Site icon Vistara News

ಹಣ್ಣು ತಿನ್ನುತ್ತೀರಾ ಎಂದು ಕೇಳಿ, ಇಬ್ಬರು ವೈದ್ಯರಿಗೆ ಇರಿದ ಗಾಯಾಳು; ಮುಷ್ಕರ ಶುರು ಮಾಡಿದ ಮಹಾರಾಷ್ಟ್ರ ಡಾಕ್ಟರ್ಸ್​​

Maharashtra Doctors Association Strike After Attack on 2 Doctors

ಯವತ್ಮಾಲ್​: ಮಹಾರಾಷ್ಟ್ರದ ಯವತ್ಮಾಲ್​​ನ ಶ್ರೀ ವಸಂತರಾವ್​ ನಾಯಕ್​ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಇಬ್ಬರು ರೆಸಿಡೆಂಟ್​ ವೈದ್ಯರ (ನಿವಾಸಿ ವೈದ್ಯರು) ಮೇಲೆ ರೋಗಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಲವಾಗಿ ಖಂಡಿಸಿದೆ. ಹಾಗೇ ಪ್ರತಿಭಟನೆಗೆ ಕರೆಕೊಟ್ಟಿದೆ. ಅದರ ಅನ್ವಯ ವಸಂತ್​ರಾವ್ ನಾಯಕ್​ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂದಿನಿಂದ ತುರ್ತು ಸೇವೆ ಸೇರಿ ಎಲ್ಲ ಮಾದರಿಯ ತಪಾಸಣೆ, ಚಿಕಿತ್ಸೆ ಸ್ಥಗಿತಗೊಳ್ಳಲಿದೆ.

‘ವೈದ್ಯರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಮುಂದೆ ಯಾವತ್ತೂ ಇಂಥ ಘಟನೆ ನಡೆಯದಂತೆಯೂ ಕ್ರಮ ವಹಿಸಬೇಕು’ ಎಂದು ಭಾರತೀಯ ವೈದ್ಯಕೀಯ ಸಂಘದ ಕಿರಿಯ ವೈದ್ಯರ ಮಹಾರಾಷ್ಟ್ರ ನೆಟ್ವರ್ಕ್​ ಹೇಳಿಕೆ ಬಿಡುಗಡೆ ಮಾಡಿದೆ. ಹಾಗೇ, ಈ ಆಸ್ಪತ್ರೆ ಎದುರು ವೈದ್ಯಕೀಯ ಸಿಬ್ಬಂದಿ ಮೇಣದ ಬತ್ತಿ ಕೈಯಲ್ಲಿ ಹಿಡಿದು, ಶಾಂತವಾಗಿ ಮುಷ್ಕರ ನಡೆಸುತ್ತಿದ್ದಾರೆ.

ಏನಿದು ಘಟನೆ?
ಯವತ್ಮಾಲ್​​ನಲ್ಲಿರುವ ಶ್ರೀ ವಸಂತರಾವ್​ ನಾಯಕ್​ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವಾರದ ಹಿಂದೆ ಸೂರಜ್​ ಠಾಕೂರ್​ ಎಂಬುವನೊಬ್ಬ ದಾಖಲಾಗಿದ್ದ. ಆತ ಚಾಕುವಿನಿಂದ ತನ್ನ ಹೊಟ್ಟೆಗೆ ತಾನೇ ಇರಿದುಕೊಂಡು ಗಂಭೀರವಾಗಿ ಗಾಯಗೊಂಡಿದ್ದ. ಅವನಿಗೆ ಸಣ್ಣ ಸರ್ಜರಿ ಕೂಡ ಮಾಡಬೇಕಾಗಿತ್ತು. ಅದಕ್ಕೂ ಪೂರ್ವ ವೈದ್ಯರು ಪ್ರಾಥಮಿಕ ಚಿಕಿತ್ಸೆ ಕೊಟ್ಟಿದ್ದರು. ರಾತ್ರಿ 9ಗಂಟೆ ಹೊತ್ತಿಗೆ ಅಲ್ಲಿನ ಇಬ್ಬರು ವೈದ್ಯರು ರೋಗಿಗಳ ತಪಾಸಣೆಗಾಗಿ ರೌಂಡ್ಸ್​​ಗಾಗಿ ಹೊರಟಿದ್ದರು. ಒಬ್ಬೊಬ್ಬರೇ ರೋಗಿಗಳನ್ನು ತಪಾಸಣೆ ಮಾಡುತ್ತ, ಈ ಸೂರಜ್​ ಠಾಕೂರ್​ ಬಳಿಯೂ ಬಂದರು. ಆಗ ಆತ ಒಂದು ಕೈಯಲ್ಲಿ ಹಣ್ಣು ಕತ್ತರಿಸುವ ಚಾಕು ಮತ್ತು ಇನ್ನೊಂದು ಕೈಯಲ್ಲಿ ಹಣ್ಣು ಹಿಡಿದು ಕುಳಿತಿದ್ದ. ‘ನೀವು ಹಣ್ಣು ತಿನ್ನುತ್ತೀರಾ?’ ಎಂದು ವೈದ್ಯರ ಬಳಿಯೂ ಕೇಳಿದ. ವೈದ್ಯರು ತಮಗೆ ಹಣ್ಣು ಬೇಡವೆಂದು ಹೇಳಿ, ಗಾಯವನ್ನು ನೋಡುತ್ತೇವೆ ಎಂದರು. ಅದಕ್ಕೆ ಸೂರಜ್​ ಒಪ್ಪದೆ ಇದ್ದಾಗ ಅವರು ಮುಂದೆ ಹೋದರು.

ಕೆಲ ಹೊತ್ತುಗಳ ಬಳಿ ಒಬ್ಬರು ವೈದ್ಯರು ಸೂರಜ್​ ಬಳಿ ಬಂದು ಮತ್ತೆ ಆತನನ್ನು ಪರಿಶೀಲನೆ ಮಾಡಲು ಮುಂದಾದರು. ಇನ್ನೊಬ್ಬ ವೈದ್ಯರು ಅಲ್ಲಿಯೇ ಸಮೀಪ ನಿಂತಿದ್ದರು. ಆಗ ಸೂರಜ್​ ಕೈಯಲ್ಲಿದ್ದ ಚಾಕುವಿನಿಂದ ವೈದ್ಯರಿಗೆ ಇರಿದಿದ್ದಾನೆ. ಹಾಗೇ, ತನ್ನ ಸಹೋದ್ಯೋಗಿಯನ್ನು ಕಾಪಾಡಲು ಓಡಿಹೋದ ಇನ್ನೊಬ್ಬ ವೈದ್ಯನ ಕೈಯಿಗೂ ಗಾಯ ಮಾಡಿದ್ದಾನೆ. ಸೂರಜ್​ ಮಾನಸಿಕವಾಗಿ ಕೂಡ ಸ್ವಲ್ಪ ಅಸ್ವಸ್ಥ ಎನ್ನಲಾಗಿದೆ. ಸದ್ಯ ಗಾಯಗೊಂಡ ವೈದ್ಯರಿಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಯನ್ನು ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವೈದ್ಯಕೀಯ ಸಂಘ ‘ಯಾವತ್ಮಲ್​ ಆಸ್ಪತ್ರೆಯಲ್ಲಿ ನಡೆದ ಹಲ್ಲೆ ಖಂಡನೀಯ. ಆಸ್ಪತ್ರೆಗಳಲ್ಲಿ ಯಾವುದೇ ರೀತಿಯಲ್ಲಿ ಹಿಂಸೆ ನಡೆಯುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇಂಥ ಬೆಳವಣಿಗೆಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಇಡೀ ವೈದ್ಯ ಸಮುದಾಯಕ್ಕೇ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಯಾವುದೇ ಸಂದರ್ಭವೇ ಇರಲಿ, ವೈದ್ಯರ ಮೇಲೆ ನಡೆಯುವ ಹಲ್ಲೆ ವಿರುದ್ಧ ಸರ್ಕಾರಗಳು ಮತ್ತು ಸಾಮಾನ್ಯ ಜನರು ಶೂನ್ಯ ಸಹಿಷ್ಣುತೆ ತೋರಬೇಕು’ ಎಂದು ಹೇಳಿದೆ.

ಇದನ್ನೂ ಓದಿ: Medical negligence | ಆಪರೇಷನ್‌ ಮಾಡಿದ ಕೆಲವೇ ಹೊತ್ತಲ್ಲಿ ಯುವತಿ ಸಾವು; ಆಸ್ಪತ್ರೆಗೆ ಕಲ್ಲು ತೂರಾಟ, ಪ್ರತಿಭಟನೆ

Exit mobile version