Site icon Vistara News

Maharashtra Politics: ಬಂಡಾಯ ಶಾಸಕರ ಅನರ್ಹತೆ ಅರ್ಜಿ ತೀರ್ಮಾನಕ್ಕೆ ಡಿ.31ರ ಡೆಡ್‌ಲೈನ್‌ ವಿಧಿಸಿದ ಸುಪ್ರೀಂ ಕೋರ್ಟ್‌

Uddhav Thackeray question Speaker order of real shiv sena in Supreme Court

ಮುಂಬಯಿ: ಮಹಾರಾಷ್ಟ್ರದ ಶಿವಸೇನೆ ಪಕ್ಷದ (Shiv sena party) ಬಂಡಾಯ ಶಾಸಕರ (Maharashtra Politics) ಅನರ್ಹತೆ ಅರ್ಜಿ ತೀರ್ಮಾನಕ್ಕೆ ಸ್ಪೀಕರ್‌ಗೆ ಡಿಸೆಂಬರ್ 31ರ ಡೆಡ್‌ಲೈನ್‌ ವಿಧಿಸಿ ಸುಪ್ರೀಂ ಕೋರ್ಟ್‌ (supreme court) ನಿರ್ದೇಶನ ನೀಡಿದೆ.

ಶಿವಸೇನೆಯ ಎರಡು ಪ್ರತಿಸ್ಪರ್ಧಿ ಬಣಗಳು ಪರಸ್ಪರರ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಡಿಸೆಂಬರ್ 31 ಅಥವಾ ಅದಕ್ಕೂ ಮೊದಲು ನಿರ್ಧಾರ ಕೈಗೊಳ್ಳುವಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ. ಇದರಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಸಲ್ಲಿಸಲಾದ ಒಂದು ಅರ್ಜಿಯೂ ಸೇರಿದೆ.

ಫೆಬ್ರವರಿ 29, 2024ರೊಳಗೆ ಅನರ್ಹತೆ ಅರ್ಜಿಗಳ ವಿಚಾರಣೆಯನ್ನು ಮುಕ್ತಾಯಗೊಳಿಸಬಹುದು ಎಂಬ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅನರ್ಹತೆ ಅರ್ಜಿಗಳನ್ನು ವಿಳಂಬಗೊಳಿಸಲು ಕಾರ್ಯವಿಧಾನದ ಜಗಳಗಳಿಗೆ ಅವಕಾಶ ನೀಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

“ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನಾವು ಕಾಳಜಿ ವಹಿಸುತ್ತೇವೆ. ಇಲ್ಲದಿದ್ದರೆ ನಾವು ಆ ನಿಬಂಧನೆಗಳನ್ನು ಗಾಳಿಗೆ ತೂರುತ್ತೇವೆ. ರಾಜಕೀಯ ಪಕ್ಷಾಂತರಗಳನ್ನು ತಡೆಯಲು ಹತ್ತನೇ ಶೆಡ್ಯೂಲ್‌ ಅನ್ನು ರೂಪಿಸಲಾಗಿದೆʼʼ ಎಂದು ಪೀಠ ಹೇಳಿದೆ.

ʻʻಅರ್ಜಿಗಳನ್ನು ವಿಳಂಬಗೊಳಿಸಲು ಪ್ರಕ್ರಿಯೆಯ ಜಟಿಲತೆಯನ್ನು ಮುಂದಕ್ಕೆ ತರಬಾರದು. ಡಿಸೆಂಬರ್ 31, 2023ರೊಳಗೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಬೇಕು ಮತ್ತು ನಿರ್ದೇಶನಗಳನ್ನು ಅಂಗೀಕರಿಸಬೇಕು ಎಂದು ನಾವು ನಿರ್ದೇಶಿಸುತ್ತೇವೆ” ಎಂದು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಹೇಳಿತು.

ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath shinde) ಮತ್ತು ಅವರಿಗೆ ನಿಷ್ಠರಾಗಿರುವ ಹಲವಾರು ಶಾಸಕರ ಅನರ್ಹತೆಗಾಗಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಗಳನ್ನು ನಿರ್ಧರಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಈ ಹಿಂದೆ ಸ್ಪೀಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ವಿಳಂಬಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಸ್ಪೀಕರ್ ಕಡೆಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ. ಇದೇ ರೀತಿಯ ಅನರ್ಹತೆ ಅರ್ಜಿಗಳನ್ನು ಶಿಂಧೆ ಬಣವು ಠಾಕ್ರೆ ಅವರಿಗೆ ನಿಷ್ಠರಾದ ಶಾಸಕರ ವಿರುದ್ಧ ಸಲ್ಲಿಸಿದೆ. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 18 ರಂದು ಅರ್ಜಿಗಳ ತೀರ್ಪಿನ ಸಮಯವನ್ನು ವಿವರಿಸುವಂತೆ ಸ್ಪೀಕರ್‌ಗೆ ಸೂಚಿಸಿತ್ತು.

ಇದನ್ನೂ ಓದಿ: Maharashtra Politics: ‘ಜನರಲ್ ಡಯರ್’, ‘ರಾವಣ’ ಎಂದು ಪರಸ್ಪರ ಬೈದಾಡಿಕೊಂಡ ಉದ್ಧವ್ ಠಾಕ್ರೆ, ಸಿಎಂ ಏಕನಾಥ್ ಶಿಂಧೆ!

Exit mobile version