Site icon Vistara News

Maharashtra politics: ಆದಿತ್ಯ ಠಾಕ್ರೆ ಟ್ವಿಟರ್‌ ಖಾತೆಯಿಂದ minister ಡಿಲೀಟ್‌, ಸೋಲೊಪ್ಪಿಕೊಂಡಿತಾ ಶಿವಸೇನೆ?

ಮುಂಬಯಿ: ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದೆ. ಸರಕಾರದಲ್ಲಿ ಮಂತ್ರಿಯಾಗಿರುವ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಅವರು ತಮ್ಮ ಟ್ವಿಟರ್‌ ಖಾತೆಯಿಂದ Minister ಎಂಬ ಪದವನ್ನು ಡಿಲೀಟ್‌ ಮಾಡಿದ್ದಾರೆ. ಈ ಮೂಲಕ ಶಿವಸೇನೆ ಈ ರಾಜಕೀಯ ಬಿಕ್ಕಟ್ಟಿನಲ್ಲಿ ಸೋಲೊಪ್ಪಿಕೊಂಡಿತಾ ಎನ್ನುವ ಪ್ರಶ್ನೆ ಎದುರಾಗಿದೆ.

ಸೂರತ್‌ನ ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ತಂಗಿದ್ದ ಏಕನಾಥ ಶಿಂಧೆ ನೇತೃತ್ವದ ಬಂಡುಕೋರ ಶಾಸಕರ ಟೀಮ್‌ ಅಸ್ಸಾಂನ ಗುವಾಹಟಿಯಲ್ಲಿರುವ ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ಗೆ ಶಿಫ್ಟ್‌ ಆಗಿರುವ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದಿದೆ.

ಆದರೆ, ಇದರ ಒಟ್ಟಾರೆ ಅರ್ಥ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕೇವಲ ಆದಿತ್ಯ ಠಾಕ್ರೆ ಅವರು ಮಂತ್ರಿ ಪಟ್ಟದಿಂದ ಕೆಳಗಿಳಿಯುವ ಮುನ್ಸೂಚನೆನಾ ಅಥವಾ ಇಡೀ ಸರಕಾರದ ಪತನದ ಸೂಚನೆಯೇ ಎನ್ನುವುದು ಈಗಿರುವ ಪ್ರಶ್ನೆ.

ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ಬಂಡಾಯ ನಾಯಕ ಏಕನಾಥ ಶಿಂಧೆ ಅವರ ಪ್ರಮುಖ ಆರೋಪವಾಗಿತ್ತು. ಅದರಲ್ಲೂ ಸರಕಾರದಲ್ಲಿ ಆದಿತ್ಯ ಠಾಕ್ರೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬ ಕಾರಣಕ್ಕಾಗಿ ಅವರಿಗೆ ಸಿಟ್ಟಿದೆ ಎಂದು ಹೇಳಲಾಗುತ್ತಿತ್ತು. ಈಗ ಆದಿತ್ಯ ಠಾಕ್ರೆ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಮೂಲಕ ಏಕನಾಥ ಶಿಂಧೆ ಅವರನ್ನು ಸಮಾಧಾನ ಮಾಡುವ ರಾಜೀ ಸೂತ್ರವೇನಾದರೂ ನಡೆಯುತ್ತಿದೆಯಾ ಎಂಬ ಸಂದೇಹವೂ ಇದೆ.

ಆದರೆ, ಶಿವಸೇನೆಯ ಹಿರಿಯ ನಾಯಕ ಸಂಜಯ್‌ ರಾವುತ್‌ ಅವರು ಹೇಳುವ ಪ್ರಕಾರ, ಶಿವಸೇನೆ ಸೋಲೊಪ್ಪಿಕೊಂಡ ಸ್ಥಿತಿಗೆ ಬಂದಿದೆ. ʻʻನಾವು ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆʼ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ʻʻನಮ್ಮ ಪಕ್ಷ ಹೋರಾಟದಿಂದ ಬಂದಿರುವುದು, ನಾವು ನಿರಂತರವಾಗಿ ಸಂಘರ್ಷವನ್ನು ಎದುರಿಸಿದೆವು. ಇಲ್ಲೂ ಹೆಚ್ಚೆಂದರೆ ನಾವು ಅಧಿಕಾರ ಕಳೆದುಕೊಳ್ಳಬಹುದು. ಆದರೆ, ಹೋರಾಟವನ್ನಂತೂ ಮುಂದುವರಿಸುತ್ತೇವೆʼʼ ಎಂದು ಅವರು ಹೇಳಿದ್ದಾರೆ.
ʻʻನಾನು ಮತ್ತು ಏಕನಾಥ ಶಿಂಧೆ ದಶಕಗಳಷ್ಟು ಕಾಲ ಜತೆಯಾಗಿ ಕೆಲಸ ಮಾಡಿದ್ದೇವೆ. ಪರಸ್ಪರರನ್ನು ಬಿಟ್ಟು ಹೋಗುವುದು ಅಷ್ಟು ಸುಲಭದ ಕೆಲಸವೇನೂ ಅಲ್ಲ. ನಾನು ಬೆಳಗ್ಗೆ ಏಕನಾಥ ಶಿಂಧೆ ಅವರೊಂದಿಗೆ ಮಾತನಾಡಿದ್ದೇನೆ. ಏಕನಾಥ ಶಿಂಧೆ ಅವರ ಜತೆಗೆ ಇರುವ ಶಾಸಕರೊಂದಿಗೆ ಮಾತುಕತೆ ಮುಂದುವರಿದಿದೆ. ಅವರೆಲ್ಲರೂ ಶಿವಸೇನೆ ಜತೆಗೇ ಇರುತ್ತಾರೆʼʼ ಎಂದಿದ್ದಾರೆ ಸಂಜಯ್‌ ರಾವುತ್‌.
ಇದನ್ನೂ ಓದಿ| ಮಹಾರಾಷ್ಟ್ರದಲ್ಲಿ ಬಂಡಾಯವೆದ್ದಿರುವ ಸಚಿವ ಶಿಂಧೆ, ಶಿವಸೇನಾ ಶಾಸಕರು ಗುಜರಾತ್‌ನಿಂದ ಅಸ್ಸಾಂಗೆ ಶಿಫ್ಟ್

Exit mobile version