ನವದೆಹಲಿ: ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಕುರಿತು (Maharashtra Political Crisis) ಆಗ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಭಗತ್ ಸಿಂಗ್ ಕೋಶ್ಯಾರಿ ಅವರ ಆದೇಶದ ಕುರಿತು ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. “ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ರಾಜ್ಯಪಾಲರು ತೆಗೆದುಕೊಂಡಿದ್ದು ಪಕ್ಷಪಾತದ ನಿರ್ಧಾರ” ಎಂದು ಜರಿದಿದೆ.
ಶಿವಸೇನೆ ಉದ್ಧವ್ ಠಾಕ್ರೆ ಬಣ ಹಾಗೂ ಏಕನಾಥ್ ಶಿಂಧೆ ಬಣಗಳ ಪ್ರಕರಣದ ವಿಚಾರಣೆ ನಡೆಸಿದ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು. “ಯಾವುದೇ ಮುಖ್ಯಮಂತ್ರಿಗೆ ವಿಶ್ವಾಸಮತ ಸಾಬೀತುಕಪಡಿಸುವಂತೆ ಆದೇಶಿಸುವ ಮೊದಲು ಆ ಸರ್ಕಾರ ಪತನಗೊಳ್ಳುವ ಕುರಿತು ರಾಜ್ಯಪಾಲರು ಯೋಚಿಸಬೇಕು. ಸರ್ಕಾರ ಪತನಗೊಳ್ಳುವ ಪ್ರದೇಶವನ್ನು ರಾಜ್ಯಪಾಲರು ಪ್ರವೇಶಿಸಬಾರದು. ತೀರಾ ಅಪರೂಪದ ಪ್ರಕರಣಗಳಲ್ಲಿ ಮಾತ್ರ ರಾಜ್ಯಪಾಲರು ತಮ್ಮ ಅಧಿಕಾರ ಬಳಸಬೇಕು” ಎಂದು ಹೇಳಿತು.
ಕಳೆದ ವರ್ಷದ ಜೂನ್‌ನಲ್ಲಿ ಏಕನಾಥ್ ಶಿಂಧೆ ಅವರು ಶಿವಸೇನೆಯಿಂದ ಬಂಡಾಯವೆದಿದ್ದರು. ಇದೇ ವೇಳೆ ಅವರು ಒಂದಷ್ಟು ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಿಕೊಂಡಿದ್ದರು. ಆಗ ರಾಜ್ಯಪಾಲರಾಗಿದ್ದ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ಅವರಿಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಆದೇಶಿಸಿದ್ದರು. ಇದಾದ ಬಳಿಕ ಮೈತ್ರಿ ಸರ್ಕಾರ ಪತನವಾಗಿತ್ತು. ಬಳಿಕ ಏಕನಾಥ್ ಶಿಂಧೆ ಅವರು ಸಿಎಂ ಆದರು.
ಶಿವಸೇನೆ ಶಾಸಕರ ಬಂಡಾಯದ ಕುರಿತು ಕೂಡ ಪ್ರತಿಕ್ರಿಯಿಸಿದ ಕೋರ್ಟ್, “ಶಿವಸೇನೆ ಶಾಸಕರಿಗೆ ಮೈತ್ರಿ ಸರ್ಕಾರದಲ್ಲಿ ಮೂರು ವರ್ಷ ಎಲ್ಲವೂ ಚೆನ್ನಾಗಿತ್ತು. ಆದರೆ, ಮೂರು ವರ್ಷದ ಬಳಿಕ ಭಿನ್ನಾಭಿಪ್ರಾಯ ಉಂಟಾಯಿತು. ಅಷ್ಟೊಂದು ಆಕ್ಷೇಪ ಇದ್ದಿದ್ದರೆ ಮೂರು ವರ್ಷ ಏಕೆ ಇದ್ದರು” ಎಂದು ಕೂಡ ಪ್ರಶ್ನಿಸಿದೆ. ಮಹಾರಾಷ್ಟ್ರ ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
ಇದನ್ನೂ ಓದಿ: Uddhav Thackeray: ‘ದೇಶದಲ್ಲಿ ಪ್ರಜಾಪ್ರಭುತ್ವ ಅಂತ್ಯ’, ಶಿವಸೇನೆ ಚಿಹ್ನೆ ಕಳೆದುಕೊಂಡ ಬಳಿಕ ಉದ್ಧವ್ ಆಕ್ರೋಶ