Site icon Vistara News

Maharashtra Lokayukta Bill | ಅಣ್ಣಾ ಹಜಾರೆ ಕನಸು ನನಸು, ಮಹಾರಾಷ್ಟ್ರದಲ್ಲಿ ಲೋಕಾಯುಕ್ತ ಬಿಲ್ ಪಾಸ್,‌ ಇನ್ನು ಸಿಎಂ ವಿರುದ್ಧವೂ ತನಿಖೆ

Maharashtra Lokayukta Bill

ಮುಂಬೈ: ಭ್ರಷ್ಟಾಚಾರ ತಡೆ, ಭ್ರಷ್ಟಾಚಾರ ಎಸಗುವ ರಾಜಕಾರಣಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ದಿಸೆಯಲ್ಲಿ ಮಹಾರಾಷ್ಟ್ರ ಐತಿಹಾಸಿಕ ನಡೆ ಇಟ್ಟಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಅಧಿಕಾರವಿರುವ ‘ಲೋಕಾಯುಕ್ತ ವಿಧೇಯಕ’ಕ್ಕೆ (Maharashtra Lokayukta Bill) ಮಹಾರಾಷ್ಟ್ರ ವಿಧಾನಸಭೆಯು ಅಂಗೀಕಾರ ನೀಡಿದೆ.

ಲೋಕಾಯುಕ್ತ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆಯದೆ ಅಂಗೀಕಾರ ದೊರೆತಿದೆ. ಅಂಗೀಕಾರದ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌, “ಲೋಕಾಯುಕ್ತ ವಿಧೇಯಕ ಮಂಡಿಸಿ, ಅಂಗೀಕಾರ ಪಡೆದ ಮೊದಲ ರಾಜ್ಯ ಮಹಾರಾಷ್ಟ್ರ” ಎಂದು ಹೇಳಿದರು. ಇದರಿಂದ ದೇಶದಲ್ಲಿ ಲೋಕಪಾಲ ವ್ಯವಸ್ತೆ ಜಾರಿಗೆ ತರಬೇಕು, ರಾಜಕಾರಣಿಗಳ ವಿರುದ್ಧವೂ ತನಿಖೆ ನಡೆಯುವಂತಾಗಬೇಕು ಎಂಬ ಅಣ್ಣ ಹಜಾರೆ ಅವರ ಕನಸನ್ನು ಮಹಾರಾಷ್ಟ್ರ ಸರ್ಕಾರ ನನಸು ಮಾಡಿದಂತಾಗಿದೆ.

ಏನಿದು ಲೋಕಾಯುಕ್ತ ವಿಧೇಯಕ?
ನೂತನ ವಿಧೇಯಕದ ಪ್ರಕಾರ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆಯು ಮುಖ್ಯಮಂತ್ರಿ ಸೇರಿ ಎಲ್ಲ ಸಚಿವರ ವಿರುದ್ಧ ತನಿಖೆ ನಡೆಸುವ ಅಧಿಕಾರ ಹೊಂದಿದೆ. ಮುಖ್ಯಮಂತ್ರಿ ವಿರುದ್ಧ ತನಿಖೆ ಆರಂಭಿಸುವ ಮೊದಲು ವಿಧಾನಸಭೆಯಲ್ಲಿ ಗೊತ್ತುವಳಿ ಮಂಡಿಸಿ ಮಂಡಿಸಿ, ಅನುಮೋದನೆ ಪಡೆಯಬೇಕಾಗುತ್ತದೆ. ವಿಧಾನಸಭೆಯ ಮೂರನೇ ಎರಡಷ್ಟು ಸದಸ್ಯರು ಗೊತ್ತುವಳಿಗೆ ಅನುಮೋದನೆ ನೀಡಿದಾಗ ಮಾತ್ರ ಮುಖ್ಯಮಂತ್ರಿ ವಿರುದ್ಧ ತನಿಖೆ ನಡೆಸಬಹುದಾಗಿದೆ. ಹಾಗೆಯೇ, ಆಂತರಿಕ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತವು ಮುಖ್ಯಮಂತ್ರಿ ವಿರುದ್ಧ ತನಿಖೆ ನಡೆಸುವ ಅಧಿಕಾರ ಹೊಂದಿರುವುದಿಲ್ಲ.

ಲೋಕಾಯುಕ್ತರ ನೇಮಕ ಹೇಗೆ? ಯಾರಿರಲಿದ್ದಾರೆ?
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್‌, ವಿಧಾನ ಪರಿಷತ್‌ ಸಭಾಪತಿ, ಪ್ರತಿಪಕ್ಷಗಳ ನಾಯಕರನ್ನು ಒಳಗೊಂಡ ಸಮಿತಿಯು ಲೋಕಾಯುಕ್ತರನ್ನು ನೇಮಿಸಲಿದೆ. ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ಮುಖ್ಯ ನ್ಯಾಯಮೂರ್ತಿಯು ಲೋಕಾಯುಕ್ತದ ಅಧ್ಯಕ್ಷರಾಗಿರುತ್ತಾರೆ. ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಇದರ ಸದಸ್ಯರಾಗಿರಲಿದ್ದಾರೆ. ಲೋಕಾಯುಕ್ತದಲ್ಲಿ ನಾಲ್ವರು ಗರಿಷ್ಠ ಸದಸ್ಯರಿರಲಿದ್ದು, ಇವರಲ್ಲಿ ಇಬ್ಬರು ನ್ಯಾಯಾಂಗಕ್ಕೆ ಸಂಬಂಧಿಸಿದವರು ಇರಬೇಕು ಎಂಬ ನಿಯಮವಿದೆ.

ಇದನ್ನೂ ಓದಿ | ಲೋಕಾಯುಕ್ತ | ಕಾವಲು ವ್ಯವಸ್ಥೆ ಮತ್ತು ಬಿಲದೊಳಗಿನ ಹೆಗ್ಗಣಗಳು

Exit mobile version