ಮುಂಬೈ: ಮಹಾರಾಷ್ಟ್ರ ಶಿವಸೇನೆ ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿ ಸರ್ಕಾರಕ್ಕೊಂದು ಆಘಾತ ಉಂಟಾಗಿದೆ. ನಿನ್ನೆ ವಿಧಾನ ಪರಿಷತ್ ಚುನಾವಣೆ ನಡೆದು, ಬಿಜೆಪಿಯ ನಾಲ್ವರು ಮತ್ತು ಎನ್‌ಸಿಪಿ, ಶಿವಸೇನೆಯ ತಲಾ ಇಬ್ಬರು ನಾಯಕರು ಗೆಲ್ಲುತ್ತಿದ್ದಂತೆ ಇತ್ತ ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ (Eknath Shinde)ಮತ್ತು ಅವರ ಬೆಂಬಲಿಗರಾದ 10-12 ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರೆಲ್ಲ ಗುಜರಾತ್‌ನ ಸೂರತ್‌ನಲ್ಲಿರುವ ಒಂದು ಹೋಟೆಲ್‌ನಲ್ಲಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ನಾಯಕರು ಒಂದಷ್ಟು ಜನ ಅಡ್ಡಮತದಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಸಚಿವರು, ಶಾಸಕರು ನಾಪತ್ತೆಯಾಗಿದ್ದಾರೆ. ಈ ಮೂಲಕ ಮಹಾ ಸರ್ಕಾರದಲ್ಲಿ ಭಿನ್ನಮತ ಶುರುವಾದ ಲಕ್ಷಣ ಗೋಚರಿಸುತ್ತಿದೆ.
ಮಹಾರಾಷ್ಟ್ರ ವಿಧಾನಪರಿಷತ್‌ನ 10 ಸೀಟ್‌ಗಳಿಗೆ ಚುನಾವಣೆ ನಡೆದಿತ್ತು. ಬಿಜೆಪಿ ಐದು ಸೀಟ್‌ಗಳಿಗೆ ಅಭ್ಯರ್ಥಿಗಳನ್ನು ಹಾಕಿದ್ದರೆ, ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿ ಕೂಟ ಆರು ಸೀಟ್‌ಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಬಿಜೆಪಿಯ ಐವರಲ್ಲಿ ನಾಲ್ವರು ಗೆದ್ದಿದ್ದಾರೆ. ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕರ ಬಲ 106. ಆದರೆ ಬಿದ್ದ ಮತದ ಲೆಕ್ಕಾಚಾರ ನೋಡಿದರೆ ಅಲ್ಲಿ ಖಂಡಿತವಾಗಿಯೂ ಶಿವಸೇನೆ, ಕಾಂಗ್ರೆಸ್ ಕಡೆಯಿಂದ ಅಡ್ಡಮತದಾನ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಮಾತನಾಡಿದ್ದ ಬಿಜೆಪಿ ಗೆದ್ದ ಅಭ್ಯರ್ಥಿ ಪ್ರವೀಣ್ ದಾರೇಕರ್, ʼನಮಗೆ ತುಂಬ ಖುಷಿಯಾಗಿದೆ. ಶಿವಸೇನೆ ಮತ್ತು ಕಾಂಗ್ರೆಸ್‌ನ ಕೆಲವು ಸದಸ್ಯರು ಖಂಡಿತ ಅಡ್ಡಮತದಾನ ಮಾಡಿದ್ದಾರೆ. ಅದಿಲ್ಲದೆ ಇದ್ದರೆ ಇಷ್ಟು ಪ್ರಮಾಣದ ಮತವನ್ನು ನಾವು ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ | ಮಹಾರಾಷ್ಟ್ರ, ಕರ್ನಾಟಕದಲ್ಲಿ ಗೆದ್ದು ಬೀಗಿದ ಬಿಜೆಪಿ, ಠಾಕ್ರೆ ಪಾಳೆಯಕ್ಕೆ ಮುಖಭಂಗ
ಇಂದು ತುರ್ತು ಸಭೆ
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್-ಶಿವಸೇನೆ ಸೇರಿ ಒಟ್ಟು 20 ಶಾಸಕರು ಅಡ್ಡಮತದಾನ ಮಾಡಿದ ಅನುಮಾನ ದಟ್ಟವಾಗಿದ್ದಲ್ಲದೆ, ಹೀಗೆ ಶಿವಸೇನೆ ಸಚಿವ-ಶಾಸಕರು ಸಂಪರ್ಕಕ್ಕೆ ಸಿಗದೆ ಇರುವ ಬೆನ್ನಲ್ಲೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು(ಜೂ.21) ಮಧ್ಯಾಹ್ನ ತುರ್ತು ಸಭೆ ಕರೆದಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸಂಗ ಬಿಟ್ಟು ಕಾಂಗ್ರೆಸ್-ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಶಿವಸೇನೆ ಸರ್ಕಾರ ರಚಿಸಿದ್ದು ಹಳೇ ಕತೆ. ಆದರೆ ಆ ಗುಂಗಿನಿಂದ ಬಿಜೆಪಿಯೇನೂ ಹೊರಬಂದಿಲ್ಲ. ಮಹಾ ವಿಕಾಸ ಅಘಾಡಿ ಮೈತ್ರಿ ಸರ್ಕಾರ ಉರುಳಿಸುವ ಪ್ರಯತ್ನ ಸದಾ ಜಾರಿಯಲ್ಲಿಟ್ಟಿದೆ ಮತ್ತು ಅದಕ್ಕೊಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದೆ ಎಂಬುದು ಸತ್ಯ.
ಇದನ್ನೂ ಓದಿ: ಮಹಾ ವಿಧಾನ ಪರಿಷತ್ತಿಗೆ ಬಿಜೆಪಿಯಿಂದ ನಾಲ್ವರು, ಎನ್‌ಸಿಪಿ ಹಾಗೂ ಶಿವಸೇನೆಯ ತಲಾ ಇಬ್ಬರ ಆಯ್ಕೆ