Site icon Vistara News

ಪತನದ ಅಂಚಿಗೆ ಸರಿದ ಮಹಾ ಸರಕಾರ, ಬಿಜೆಪಿ ಜತೆ ಮೈತ್ರಿಗೆ ಶಿಂಧೆ ಟೀಮ್‌ ರೆಡಿ

ಮುಂಬಯಿ: ಮಹಾರಾಷ್ಟ್ರದ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿಕೂಟ ಸರಕಾರ ಪತನದ ಅಂಚಿಗೆ ಬಂದು ನಿಂತಿರುವುದು ಸ್ಪಷ್ಟವಾಗಿದೆ. ಶಿವಸೇನೆ ನಾಯಕ, ನಗರಾಭಿವೃದ್ಧಿ ಸಚಿವ ಏಕನಾಥ ಶಿಂಧೆ ಅವರು ೩೦ಕ್ಕೂ ಅಧಿಕ ಶಾಸಕರೊಂದಿಗೆ ಬಂಡಾಯವೆದ್ದು ರೆಸಾರ್ಟ್‌ ಸೇರಿಕೊಂಡಿದ್ದಾರೆ. ಇವರು ಬಿಜೆಪಿ ನಾಯಕರ ಸಂಪರ್ಕ ಮತ್ತು ರಕ್ಷಣೆಯಲ್ಲಿ ಇರುವುದು ಸ್ಪಷ್ಟವಾಗಿದೆ. ಹೀಗಾಗಿ ಸರಕಾರ ಸಂಕಷ್ಟದಲ್ಲಿ ಸಿಲುಕಿರುವುದು ನಿಜ. ಬಿಜೆಪಿ ಕೂಡಾ ಹೊಸ ಸರಕಾರ ರಚನೆ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಿದೆ. ಈ ನಡುವೆ, ಒಂದೊಮ್ಮೆ ಶಿವಸೇನೆ ಬಿಜೆಪಿಗೆ ಬೆಂಬಲ ನೀಡಿದರೆ ಬಂಡಾಯದಿಂದ ಹಿಂದೆ ಸರಿಯುವುದಾಗಿ ಏಕನಾಥ ಶಿಂಧೆ ಆಫರ್‌ ನೀಡಿರುವುದು ಹೊಸ ತಿರುವನ್ನು ನೀಡಿದೆ.

ಶಿವಸೇನೆಯ ಆಂತರಿಕ ಭಿನ್ನಮತ ಹೊಸದೇನೂ ಇಲ್ಲ. ಕಳೆದ ರಾಜ್ಯಸಭಾ ಚುನಾವಣೆಯಲ್ಲೇ ಅಡ್ಡ ಮತದಾನ ನಡೆದಿತ್ತು. ಅದು ಸೋಮವಾರ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಢಾಳಾಗಿ ಗೋಚರಿಸಿದೆ. ಶಿವಸೇನೆಯ ಸುಮಾರು ೨೦ರಷ್ಟು ಶಾಸಕರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದರು. ಇದರಿಂದ ಗೆಲ್ಲಬಹುದಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಸೋತು ಗೆಲ್ಲುವ ಯಾವ ಅವಕಾಶಗಳೂ ಇಲ್ಲದಿದ್ದ ಬಿಜೆಪಿ ಅಭ್ಯರ್ಥಿ ಗೆಲುವನ್ನು ಸಾಧಿಸಿದರು.

ಯಾವಾಗ ಬಂಡಾಯದ ಬಿರುಗಾಳಿ ದೊಡ್ಡ ಮಟ್ಟದ ಅಡ್ಡ ಮತದಾನದ ಮೂಲಕ ಸ್ಪಷ್ಟವಾಯಿತೋ ಇನ್ನು ತುಂಬ ದಿನ ಸುಮ್ಮನೆ ಕಳೆಯುವುದು ಅಗತ್ಯವಿಲ್ಲ ಎಂದು ತೀರ್ಮಾನಿಸಿದ ಬಂಡುಕೋರರ ನಾಯಕ ಏಕನಾಥ ಶಿಂಧೆ ಅವರು ಸೋಮವಾರ ರಾತ್ರಿಯೇ ತಮ್ಮ ಟೀಮ್‌ ಜತೆ ಸೂರತ್‌ಗೆ ತೆರಳಿ ಅಲ್ಲಿನ ರೆಸಾರ್ಟ್‌ನಲ್ಲಿ ಲಾಕ್‌ ಆಗಿದ್ದಾರೆ.

ಏಕನಾಥ ಶಿಂಧೆ ಅವರಿಗೆ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಸಿಟ್ಟಾಗಿದ್ದರು ಎನ್ನಲಾಗಿದೆ. ಆದರೆ, ಶಿವಸೇನೆಯೊಳಗಿನ ಆಕ್ರೋಶಗಳನ್ನೆಲ್ಲ ಬಂಡವಾಳ ಮಾಡಿಕೊಂಡು ಬಿಜೆಪಿಯೇ ಈ ತಂತ್ರವನ್ನು ಹೆಣೆದಿದೆಯೇ ಎಂಬ ಸಂಶಯಗಳು ರಾಜಕೀಯ ವಲಯದಲ್ಲಿವೆ. ಇದಕ್ಕೆ ಪೂರಕವೆಂಬಂತೆ ಗುಜರಾತ್‌ನ ಸೂರತ್‌ಗೆ ಹೋಗಿರುವ ಶಿಂಧೆ ಟೀಮ್‌ ಗೆ ಅಲ್ಲಿ ರಕ್ಷಣೆಯನ್ನು ಒದಗಿಸುತ್ತಿರುವುದು ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಆರ್‌.ಸಿ. ಪಾಟೀಲ್‌ ಅವರು. ಇದರ ಜತೆಗೆ ಏಕನಾಥ ಶಿಂಧೆ ಅವರು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ಅವರ ನೇರ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಯೂ ಇದೆ.

ಸರಕಾರ ಅಪಾಯದಲ್ಲಿರುವುದು ಯಾಕೆ?
ಸೂರತ್‌ನಲ್ಲಿರುವ ಏಕನಾಥ ಶಿಂಧೆ ಟೀಮ್‌ ಶಿವಸೇನೆಯ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಸುಮಾರು ೩೫ ಶಾಸಕರು ಶಿಂಧೆ ತಂಡದಲ್ಲಿರುವುದು ಸ್ಪಷ್ಟವಾಗಿದೆ. ಶಿವಸೇನೆಯ ಪ್ರಧಾನ ಸೇನಾನಿ ಹಾಗು ಮೈತ್ರಿಕೂಟದ ಮುಂದಾಳು, ಸಿಎಂ ಉದ್ಧವ್‌ ಠಾಕ್ರೆ ಅವರು ಕರೆದ ಶಿವಸೇನೆ ಶಾಸಕರ ತುರ್ತು ಸಭೆಗೆ ಬಂದಿದ್ದು ಕೇವಲ ೧೮ ಮಂದಿ ಮಾತ್ರ. ಶಿವಸೇನೆಯಲ್ಲಿ ಈಗ ೫೬ ಶಾಸಕರಿದ್ದು ಅವರ ಪೈಕಿ ಇಂಥ ಸಂಕೀರ್ಣ ಕಾಲಘಟ್ಟದ ಮೀಟಿಂಗ್‌ಗೆ ಕೇವಲ ೧೮ ಮಂದಿ ಮಾತ್ರ ಬಂದಿದ್ದಾರೆಂದರೆ ಉಳಿದ ೩೮ ಮಂದಿ ಶಿಂಧೆ ಟೀಮ್‌ನಲ್ಲಿದ್ದಾರೆ ಎಂಬುದರ ಸೂಚಕವಾಗಿದೆ.

ಆಫರ್‌ ನೀಡಿದ ಶಿಂಧೆ
ಈ ನಡುವೆ, ಏಕನಾಥ ಶಿಂಧೆ ಅವರು ಶಿವಸೇನೆಯು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆ ಮೈತ್ರಿ ಮಾಡಿಕೊಂಡಿರುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ತಮ್ಮ ಬಾಳ್‌ ಠಾಕ್ರೆ ಅವರ ಶಿವಸೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ನಡುವೆಯೇ ಒಂದೊಮ್ಮೆ ಶಿವಸೇನೆ ಬಿಜೆಪಿ ಸರಕಾರ ರಚನೆಗೆ ಸಹಕಾರ ನೀಡುವುದಾದರೆ ತಾವು ಪಕ್ಷದಲ್ಲೇ ಉಳಿಯಲು ಸಿದ್ಧ ಎಂಬ ಸಂದೇಶವನ್ನು ಉದ್ಧವ್‌ ಠಾಕ್ರೆ ಅವರಿಗೆ ರವಾನಿಸಿದ್ದಾರೆ. ಈ ಒಪ್ಪಂದಕ್ಕೇನಾದರೂ ಉದ್ಧವ್‌ ಠಾಕ್ರೆ ಒಪ್ಪಿದರೆ ಶಿವಸೇನೆ ವಿಭಜನೆ ತಪ್ಪಬಹುದು. ಇಲ್ಲವಾದರೆ ಏಕನಾಥ ಶಿಂಧೆ ಟೀಮ್‌ ಬಿಜೆಪಿಯನ್ನು ಬೆಂಬಲಿಸುವುದು ಖಾತ್ರಿಯಾಗಿದೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿರುವ ಬಿಜೆಪಿ, ಶಾಸಕರ ವಿಶ್ವಾಸ ಕಳೆದುಕೊಂಡಿರುವ ಮೈತ್ರಿ ಸರಕಾರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ಜತೆಗೆ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ| ಮಹಾರಾಷ್ಟ್ರದ ಮೈತ್ರಿ ಸರಕಾರ: ಉರುಳುವುದೇ? ಉಳಿಯುವುದೇ?

Exit mobile version