Site icon Vistara News

ಶಿಂಧೆ ಬಣದಿಂದ ಶಾಸಕ ವಾಪಸ್‌; ನನಗೆ ಬಲವಂತವಾಗಿ ಇಂಜೆಕ್ಷನ್‌ ಕೊಟ್ಟಿದ್ದಾರೆಂದ ನಿತಿನ್‌ ದೇಶ್‌ಮುಖ್‌

Nitin Deshmukh

ಮುಂಬೈ: ಮಹಾರಾಷ್ಟ್ರ ರಾಜಕೀಯ ಕ್ಷಣಕ್ಕೊಂದು ಬದಲಾವಣೆ ಕಾಣುತ್ತಿದೆ. ಶಿವಸೇನೆ ನಾಯಕ, ಸಚಿವ ಏಕನಾಥ್‌ ಶಿಂಧೆಯವರೊಂದಿಗೆ ಹೋಗಿದ್ದ ಶಾಸಕರಲ್ಲಿ ಒಬ್ಬರಾದ ನಿತಿನ್‌ ದೇಶ್‌ಮುಖ್‌ ಇದೀಗ ವಾಪಸ್‌ ಬಂದಿದ್ದಾರೆ. ಅಷ್ಟೇ ಅಲ್ಲ, ʼನಾನು ನಾನಾಗೇ ಇಷ್ಟಪಟ್ಟು ಹೋಗಿದ್ದಲ್ಲ, ನನ್ನನ್ನು ಕಿಡ್ನ್ಯಾಪ್‌ ಮಾಡಿ ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ನಲ್ಲಿ ಇಟ್ಟುಕೊಳ್ಳಲಾಗಿತ್ತು. ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದೆʼ ಎಂದು ಹೇಳಿದ್ದಾರೆ. ಜೂ. 20ರಂದು ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ಬಂದ ನಂತರ ಸಂಜೆ ಸುಮಾರು ಏಳುಗಂಟೆಯಿಂದ ಏಕನಾಥ್‌ ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರು ಸಂಪರ್ಕಕ್ಕೆ ಸಿಗದಂತಾಗಿದ್ದರು. ಅವರೆಲ್ಲ ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಮರುದಿನ ಅಂದರೆ ಜೂ.21ಕ್ಕೆ ನಿತಿನ್‌ ದೇಶ್‌ಮುಖ್‌ ಪತ್ನಿ ಪೊಲೀಸರಿಗೆ ದೂರು ನೀಡಿ, ನನ್ನ ಪತಿ ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಹೇಳಿದ್ದರು.

ಇಂದು ರೆಸಾರ್ಟ್‌ನಿಂದ ತಪ್ಪಿಸಿಕೊಂಡು ಬಂದ ದೇಶ್‌ಮುಖ್‌, ನಾನು ಸೋಮವಾರ ಮಧ್ಯರಾತ್ರಿ 12ಗಂಟೆ ಹೊತ್ತಿಗೆ ಹೋಟೆಲ್‌ನಿಂದ ಹೊರಟೆ. ಮುಂಜಾನೆ 3ಗಂಟೆವರೆಗೆ ರಸ್ತೆ ಮೇಲೆಯೇ ಇದ್ದೆ. ನನ್ನ ಹಿಂದೆ ಗುಜರಾತ್‌ನ 100ಕ್ಕೂ ಹೆಚ್ಚು ಪೊಲೀಸರು ಇದ್ದರು. ಅವರು ನನಗೆ ಹೃದಯಾಘಾತವಾಗಿದೆ ಎಂಬಂತೆ ಬಿಂಬಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋದರು. ನನ್ನ ಆರೋಗ್ಯಕ್ಕೆ ಏನೂ ಸಮಸ್ಯೆ ಆಗಿರಲಿಲ್ಲ, ಆದರೂ ನನಗೆ ಬಲವಂತವಾಗಿ ಇಂಜೆಕ್ಷನ್‌ ನೀಡಲಾಯಿತು. ಏನೇನೋ ತಪಾಸಣೆ ನಡೆಸಲಾಯಿತು ಎಂದು ವಿವರಿಸಿದ್ದಾರೆ. ಅಷ್ಟೇ ಅಲ್ಲ, ನನ್ನ ಬೆಂಬಲ ಯಾವತ್ತಿದ್ದರೂ ಉದ್ಧವ್‌ ಠಾಕ್ರೆಯವರಿಗೇ ಎಂದೂ ಘೋಷಿಸಿದ್ದಾರೆ.

ಇನ್ನು ನಿನ್ನೆ ನಿತಿನ್‌ ದೇಶ್‌ಮುಖ್‌ ಪತ್ನಿ ದೂರು ಕೊಟ್ಟ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಸಂಜಯ್‌ ರಾವತ್‌, ʼಶಾಸಕನನ್ನು ಮುಂಬೈನಿಂದ ಅಪಹರಣ ಮಾಡಲಾಗಿದೆ. ಅವರು ಸೋಮವಾರ (ಜೂ.20) ಮಧ್ಯರಾತ್ರಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಜರಾತ್‌ ಪೊಲೀಸರು ಹೊಡೆದಿದ್ದಾರೆ ಎಂದು ಟ್ವೀಟ್‌ ಮಾಡಿದ್ದರು. ಇನ್ನು ಬಂಡಾಯವೆದ್ದಿರುವ ಸುಮಾರು ೪೦ ಶಾಸಕರು ಗುಜರಾತ್‌ನ ರೆಸಾರ್ಟ್‌ನಿಂದ ಇಂದು ಮುಂಜಾನೆ ಅಸ್ಸಾಂನ ಗುವಾಹಟಿಗೆ ತಲುಪಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಶಿವಸೇನೆ ಸಂಸದ ಸಂಜಯ್‌ ರಾವತ್‌ !

Exit mobile version