ಮುಂಬೈ: ಮಹಾರಾಷ್ಟ್ರದ ಶಿವಸೇನೆ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ ಅಜಿತ್ ಪವಾರ್ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಲು (Maharashtra Politics) ಎನ್‌ಸಿಪಿ ಮುಂದಾಗಿದೆ. ಭಾನುವಾರ ಏಕಾಏಕಿ ಮೈತ್ರಿ ಸರ್ಕಾರಕ್ಕೆ ಬೆಂಬಲಿಸಿದ ಅಜಿತ್ ಪವಾರ್, ಎಂಟು ಶಾಸಕರೊಂದಿಗೆ ತೆರಳಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಎಂಟು ಶಾಸಕರು ಕೂಡ ಪ್ರಮಾಣವಚನ ಸ್ವೀಕರಿಸಿದ್ದರು. ಇವರ ವಿರುದ್ಧ ಎನ್‌ಸಿಪಿಯು ಅನರ್ಹತೆಯ ಅರ್ಜಿ ಸಲ್ಲಿಸಿದೆ.
“ಒಂಬತ್ತು ಶಾಸಕರ ವಿರುದ್ಧ ನಾವು ವಿಧಾನಸಭೆ ಸ್ಪೀಕರ್‌ಗೆ ಅನರ್ಹತೆಯ ಅರ್ಜಿ ಸಲ್ಲಿಸಿದ್ದೇವೆ. ಇ-ಮೇಲ್ ಮೂಲಕ ಅನರ್ಹತೆ ಅರ್ಜಿ ಸಲ್ಲಿಸಿದ್ದು, ಶೀಘ್ರದಲ್ಲೇ ಖುದ್ದಾಗಿ ತೆರಳಿ ಅನರ್ಹತೆ ಅರ್ಜಿ ನೀಡುತ್ತೇವೆ. ಎನ್‌ಸಿಪಿಯನ್ನು ತೊರೆಯುವಾಗ ಅವರು ಯಾರಿಗೂ ಮಾಹಿತಿ ನೀಡಿರಲಿಲ್ಲ. ಇದು ಪಕ್ಷವಿರೋಧಿ ಚಟುವಟಿಯಾಗಿದೆ. ಒಂಬತ್ತೂ ನಾಯಕರ ವಿರುದ್ಧ ನಾವು ಚುನಾವಣೆ ಆಯೋಗಕ್ಕೂ ದೂರು ನೀಡಿದ್ದೇವೆ. ಇಂತಹ ಚಟುವಟಿಕೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ” ಎಂದು ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟಿಲ್ ತಿಳಿಸಿದ್ದಾರೆ.
“ಈಗ ಅಜಿತ್ ಪವಾರ್ ಜತೆ ತೆರಳಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಬಹುತೇಕ ಶಾಸಕರು ಎನ್‌ಸಿಪಿಗೆ ವಾಪಸಾಗಲಿದ್ದಾರೆ. ಈಗಲೇ ಅವರನ್ನು ದ್ರೋಹಿಗಳು ಎಂದು ಹೇಳಲು ಆಗುವುದಿಲ್ಲ. ಅವರು ಖಂಡಿತವಾಗಿ ಪಕ್ಷಕ್ಕೆ ಮತ್ತೆ ಬರುತ್ತಾರೆ. ಆಗ ಅವರನ್ನು ನಾವು ಮತ್ತೆ ಪಕ್ಷಕ್ಕೆ ಸ್ವಾಗತಿಸುತ್ತೇವೆ. ನಾವೆಲ್ಲರೂ ಶರದ್ ಪವಾರ್ ಅವರ ಜತೆಗಿದ್ದೇವೆ. ಮತ್ತೆ ಪಕ್ಷವನ್ನು ಇನ್ನಷ್ಟು ಬಲವಾಗಿ ಕಟ್ಟುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: Maharashtra Politics: ಶರದ್ ಪವಾರ್ ಪವರ್ ಕಸಿದ ಅಜಿತ್; ಬಿಜೆಪಿಯಿಂದ ವರ್ಷದಲ್ಲಿ 2 ಪ್ರತಿಪಕ್ಷಗಳ ಆಪೋಷನ
ಮಹಾರಾಷ್ಟ್ರ ರಾಜಕೀಯದಲ್ಲಿ ದಿಢೀರ್ ಬದಲಾವಣೆಯಾಗಿರುವುದು ದೇಶಾದ್ಯಂತ ಸುದ್ದಿಯಾಗಿದೆ. ಲೋಕಸಭೆ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಸಿಪಿಯು ಇಬ್ಭಾಗವಾಗಿರುವುದು ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಆದಾಗ್ಯೂ, ಅಜಿತ್ ಪವಾರ್ ಅವರು ಪಕ್ಷಾಂತರ ನಿಷೇಧ ಕಾಯಿದೆಯಿಂದ ತಪ್ಪಿಸಿಕೊಳ್ಳಲು 36 ಎನ್‌ಸಿಪಿ ಶಾಸಕರ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ನನ್ನ ಜತೆ 40 ಶಾಸಕರಿದ್ದಾರೆ ಎಂದು ಈಗಾಗಲೇ ಅಜಿತ್ ಪವಾರ್ ಹೇಳಿದ್ದಾರೆ.