ಮುಂಬಯಿ: ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರಕಾರದ ಪಾಲುದಾರ ಪಕ್ಷವಾಗಿರುವ ಶಿವಸೇನೆಯೊಳಗೆ ಹುಟ್ಟಿಕೊಂಡಿರುವ ಬಂಡಾಯ ಇದೀಗ ನಿರ್ಣಾಯಕ ಹಂತವನ್ನು ತಲುಪಿದೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಅವರ ಬಣದಲ್ಲಿ ಈಗ ೩೭ಕ್ಕೂ ಅಧಿಕ ಶಿವಸೇನೆ ಶಾಸಕರಿದ್ದಾರೆ ಎಂದು ಹೇಳಲಾಗಿದ್ದು, ಇದು ಶಿವಸೇನೆಯ ಒಟ್ಟಾರೆ ಸಂಖ್ಯಾಬಲದ ಮೂರನೇ ಎರಡು ಬಹುಮತದ ಹಂತವನ್ನು ಮೀರಿದಂತಾಗಿದೆ. ಈ ಅಂಶವನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಏಕನಾಥ ಶಿಂಧೆ ಮುಂದಾಗಿದ್ದಾರೆ.
ಏನಿದು ೩೭ರ ಮಹತ್ವ?
ರಾಜ್ಯ ವಿಧಾನಸಭೆಯಲ್ಲಿ ಒಟ್ಟು ೫೬ ಶಿವಸೇನಾ ಶಾಸಕರಿದ್ದಾರೆ. ಇವರಲ್ಲಿ ೩೭ ಶಾಸಕರು ಒಂದು ಪ್ರತ್ಯೇಕ ಗುಂಪಾಗಿ ಗುರುತಿಸಿಕೊಂಡರೆ ಅವರನ್ನು ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡಲು ಅವಕಾಶವಿರುತ್ತದೆ. ಅಂದರೆ ಒಟ್ಟಾರೆ ಸದಸ್ಯ ಬಲದ ಮೂರನೇ ಎರಡು ಶಾಸಕರು ಒಂದಾದರೆ ಅದಕ್ಕೆ ಮಾನ್ಯತೆ ಇದೆ.
ಪಕ್ಷಾಂತರ ನಿಷೇಧ ಕಾಯಿದೆ ಪ್ರಕಾರ ಯಾವುದೇ ಶಾಸಕ ಇನ್ನೊಂದು ಪಕ್ಷಕ್ಕೆ ಜಿಗಿದರೆ ಅವನ ಶಾಸಕತ್ವ ರದ್ದಾಗುತ್ತದೆ. ಅದೇ ಒಂದು ಪಕ್ಷದಿಂದ ಗೆದ್ದಿರುವ ಶಾಸಕರ ಪೈಕಿ ಮೂರನೇ ಎರಡರಷ್ಟು ಶಾಸಕರು ಪಕ್ಷಾಂತರ ಮಾಡಿದರೆ ಅಥವಾ ಇನ್ನೊಂದು ಪಕ್ಷವನ್ನು ಬೆಂಬಲಿಸಿದರೆ ಅವರ ಶಾಸಕತ್ವಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.
ಮಹಾರಾಷ್ಟ್ರದ ಸನ್ನಿವೇಶದಲ್ಲಿ ಏಕನಾಥ ಶಿಂಧೆ ಬಣ ಅದೇ ಹೇಳುವಂತೆ ೩೭ಕ್ಕೂ ಹೆಚ್ಚು ಶಿವಸೇನಾ ಶಾಸಕರ ಬಲವನ್ನು ಹೊಂದಿರುವುದು ನಿಜವಾದರೆ ಅದು ಬಿಜೆಪಿಯನ್ನು ಸರಕಾರ ರಚನೆಯಲ್ಲಿ ಬೆಂಬಲಿಸುವ ಅವಕಾಶವನ್ನು ಹೊಂದಿರುತ್ತದೆ. ಹಾಗೆ ಮಾಡಿದಾಗ ಅವರ ಸದಸ್ಯತ್ವಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಅದೇ ೩೭ಕ್ಕಿಂತ ಕಡಿಮೆ ಸಂಖ್ಯೆಯ ಸದಸ್ಯರು ಶಿವಸೇನೆಯನ್ನು ಬಿಟ್ಟು ಬಿಜೆಪಿಯನ್ನು ಬೆಂಬಲಿಸಿದರೆ ಪಕ್ಷಾಂತರ ನಿಷೇಧ ಕಾಯಿದೆಯಂತೆ ಅವರು ತಮ್ಮ ಶಾಸಕತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ ಮತ್ತು ಮರುಚುನಾವಣೆ ಎದುರಿಸಬೇಕಾಗುತ್ತದೆ.
ಏಕನಾಥ ಶಿಂಧೆ ಬಣದಲ್ಲಿ ಶಿವಸೇನೆ ಶಾಸಕರಲ್ಲದೆ, ಪಕ್ಷೇತರ ಶಾಸಕರೂ ಸೇರಿಕೊಂಡಿದ್ದಾರೆ. ಶಿಂಧೆ ಅವರ ಹಿಂದೆ ಶಿವಸೇನೆಯ ೧೭ ಸಂಸದರು ಕೂಡಾ ಇದ್ದಾರೆ ಎನ್ನಲಾಗಿದೆ.
ಇದೆಲ್ಲವನ್ನೂ ಗಮನಿಸಿಕೊಂಡೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಾನು ಮುಖ್ಯಮಂತ್ರಿ ಮತ್ತು ಪಕ್ಷದ ನಾಯಕತ್ವಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿದ್ದು. ಅದರ ಜತೆಗೆ ಅವರು ಬುಧವಾರ ರಾತ್ರಿಯೇ ತಮ್ಮ ಸರಕಾರಿ ನಿವಾಸವಾದ ವರ್ಷಾವನ್ನು ತೊರೆದು ತಮ್ಮ ಮೂಲ ಮನೆಯಾದ ಮಾತೋಶ್ರೀಗೆ ಶಿಫ್ಟ್ ಆಗಿರುವುದು. ಜತೆಗೆ ಅವರ ಪುತ್ರ ಆದಿತ್ಯ ಠಾಕ್ರೆ ಕೂಡಾ ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಮಿನಿಸ್ಟರ್ ಎಂಬ ಪದವನ್ನು ಕಿತ್ತು ಹಾಕಿರುವುದು.
ಕಾಂಗ್ರೆಸ್-ಎನ್‌ಸಿಪಿ ಕಡೇ ಕ್ಷಣದ ಪ್ರಯತ್ನ
ಮಹಾ ವಿಕಾಸ ಅಘಾಡಿ ಸರಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಎನ್‌ಸಿಪಿಗಳು ಕಡೆಯ ಕ್ಷಣದ ಪ್ರಯತ್ನ್ನವನ್ನು ಮುಂದುವರಿಸಿವೆ. ಒಂದು ಕಡೆ ಶರದ್ ಪವಾರ್ ಅವರು ಬುಧವಾರ ರಾತ್ರಿಯೇ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಒಂದೊಮ್ಮೆ ಏಕನಾಥ ಶಿಂಧೆ ಅವರನ್ನೇ ಶಿವಸೇನೆಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಿ ಸರಕಾರವನ್ನು ಮುಂದುವರಿಸೋಣ ಎಂಬ ಅಭಿಪರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪ್ರಿಯಾಂಕಾ ಗಾಂಧಿ ಮುಂಬಯಿಗೆ
ಈ ನಡುವೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ ಮುಂಬಯಿಗೆ ಆಗಮಿಸಿದ್ದಾರೆ. ಕಾಂಗ್ರೆಸ್ ಈಗಾಗಲೇ ಕಮಲನಾಥ್ ಅವರನ್ನು ಮುಂಬಯಿಗೆ ಕಳುಹಿಸಿ ಶಾಸಕರ ಜತೆ ಸಂವಾದ ಉಳಿಸಿಕೊಂಡಿದೆ. ಮಹಾರಾಷ್ಟ್ರದ ಉಸ್ತುವಾರಿ ಆಗಿರುವ ಎಚ್.ಕೆ. ಪಾಟೀಲ್ ಅವರೂ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಒಂದೊಮ್ಮೆ ಸರಕಾರ ಪತನವಾದರೂ ಕಾಂಗ್ರೆಸ್ ಶಾಸಕರನ್ನು ಒಗ್ಗಟ್ಟಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಯತ್ನ ಮಹತ್ವದ್ದಾಗಿದೆ.
ಇದನ್ನೂ ಓದಿ| Maharashtra Politics: ಏಕ್‌ನಾಥ್ ಶಿಂಧೆಗೆ ಮತ್ತಷ್ಟು ಬಲ; ಅಸ್ಸಾಂಗೆ ತೆರಳಿದ ಇನ್ನೂ ಮೂವರು ಶಾಸಕರು