Site icon Vistara News

Maharashtra Politics: ಅಜಿತ್‌ ಪವಾರ್‌ಗೆ ತೀವ್ರ ಹಿನ್ನಡೆ; ಶರದ್‌ ಪವಾರ್‌ ಬಣಕ್ಕೆ ಮರಳಿದ ಶಾಸಕ ಅಶೋಕ್‌

Ashok Pawar Returns Sharad Pawar Camp

Maharashtra Politics: Setback for Ajit Pawar as MLA Ashok Pawar joins back Sharad Pawar Team

ಮುಂಬೈ: ಎನ್‌ಸಿಪಿಯ ಎಂಟು ಶಾಸಕರನ್ನು ಕರೆದುಕೊಂಡು ಹೋಗಿ, ಏಕನಾಥ್‌ ಶಿಂಧೆ ಹಾಗೂ ದೇವೇಂದ್ರ ಫಡ್ನವಿಸ್‌ ಸರ್ಕಾರಕ್ಕೆ ಬೆಂಬಲ ನೀಡಿ, ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಅಜಿತ್‌ ಪವಾರ್‌ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಎನ್‌ಸಿಪಿ ಶಾಸಕ ಅಶೋಕ್‌ ಪವಾರ್‌ ಅವರು ಅಜಿತ್‌ ಪವಾರ್‌ ಬಣ ತೊರೆದು ಶರದ್‌ ಪವಾರ್‌ ಬಣಕ್ಕೆ (Maharashtra Politics) ವಾಪಸಾಗಿದ್ದು, ಇದರಿಂದ ಅಜಿತ್‌ ಪವಾರ್‌ ಬಣ ಸದೃಢವಾಗಿಲ್ಲ ಎಂಬ ಸಂದೇಶ ರವಾನೆಯಾಗಿದೆ.

ವಿಸ್ತಾರ ನ್ಯೂಸ್‌ WhatsApp ಗ್ರೂಪ್‌ ಸೇರಲು ಇಲ್ಲಿ ಕ್ಲಿಕ್‌ ಮಾಡಿ

ಅಜಿತ್‌ ಪವಾರ್‌ ಅವರು ಬಂಡಾಯದ ಬಾವುಟ ಹಾರಿಸಿರುವ ಕಾರಣ ಶರದ್‌ ಪವಾರ್‌ ಅವರು ತಮ್ಮ ಬಣದ ಶಾಸಕರನ್ನು ಉಳಿಸಿಕೊಳ್ಳಲು ಸಭೆ ನಡೆಸುತ್ತಿದ್ದಾರೆ. ಅಜಿತ್‌ ಪವಾರ್‌ ಅವರು ಕೂಡ ಸಭೆ ನಡೆಸಿ ಈಗಿರುವ ಶಾಸಕರನ್ನು ಉಳಿಸಿಕೊಳ್ಳುವ ಜತೆಗೆ, ಹೆಚ್ಚಿನ ಶಾಸಕರನ್ನು ಸೆಳೆಯುವ ಯತ್ನದಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ ಅಶೋಕ್‌ ಪವಾರ್‌ ಅವರು ಶರದ್‌ ಪವಾರ್‌ ಬಣಕ್ಕೆ ವಾಪಸಾಗಿರುವುದು ಅಜಿತ್‌ ಪವಾರ್‌ ಅವರಿಗೆ ಆರಂಭದಲ್ಲಿಯೇ ಹಿನ್ನಡೆ ಎದುರಾದಂತಾಗಿದೆ.

ಶರದ್​ ಪವಾರ್ ಬಣ ಮತ್ತು ಅಜಿತ್ ಪವಾರ್​ ಬಣಗಳು ಎರಡೂ ತಮ್ಮತಮ್ಮ ಗುಂಪಿಗೆ ಮುಖ್ಯ ಸಚೇತಕರನ್ನು ನೇಮಿಸಿಕೊಂಡಿದ್ದಾರೆ. ಹಾಗೆಯೇ, ಈ ಎರಡೂ ಸಭೆಗಳಲ್ಲಿ ಪಕ್ಷದ ಎಲ್ಲ ಶಾಸಕರು, ಸಂಸದರು, ಪದಾಧಿಕಾರಿಗಳು ಹಾಜರಿರಲೇಬೇಕು ಎಂದು ಎರಡೂ ಬಣಗಳಿಂದಲೂ ವಿಪ್​ ಜಾರಿ ಮಾಡಲಾಗಿದೆ. ಶರದ್ ಪವಾರ್​ ಬಣದ ಸಭೆ ದಕ್ಷಿಣ ಮುಂಬಯಿಯ ವೈ.ಬಿ.ಚವ್ಹಾಣ್​ ಸೆಂಟರ್​​ನಲ್ಲಿ ಮಧ್ಯಾಹ್ನ 1 ಗಂಟೆಗೆ ಆರಂಭವಾಗಿದೆ. ಹಾಗೆಯೇ, ಅಜಿತ್ ಪವಾರ್ ನೇತೃತ್ವದ ಸಭೆ ಬಾಂದ್ರಾ ಸಬ್​ಅರ್ಬನ್​​ನಲ್ಲಿರುವ ಮುಂಬಯಿ ಶೈಕ್ಷಣಿಕ ಸಂಸ್ಥೆ (MET)ಆವರಣದಲ್ಲಿ ಮಧ್ಯಾಹ್ನ 11 ಗಂಟೆಗೆ ನಡೆದಿದೆ.

ಇದನ್ನೂ ಓದಿ: NCP Crisis: ಪವಾರ್​ vs ಪವಾರ್ ಸಭೆ ಇಂದು; ಎನ್​ಸಿಪಿ ಶಾಸಕ, ಸಂಸದರಿಗೆ ವಿಪ್​ ಜಾರಿ

ಶಿಂಧೆ ಬಣದಲ್ಲಿ ಅಸಮಾಧಾನ?

ಬಿಜೆಪಿ ಹಾಗೂ ಶಿವಸೇನೆ (ಏಕನಾಥ್‌ ಶಿಂಧೆ ಬಣ) ಮೈತ್ರಿ ಸರ್ಕಾರಕ್ಕೆ ಎನ್‌ಸಿಪಿ ಸೇರಿಕೊಂಡ ಬಳಿಕ ಏಕನಾಥ್‌ ಶಿಂಧೆ ಬಣದಲ್ಲಿ ಅಸಮಾಧಾನ ಭುಗಿಲೆದ್ದಿದೆ. “ನಮ್ಮ ಮೈತ್ರಿ ಸರ್ಕಾರದ ಭಾಗವಾಗಿ ಎನ್‌ಸಿಪಿ ಸೇರಿಕೊಂಡ ಬಳಿಕ ನಮ್ಮ ಶಾಸಕರಲ್ಲಿ ಅಸಮಾಧಾನ ಮೂಡಿದೆ. ಅಭಿವೃದ್ಧಿ ಕುಂಠಿತ, ಇದುವರೆಗೆ ರಾಜಕೀಯ ವೈರಿಗಳಾಗಿದ್ದವರ ಜತೆ ಸಖ್ಯ ಬೆಳೆಸುವುದು, ಪ್ರಮುಖ ನಾಯಕರಿಗೆ ಉತ್ತಮ ಸ್ಥಾನ ಸಿಗದಿರುವುದು ಸೇರಿ ಹಲವು ಕಾರಣಗಳಿಂದಾಗಿ ಅಸಮಾಧಾನ ಉಂಟಾಗಿದೆ. ಈ ಕುರಿತು ಶಿಂಧೆ ಅವರು ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು” ಎಂದು ಶಿಂಧೆ ಬಣದ ಶಿವಸೇನೆ ನಾಯಕ ಸಂಜಯ್‌ ಶಿರ್ಸಾತ್‌ ಹೇಳಿದ್ದಾರೆ. ಇನ್ನು ಖಾತೆ ಹಂಚಿಕೆ ಕುರಿತು ಕೂಡ ಗೊಂದಲ ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Exit mobile version