ಮುಂಬೈ: ಅದು 2019ನೇ ಇಸವಿ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆದು, ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಸ್ಪಷ್ಟ ಬಹುಮತ ಪಡೆದರೂ ಉದ್ಧವ್ ಠಾಕ್ರೆ ಅವರು ಯಾವಾಗ ಬಿಜೆಪಿ ಸಖ್ಯ ಜತೆ ತೊರೆದು ಕಾಂಗ್ರೆಸ್, ಎನ್‌ಸಿಪಿ ಜತೆಗೂಡಿ ಮಹಾ ವಿಕಾಸ ಅಘಾಡಿ ರಚಿಸಿತೋ, ಅಲ್ಲಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಮೇಲಾಟ (Maharashtra Politics) ಮಿತಿಮಿರಿತು. ಅದರಲ್ಲೂ, ರಾಜಕೀಯ ಮೇಲಾಟದಲ್ಲಿ ಒಂದು ಕೈ ಮೇಲಿರುವ ಬಿಜೆಪಿಯು ಕಳೆದ ಒಂದು ವರ್ಷದಲ್ಲಿ ಎರಡು ಪ್ರತಿಪಕ್ಷಗಳನ್ನು ಬಹುತೇಕ ಆಪೋಷನ ತೆಗೆದುಕೊಂಡಿದೆ. ಎನ್‌ಸಿಪಿಯ ಅಜಿತ್ ಪವಾರ್ ಬಣವೀಗ ಏಕನಾಥ್ ಶಿಂಧೆ ಸರ್ಕಾರದ ಜತೆ ಕೈಜೋಡಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
2022ರಲ್ಲಿ ಶಿವಸೇನೆಯನ್ನು ಇಬ್ಭಾಗ ಮಾಡುವುದಷ್ಟೇ ಅಲ್ಲ, ಉದ್ಧವ್ ಠಾಕ್ರೆ ಬಣದ ಶಿವಸೇನೆಯನ್ನು ಬಹುತೇಕ ನಿರ್ನಾಮ ಮಾಡಲಾಗಿದೆ. ಸುಮಾರು 40 ಶಾಸಕರೊಂದಿಗೆ ಬಿಜೆಪಿ ಜತೆ ಕೈಜೋಡಿಸಿದ ಏಕನಾಥ್ ಶಿಂಧೆ ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಬಾಳಾಸಾಹೇಬ್ ಠಾಕ್ರೆ ಅವರಂತಹ ದಿಟ್ಟ ನಾಯಕ ಕಟ್ಟಿದ ಶಿವಸೇನೆ ಈಗ ಮಹಾರಾಷ್ಟ್ರದಲ್ಲಿ ಪ್ರಾಬಲ್ಯ ಕಳೆದುಕೊಂಡಿದೆ. ಉದ್ಧವ್ ಠಾಕ್ರೆ ಬಣದಲ್ಲಿ ಬೆರಳೆಣಿಕೆಯಷ್ಟು ಶಾಸಕರು ಹಾಗೂ ಸಂಸದರಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವು ಸ್ವಲ್ಪ ಎಡವಿದರೂ ನಾಮಾವಶೇಷವಾಗುತ್ತದೆ.
ಶರದ್ ಪವಾರ್‌ಗೆ ಪವರ್‌ಫುಲ್ ಶಾಕ್
ಶರದ್ ಪವಾರ್ ಅವರು ಪುತ್ರಿ ಸುಪ್ರಿಯಾ ಸುಳೆ ಹಾಗೂ ನಂಬಿಕಸ್ಥ ಪ್ರಫುಲ್ ಪಟೇಲ್ ಅವರಿಗೆ ಎನ್‌ಸಿಪಿಯಲ್ಲಿ ಉನ್ನತ ಹುದ್ದೆ ನೀಡುವ ಮೂಲಕ ಅಜಿತ್ ಪವಾರ್ ಅವರನ್ನು ಮೂಲೆಗುಂಪು ಮಾಡಲು ಯತ್ನಿಸಿದರು. ಆದರೆ, ಚಿಕ್ಕಪ್ಪ ಶರದ್ ಪವಾರ್ ಅವರಿಗೆ ಅಜಿತ್ ಪವಾರ್ ಅವರು ಪವರ್‌ಫುಲ್ ಶಾಕ್ ಕೊಟ್ಟಿದ್ದಾರೆ. ಸದ್ಯ ಒಂಬತ್ತು ಶಾಸಕರನ್ನು ಕರೆದುಕೊಂಡು ಹೋಗಿರುವ ಅವರು 40ಕ್ಕೂ ಅಧಿಕ ಶಾಸಕರ ಬೆಂಬಲ ಹೊಂದಿದ್ದೇನೆ ಎಂದು ಹೇಳಿದ್ದಾರೆ. ಹಾಗೊಂದು ವೇಳೆ, ಅಜಿತ್ ಪವಾರ್ ಅವರು ಎನ್‌ಸಿಪಿಯ 36 ಶಾಸಕರನ್ನು ಸೆಳೆದರೆ, ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಇಷ್ಟು ಶಾಸಕರೊಂದಿಗೆ ಅವರು ಬೇರೆ ಶಿಂಧೆ-ಫಡ್ನವಿಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದರೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಕತೆ ಬಹುತೇಕ ಮುಗಿದಂತೆ.
ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಬಿಜೆಪಿ
ಮಹಾರಾಷ್ಟ್ರದಲ್ಲಿ 2024ರಲ್ಲಿ ಎರಡು ಚುನಾವಣೆ ಕಾಣಲಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಯಲಿವೆ. ಹಾಗಾಗಿ, ರಾಜ್ಯದಲ್ಲಿ ಶಿವಸೇನೆ ಹಾಗೂ ಎನ್‌ಸಿಪಿ ಪಕ್ಷವನ್ನು ಒಡೆದಿರುವ ಬಿಜೆಪಿಯು ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಂತಾಗಿದೆ. ಅದರಲ್ಲೂ, ಮಹಾರಾಷ್ಟ್ರದಲ್ಲಿ 48 ಲೋಕಸಭೆ ಕ್ಷೇತ್ರಗಳಿವೆ. ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಪ್ರಾಬಲ್ಯ ಸಾಧಿಸಲು ತಂತ್ರ ರೂಪಿಸುತ್ತಿರುವ ಬಿಜೆಪಿಯು ಎರಡು ಪ್ರಬಲ ಪ್ರತಿಪಕ್ಷಗಳ ಬಲವನ್ನು ಇನ್ನಿಲ್ಲದಂತೆ ಕುಗ್ಗಿಸುವ ಮೂಲಕ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: Ajit Pawar: ಒಡೆಯಿತು ಎನ್‌ಸಿಪಿ; ಶಿಂದೆ ಸರ್ಕಾರ ಸೇರಿದ ಅಜಿತ್ ಪವಾರ್ ‘ಮಹಾ’ ಉಪಮುಖ್ಯಮಂತ್ರಿ!
ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿರುವ ಹೊತ್ತಿನಲ್ಲೇ ಎರಡು ಪಕ್ಷಗಳನ್ನು ಬಹುತೇಕ ಮುಗಿಸುವ ಮೂಲಕ ಬಿಜೆಪಿಯು ರಾಜಕೀಯ ಚದುರಂಗದಲ್ಲಿ ತಾತ್ಕಾಲಿಕ ಮುನ್ನಡೆಯನ್ನೂ ಸಾಧಿಸಿದೆ. ಇನ್ನು ವಿಧಾನಸಭೆ ಚುನಾವಣೆಯಲ್ಲೂ ಎನ್‌ಸಿಪಿ ಹಾಗೂ ಶಿವಸೇನೆಗೆ ಪ್ರಾಬಲ್ಯ ಸಾಧಿಸುವುದು ಕಷ್ಟಸಾಧ್ಯ ಎಂದೇ ಹೇಳಲಾಗುತ್ತದೆ. ಆದರೆ, ಮಹಾರಾಷ್ಟ್ರದ ಜನ ಹೇಗೆ ಬಿಜೆಪಿಯ ತಂತ್ರ, ಶಿವಸೇನೆ ಹಾಗೂ ಎನ್‌ಸಿಪಿ ಶಾಸಕರ ಅಧಿಕಾರ ದಾಹವನ್ನು ಮನ್ನಿಸುತ್ತಾರೆ ಎಂಬುದು ನಿರೀಕ್ಷೆ ಹೆಚ್ಚಿಸಿದೆ.