ನವ ದೆಹಲಿ: ಗುರುವಾರ ಸಂಜೆ ೫ ಗಂಟೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂಬ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ಸೂಚನೆಯ ವಿರುದ್ಧ ಮಹಾವಿಕಾಸ ಅಘಾಡಿ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್ ರಾತ್ರಿ ೯ ಗಂಟೆಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಜಸ್ಟಿಸ್ ಸೂರ್ಯಕಾಂತ್ ಮತ್ತು ಜೆ.ಬಿ ಪಡಿವಾಳ ಅವರನ್ನು ಒಳಗೊಂಡ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿದೆ. ರಾಜ್ಯ ಸರಕಾರದ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನುಸಿಂಘ್ವಿ, ಏಕನಾಥ್ ಶಿಂಧೆ ಬಣದ ಪರವಾಗಿ ಹಿರಿಯ ವಕೀಲ ನೀರಜ್ ಕೌಲ್ ಅವರು ವಾದ ಮಂಡಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಗುರುವಾರ ಸಂಜೆ ೫ ಗಂಟೆಯೊಳಗೆ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಮಹಾ ವಿಕಾಸ ಅಘಾಡಿ ಸರಕಾರಕ್ಕೆ ಸೂಚನೆ ನೀಡಿದ್ದರು. ಮಂಗಳವಾರ ರಾತ್ರಿ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜಭವನಕ್ಕೆ ಭೇಟಿ ನೀಡಿ ಸರಕಾರಕ್ಕೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ರಾಜ್ಯಪಾಲರು ಉದ್ಧವ್ ಠಾಕ್ರೆ ಸರಕಾರಕ್ಕೆ ಸೂಚನೆ ನೀಡಿದ್ದರು.
ಆದರೆ, ೧೬ ಮಂದಿ ರೆಬೆಲ್ ಶಾಸಕರ ಅನರ್ಹತೆ ವಿಚಾರವನ್ನು ಬದಿಗಿಟ್ಟು ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಸುವುದು ಸಮ್ಮತವಲ್ಲ ಎಂದು ಆಕ್ಷೇಪಿಸಿ ಉದ್ಧವ್ ಠಾಕ್ರೆ ಬಣ ಬುಧವಾರ ಬೆಳಗ್ಗೆ ಸುಪ್ರಿಂಕೋರ್ಟ್ ಮೆಟ್ಟಿಲೇರಿತ್ತು. ಅನರ್ಹತೆ ಕುರಿತ ವಿಚಾರಣೆಯನ್ನು ಜುಲೈ ೧೨ಕ್ಕೆ ಮುಂದೂಡಿದ್ದರಿಂದ ಅಲ್ಲಿವರೆಗೆ ವಿಶ್ವಾಸ ಮತ ಯಾಚನೆಗೂ ಅವಕಾಶ ಕೊಡಬಾರದು ಎಂದು ಉದ್ಧವ್ ಠಾಕ್ರೆ ಬಣ ವಾದಿಸುತ್ತಿದೆ.