಯಲ್ಲಿ ಪ್ರತಿ ನಾಲ್ವರು ಶಾಸಕರಲ್ಲಿ ಒಬ್ಬರಿಗೆ ಮತ್ತು ಶಿವಸೇನೆಯಲ್ಲಿ ಮೂವರಲ್ಲಿ ಒಬ್ಬರಿಗೆ ಮಂತ್ರಿ ಪಟ್ಟ ಸಿಗಲಿದೆ. ಉಳಿದ ಸ್ಥಾನಗಳು ಪಕ್ಷೇತರ ಹಾಗೂ ಇತರರಿಗೆ ಸಿಗಲಿದೆ.

ಜುಲೈ ೧೧ರ ನಂತರ ಯಾಕೆ?
ಶಿವಸೇನೆಯಿಂದ ಬಂಡಾಯವೆದ್ದ ಏಕನಾಥ ಶಿಂಧೆ ಬಣ ಈಗ ಅಧಿಕಾರವನ್ನು ಹಿಡಿದಿದೆ. ಈ ನಡುವೆ ಬಂಡಾಯವನ್ನು ಬಗ್ಗುಬಡಿಯುವ ಪ್ರಯತ್ನದಲ್ಲಿ ಶಿವಸೇನೆಯ ಉದ್ಧವ್‌ ಠಾಕ್ರೆ ಬಣವು ಶಿಂಧೆ ಬಣದ ೧೬ ಶಾಸಕರನ್ನು ಅನರ್ಹಗೊಳಿಸುವಂತೆ ಡೆಪ್ಯುಟಿ ಸ್ಪೀಕರ್‌ ಅವರನ್ನು ಕೋರಿತ್ತು. ಅವರು ಶಿಂಧೆ ಬಣದ ೧೬ ಶಾಸಕರಿಗೆ ನೋಟಿಸ್‌ ಕೂಡಾ ಜಾರಿಗೊಳಿದ್ದರು. ಈ ನಡುವೆ, ಶಿಂಧೆ ಬಣ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೊರೆ ಹೊಕ್ಕಿತ್ತು. ಸುಪ್ರೀಂಕೋರ್ಟ್‌ ಈ ಅರ್ಜಿಯ ವಿಚಾರಣೆಯನ್ನು ಕೆಲವು ಸೂಚನೆ, ಆದೇಶಗಳೊಂದಿಗೆ ಜುಲೈ ೧೧ಕ್ಕೆ ನಿಗದಿಪಡಿಸಿದೆ.

ಈ ನಡುವೆ, ಶಿಂಧೆ ಬಣವು ತನ್ನದೇ ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತಿದ್ದು, ಶಿಂಧೆ ಅವರನ್ನು ಪಕ್ಷದ ಶಾಸಕಾಂಗ ನಾಯಕನಾಗಿ ಆಯ್ಕೆ ಮಾಡಿದೆ. ಗೋಗಾವಾಲೆ ಅವರನ್ನು ಮುಖ್ಯ ಸಚೇತಕರಾಗಿಯೂ ನೇಮಕ ಮಾಡಿದೆ. ಇಷ್ಟಕ್ಕೇ ನಿಲ್ಲದೆ, ಆದಿತ್ಯ ಠಾಕ್ರೆ ಒಬ್ಬರನ್ನು ಹೊರತುಪಡಿಸಿ ಉದ್ಧವ್‌ ಬಣದ ಉಳಿದೆಲ್ಲ ೧೫ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದೆ. ಈ ಪ್ರಕರಣದ ವಿಚಾರಣೆಯೂ ಜುಲೈ ೧೧ರಂದು ನಡೆಯಲಿದೆ. ಹೀಗಾಗಿ ಅದರ ತೀರ್ಪು ಬಂದ ಮೇಲೆಯೇ ಮುಂದಿನ ಹೆಜ್ಜೆ ಇಡುವ ಸಾಧ್ಯತೆ ಕಂಡುಬಂದಿದೆ.

ಇದನ್ನೂ ಓದಿ| Maha politics: ಸಿಎಂ ಆಗಿ ವಿಶ್ವಾಸ ಮತ ಗೆದ್ದ ಏಕನಾಥ್‌ ಶಿಂಧೆ, 164 ಶಾಸಕರ ಬೆಂಬಲ, ಅಘಾಡಿಗೆ ಕೇವಲ 99

Exit mobile version